`ಪರ್ವ’ ನಾಟಕ ಫೆಬ್ರವರಿ ಇಲ್ಲವೇ ಮಾರ್ಚ್‍ನಿಂದ ಪ್ರದರ್ಶನ
ಮೈಸೂರು

`ಪರ್ವ’ ನಾಟಕ ಫೆಬ್ರವರಿ ಇಲ್ಲವೇ ಮಾರ್ಚ್‍ನಿಂದ ಪ್ರದರ್ಶನ

January 14, 2021

ಮೈಸೂರು,ಜ.13(ಪಿಎಂ)- ಖ್ಯಾತ ಕಾದಂಬರಿಕಾರ, ಹಿರಿಯ ಸಾಹಿತಿಯೂ ಆದ ಸರಸ್ವತಿ ಸಮ್ಮಾನ್ ಹಾಗೂ ಪದ್ಮಶ್ರೀ ಪುರಸ್ಕøತ ಡಾ.ಎಸ್.ಎಲ್.ಭೈರಪ್ಪ ಅವರ `ಪರ್ವ’ ಕಾದಂಬರಿಗೆ ರಂಗಾಯಣದ ವತಿಯಿಂದ ರಂಗರೂಪದ ಸ್ಪರ್ಶ ನೀಡಲಾಗಿದೆ. ಇದೀಗ ನಾಟಕದ ತಾಲೀಮು ನಡೆಯುತ್ತಿದ್ದು, ಫೆಬ್ರವರಿ ಕೊನೆ ವಾರದಲ್ಲಿ ರಂಗಾಯಣದಲ್ಲಿ `ಪರ್ವ’ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.

ಜೊತೆಗೆ ರಾಜ್ಯದ ವಿವಿಧ ಭಾಗಗಳು ಹಾಗೂ ಹೊರ ರಾಜ್ಯಗಳಲ್ಲಿ ಪರ್ವ ಪ್ರದರ್ಶಿಸಲು ಸಿದ್ಧತೆ ನಡೆಸಿರುವ ರಂಗಾಯಣ, ಇದಕ್ಕಾಗಿ ತನ್ನ ವಾರ್ಷಿಕ ಅನುದಾನದಲ್ಲಿ 10 ಲಕ್ಷ ರೂ. ಮೀಸಲಿರಿಸಿದೆಯಲ್ಲದೆ, 50 ಲಕ್ಷ ರೂ. ಅನುದಾನ ನೀಡಬೇಕೆಂದು ಸರ್ಕಾರದ ಮುಂದೆ ಬೇಡಿಕೆ ಇಡಲು ಮುಂದಾಗಿದೆ. ಒಟ್ಟಾರೆ 60 ಲಕ್ಷ ರೂ. ವೆಚ್ಚದಲ್ಲಿ ಪರ್ವದ ಬೃಹತ್ ಸರಣಿ ಪ್ರದರ್ಶನಕ್ಕೆ ಯೋಜನೆ ರೂಪಿಸಲಾಗಿದೆ.

ಮೈಸೂರಿನ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಪರ್ವ ನಾಟಕ ಪ್ರದರ್ಶನ ರಂಗಾಯಣದಿಂದ ಮಾತ್ರ ಸಾಧ್ಯ ಎಂಬ ಸವಾಲಿನಿಂದ ಸಿದ್ಧತೆ ನಡೆಸುತ್ತಿದ್ದೇವೆ. ಕಾರಣ ಇದು ಸಾಧಾರಣ ನಾಟಕವಲ್ಲ. ಏಳೂವರೆ ಗಂಟೆ ಅವಧಿಯ ಬೃಹತ್ ಪ್ರದರ್ಶನ. ಈ ಅವಧಿಯಲ್ಲಿ ನಾಲ್ಕು ವಿರಾಮಕ್ಕೆ ವ್ಯವಸ್ಥೆ ಮಾಡಿದ್ದೇವೆ. ಈ ವಿರಾಮದಲ್ಲೂ ಪರ್ವದ ಬಗ್ಗೆ ನೋಡಿ ತಿಳಿಯಲು ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಸೃಜಿಸಲು ಹೊರಟಿದ್ದೇವೆ ಎಂದರು.

