ಚಾಮರಾಜನಗರದ ಆಕ್ಸಿಜನ್ ದುರಂತ: 24 ಮಂದಿ ಸಾವು ಪ್ರಕರಣ ರೋಹಿಣಿ ಸಿಂಧೂರಿಯದ್ದು ಏನೂ ತಪ್ಪಿಲ್ಲ
News

ಚಾಮರಾಜನಗರದ ಆಕ್ಸಿಜನ್ ದುರಂತ: 24 ಮಂದಿ ಸಾವು ಪ್ರಕರಣ ರೋಹಿಣಿ ಸಿಂಧೂರಿಯದ್ದು ಏನೂ ತಪ್ಪಿಲ್ಲ

March 16, 2022

ಬೆಂಗಳೂರು, ಮಾ.15-ಚಾಮರಾಜ ನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಯಲ್ಲಿ ಉಂಟಾದ ಲೋಪದ ಹಿನ್ನೆಲೆ ಯಲ್ಲಿ 24 ಕೊರೊನಾ ಸೋಂಕಿತರು ಸಾವನ್ನ ಪ್ಪಿದ್ದ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ನೇಮಿ ಸಿದ್ದ ಉಸ್ತುವಾರಿ ಸಮಿತಿಯು, ಮೈಸೂರು ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕ್ಲೀನ್ ಚಿಟ್ ನೀಡಿದೆ.

ಹೈಕೋರ್ಟ್‍ನ ನಿವೃತ್ತ ನ್ಯಾಯ ಮೂರ್ತಿ ಎ.ಎನ್.ವೇಣುಗೋಪಾಲಗೌಡ ಅವರ ಅಧ್ಯಕ್ಷತೆಯ ಸಮಿತಿಯು ನೀಡಿದ ವರದಿಯಲ್ಲಿ ರೋಗಿಗಳಿಗೆ ಸಕಾಲದಲ್ಲಿ ಆಕ್ಸಿಜನ್ ಒದಗಿಸುವಲ್ಲಿ ದಿವ್ಯ ನಿರ್ಲಕ್ಷ್ಯ ತೋರಿದ್ದೇ 2021ರ ಮೇ 2ರಂದು ಮಧ್ಯ ರಾತ್ರಿ ಹಾಗೂ ಮೇ 3ರ ಬೆಳಗಿನ ಜಾವ 24 ಕೊರೊನಾ ಸೋಂಕಿತರು ಸಾವಿಗೀಡಾ ಗಲು ಕಾರಣ ಎಂದು ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯ ಅಗತ್ಯ ಪೂರೈ ಸಿದ ನಂತರ ಉಳಿದ ಜಿಲ್ಲೆಗಳಿಗೆ ಆಕ್ಸಿಜನ್ ಪೂರೈಸಬೇಕು ಎಂದು ಆಮ್ಲಜನಕ ಭರ್ತಿ ಘಟಕಗಳಿಗೆ ರೋಹಿಣಿ ಸಿಂಧೂರಿ ಯವರು ನಿರ್ದೇಶಿಸಿದ್ದರು ಎಂಬ ಆರೋಪ ಹಾಗೂ ಘಟನೆ ನಡೆದ ದಿನದಂದು ಅವರು ಸೂಕ್ತವಾಗಿ ಸ್ಪಂದಿಸಲಿಲ್ಲ ಎಂಬ ಆರೋಪ ಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಸಮಿತಿಯು ಇಂತಹ ದುರ್ಘಟನೆಗಳು ನಡೆಯುವು ದನ್ನು ತಪ್ಪಿಸಲು ಹಲವು ಶಿಫಾರಸುಗಳನ್ನು ನೀಡಿದೆ. ಅಲ್ಲದೇ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಹತ್ತಿರದ ಸಂಬಂಧಿಗಳಿಗೆ ನೀಡಬೇಕಾದ ಪರಿಹಾರವನ್ನು ನ್ಯಾಯಾಲಯ ನಿಗದಿಪಡಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಘಟನೆ ನಡೆದ ದಿನ ಸ್ಥಳದಲ್ಲಿನ ಸಿಸಿ ಕ್ಯಾಮರಾ ಅಥವಾ ಡಿವಿಆರ್‍ನಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತಮ್ಮ ವಶದಲ್ಲೇ ಇರಿಸಿಕೊಳ್ಳಬೇಕು ಎಂದು ತಿಳಿಸಿದರು. ಆಸ್ಪತ್ರೆಗಳಿಗೆ ಆಮ್ಲಜನಕ ವಿತರಣೆ ವಿಷಯದಲ್ಲಿ ಸಮನ್ವಯ ಸಾಧಿಸಲು ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ಆಯಾ ಜಿಲ್ಲಾಧಿಕಾರಿ ಅಥವಾ ಅವರಿಗಿಂತಲೂ ಉನ್ನತ ಹುದ್ದೆಯ ಅಧಿಕಾರಿಗಳನ್ನು ನೇಮಕ ಮಾಡಬೇಕು. ಮೈಸೂರಿನಲ್ಲಿರುವ ಆಕ್ಸಿಜನ್ ಬಾಟ್ಲಿಂಗ್ ಹಾಗೂ ಪುನರ್ ಭರ್ತಿ ಘಟಕಗಳಿಂದ ಅಗತ್ಯಕ್ಕನುಗುಣವಾಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ರವಾನೆ ಮಾಡುವ ನಿಟ್ಟಿನಲ್ಲಿ ಮೈಸೂರು ಪ್ರಾದೇಶಿಕ ಆಯುಕ್ತರು ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಜೊತೆಗೆ ಸಮನ್ವಯ ಸಾಧಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.