ರಂಗಾಯಣದ 13 ಕಲಾವಿದರು, 17 ಮಂದಿ ಹವ್ಯಾಸಿ ಕಲಾ ವಿದರು, ತಂತ್ರಜ್ಞರು 10 ಸೇರಿದಂತೆ ಒಟ್ಟು 40 ಮಂದಿಯ ತಂಡ ಈಗಾಗಲೇ ತಾಲೀಮು ನಡೆಸುತ್ತಿದೆ. ನಿನ್ನೆ ಎಸ್.ಎಲ್.ಭೈರಪ್ಪ ಅವರು ರಂಗಾಯಣಕ್ಕೆ ಭೇಟಿ ನೀಡಿ 1 ಗಂಟೆಗೂ ಹೆಚ್ಚು ಕಾಲ ತಾಲೀಮು ವೀಕ್ಷಿಸಿದರು. ಈಗ 2 ಬಾರಿ ತಾಲೀಮು ವೀಕ್ಷಿಸಿ, ಪ್ರದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೆ ಎರಡು ಬಾರಿ ತಾಲೀಮು ನೋಡಲು ಬರುವುದಾಗಿ ತಿಳಿಸಿದ್ದಾರೆ ಎಂದರು.

ಫೆಬ್ರವರಿ ಕೊನೆ ವಾರದಿಂದ ಮೂರು ತಿಂಗಳ ಕಾಲ ರಂಗಾ ಯಣದಲ್ಲಿ ಪರ್ವ ನಾಟಕ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳ ಲಾಗುತ್ತಿದೆ. ಈ ನಡುವೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ ಕೊನೆ ವಾರ ಹಾವೇರಿಯಲ್ಲಿ ನಡೆಸಲು ಉದ್ದೇಶಿಸ ಲಾಗಿದೆ ಎಂಬ ಮಾಹಿತಿ ಇದೆ. ಒಂದು ವೇಳೆ ಸಮ್ಮೇಳನ ಫೆಬ್ರವರಿ ಕೊನೆ ವಾರದಲ್ಲೇ ನಡೆದರೆ, ರಂಗಾಯಣದಲ್ಲಿ ಮಾ.1ರಂದು ಪರ್ವ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಬಳಿಕ ಮಾರ್ಚ್, ಏಪ್ರಿಲ್, ಮೇ ಸೇರಿದಂತೆ 3 ತಿಂಗಳು ರಂಗಾಯಣ ದಲ್ಲಿ ಪರ್ವ ಪ್ರದರ್ಶನಗೊಳ್ಳಲಿದೆ. `ರಾಮಾಯಣ ದರ್ಶನಂ’ 5 ಗಂಟೆ ಅವಧಿ ನಾಟಕ ಪ್ರದರ್ಶನ ಮಾಡಿ ಯಶಸ್ವಿಯಾಗಿ ದ್ದೇವೆ. ಇದು ಏಳೂವರೆ ಗಂಟೆ ಅವಧಿ ಪ್ರದರ್ಶನ. ಬೆಳಗ್ಗೆಯಿಂದ ಸಂಜೆವರೆಗೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

ರಂಗಾಯಣದಲ್ಲಿ ಪ್ರದರ್ಶನ ಮುಗಿದ ಬಳಿಕ ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಲ್ಲಿ ತಲಾ 2 ಪ್ರದರ್ಶನ ನೀಡಲು ಉದ್ದೇ ಶಿಸಲಾಗಿದೆ. ಅನಂತರ ಹೊರ ರಾಜ್ಯಗಳ ಐದು ಸ್ಥಳಗಳಲ್ಲಿ ಪ್ರದರ್ಶನ ನೀಡಬೇಕೆಂದು ಯೋಜನೆ ಹಾಕಿಕೊಂಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಶಾಸಕ ಎಲ್.ನಾಗೇಂದ್ರ ಸರ್ಕಾರದಿಂದ ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ ಎಂದರು. ರಂಗನಿರ್ದೇಶಕ ಪ್ರಕಾಶ್ ಬೆಳವಾಡಿ ರಚಿಸಿ ರುವ ಪರ್ವದ ರಂಗ ಪಠ್ಯವನ್ನು ಸಾಹಿತ್ಯ ಭಂಡಾರ ಪ್ರಕಾಶನ ಪುಸ್ತಕ ಪ್ರಕಟ ಮಾಡುತ್ತಿದೆ. `ಮೇಕಿಂಗ್ ಆಫ್ ಪರ್ವ’ ಶೀರ್ಷಿಕೆಯಡಿ ರಂಗ ರೂಪುಗೊಂಡ ಸಂಬಂಧ ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಪರ್ವ ನಾಟಕ ಪ್ರದರ್ಶನದ ಟಿಕೆಟ್ ದರ ಸದ್ಯ ನಿಗದಿಯಾಗಿಲ್ಲ ಎಂದರು.

Translate »