ಎಲ್ಲಾ ಆಸ್ಪತ್ರೆಗಳಲ್ಲೂ 24 ಗಂಟೆಗಿಂತಲೂ ಮುಂಚೆಯೇ ಆಮ್ಲಜನಕವನ್ನು ಕನಿಷ್ಠ ಪಕ್ಷ ತುರ್ತು ಸಮಯದಲ್ಲಿ ಸಿಗುವಂತೆ ಸಂಗ್ರಹ ಮಾಡಬೇಕು. ದಾಖಲೆ ನಿರ್ವಹಣೆ, ಆಕ್ಸಿಜನ್ ದಾಸ್ತಾನು, ಅದರ ಬಳಕೆ ಹಾಗೂ ಉಳಿಕೆಯ ಪ್ರಕ್ರಿಯೆಗಳು ರಾಜ್ಯಾದ್ಯಂತ ಏಕ ರೂಪದಲ್ಲಿರಬೇಕು. ಆಕ್ಸಿಜನ್ ಉಳಿಕೆ ಹಾಗೂ ದಾಸ್ತಾನು ವಿವರಗಳು ಆಸ್ಪತ್ರೆಗಳ ಡಿಜಿಟಲ್ ಪರದೆಯಲ್ಲಿ ಪ್ರದರ್ಶಿಸುವಂತಾಗಬೇಕು. ವೈದ್ಯಕೀಯ ಉದ್ದೇಶಗಳಿಗೆ ಅನುಗುಣವಾಗಿ ಆಕ್ಸಿಜನ್ ಸಿಲಿಂಡರ್‍ಗಳನ್ನು ಹೊತ್ತೊಯ್ಯುವ ವಾಹನಗಳಿಗೆ ಜಿಪಿಎಸ್ ಅಳವಡಿಸಿರಬೇಕು. ಅಂತಹ ಟ್ರಕ್ಕುಗಳು ಸಂಪೂರ್ಣ ಹೊದಿಕೆ ಹೊದ್ದಿರಬೇಕು. ಟ್ರಕ್‍ಗಳು ಹೊರಡುವ ಸ್ಥಳದಲ್ಲೇ ಸಂಪೂರ್ಣವಾಗಿ ಸೀಲ್ ಮಾಡಬೇಕು. ಅದನ್ನು ರವಾನೆದಾರ ಮಾತ್ರವೇ ತೆರೆಯಲು ಅವಕಾಶವಿರಬೇಕು. ಮೈಸೂರಿನಲ್ಲಿರುವ ಮೆ|| ತ್ರಿನೇತ್ರ ಬಾಟ್ಲಿಂಗ್ ಘಟಕ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ವಿಪ್ಪತ್ತಿನ ಸಮಯದಲ್ಲಿ ಸರ್ಕಾರ ಅದನ್ನು ವಶಕ್ಕೆ ಪಡೆದು ಪುನರುಜ್ಜೀವನಗೊಳಿಸುವ ಬಗ್ಗೆ ಪರಿಣಾಮಕಾರಿ ಹೆಜ್ಜೆ ಇರಿಸಬಹುದು. ಪ್ರತೀ ಆಸ್ಪತ್ರೆಯಲ್ಲೂ ಮಾನವ ಸಂಪನ್ಮೂಲದ ಜೊತೆಗೆ ಮೂಲ ಸೌಕರ್ಯ ಹೆಚ್ಚಿಸುವ ಬಗ್ಗೆ ನಿಗಾ ವಹಿಸಬೇಕು ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್.ಗೋಪಾಲಗೌಡ ಅವರ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಸದಸ್ಯರಾಗಿ ಕೆ.ಎನ್.ಕೇಶವ ನಾರಾಯಣ, ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಟಿ.ರಮೇಶ್, ನಿವೃತ್ತ ಐಎಎಸ್ ಅಧಿಕಾರಿ ವಿ.ಪಿ.ಬಳಿಗಾರ್ ಇದ್ದರು.

Translate »