`ಸೀತಾ ಸ್ವಯಂವರಂ’ ನಾಟಕ ಪ್ರದರ್ಶನ
ಮೈಸೂರು

`ಸೀತಾ ಸ್ವಯಂವರಂ’ ನಾಟಕ ಪ್ರದರ್ಶನ

January 14, 2021

ಮೈಸೂರು,ಜ.13(ಪಿಎಂ)-ರಂಗಭೀಷ್ಮ ಬಿ.ವಿ.ಕಾರಂತರ ಸಾರಥ್ಯದಲ್ಲಿ ಮೈಸೂರು ರಂಗಾಯಣ ಸ್ಥಾಪನೆ ದಿನವಾದ ನಾಳೆ (ಜ.14) ರಂಗಾಯಣಕ್ಕೆ ಮಹತ್ವದ ದಿನ. ಈ ದಿನವನ್ನು ಅರ್ಥ ಪೂರ್ಣಗೊಳಿಸುವ ನಿಟ್ಟಿನಲ್ಲಿ ರಂಗಾಯಣದಲ್ಲಿ ನಾಳೆ `ಸುಬ್ಬಯ್ಯ ನಾಯ್ಡು ಅಭಿನಯ ರಂಗತರಬೇತಿ ಕಾರ್ಯಾಗಾರ’ದ ಸಮಾರೋಪ ಸಮಾರಂಭ ಹಾಗೂ `ಸೀತಾ ಸ್ವಯಂವರಂ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

ಮೈಸೂರಿನ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 1989 ಜ.14ರಂದು ರಂಗಭೀಷ್ಮ ಬಿ.ವಿ.ಕಾರಂತರ ಸಾರಥ್ಯದಲ್ಲಿ ಮೈಸೂರು ರಂಗಾಯಣ ಸ್ಥಾಪನೆ ಗೊಂಡಿತು. ಆ ದಿನಗಳಲ್ಲಿ ಕಾರಂತರಿಗೆ ಹೆಗಲು ಕೊಟ್ಟವರಲ್ಲಿ ಮೈಸೂರಿನ ಹವ್ಯಾಸಿ ಕಲಾವಿದರ ಪಾತ್ರ ಪ್ರಮುಖ ಎಂದರು.

ಹವ್ಯಾಸಿ ರಂಗಭೂಮಿ ಕಲಾವಿದರೂ ರಂಗಾಯಣದಲ್ಲಿ ಬೆರೆಯ ಬೇಕೆಂಬ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸ ಲಾಗಿದೆ. ಈ ಪೈಕಿ `ಸುಬ್ಬಯ್ಯನಾಯ್ಡು ಅಭಿನಯ ರಂಗತರಬೇತಿ ಕಾರ್ಯಾಗಾರ’ ಕೂಡ ಒಂದು. ನಾಡಿನ ಹೆಸರಾಂತ ವೃತ್ತಿ ರಂಗ ಭೂಮಿ ನಟ, ಮೈಸೂರಿನವರೇ ಆದ ದಿ.ಸುಬ್ಬಯ್ಯನಾಯ್ಡು ಅವರ ಹೆಸರಿನಲ್ಲಿ ಆರಂಭಿಸಿದ ರಂಗತರಬೇತಿ ಕಾರ್ಯಾಗಾರದಲ್ಲಿ ಯುವಕರು ಹಾಗೂ ಯುವತಿಯರು ಸೇರಿದಂತೆ 26 ಮಂದಿ ಹವ್ಯಾಸಿ ಕಲಾವಿದರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿತ್ತು. ಅವರಿಗೆ ರಂಗಭೂಮಿಯ ವಿವಿಧ ಆಯಾಮಗಳಾದ ಅಭಿನಯ, ಬೆಳಕು, ವಸ್ತ್ರಾಲಂಕಾರ, ಪ್ರಸಾದನ, ದೇಹಭಾಷೆ ಹಾಗೂ ರಂಗ ತಂತ್ರಗಳ ಕುರಿತಂತೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಇದೀಗ ಅಂತಿಮವಾಗಿ ಈ ಶಿಬಿರಾರ್ಥಿಗಳು ಜೀವನ್‍ಕುಮಾರ್ ಬಿ.ಹೆಗ್ಗೋಡು ನಿರ್ದೇಶನದಲ್ಲಿ `ಸೀತಾ ಸ್ವಯಂವರಂ’ ನಾಟಕ ಪ್ರದರ್ಶಿಸಲು ಸಿದ್ಧವಾಗಿದ್ದಾರೆ. ಎಂ.ಎಲ್.ಶ್ರೀಕಂಠೇಗೌಡ ರಚನೆಯ ಈ ನಾಟಕ ನಾಳೆ ಸಂಜೆ 6.30ಕ್ಕೆ ರಂಗಾಯಣದ ವನರಂಗದಲ್ಲಿ ಪ್ರದರ್ಶನಗೊಳ್ಳಲಿದೆ. ಇದಕ್ಕೆ 50 ರೂ.ಗಳ ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದರು. ನಾಟಕ ಪ್ರದರ್ಶನಕ್ಕೂ ಮುನ್ನ ಕಾರ್ಯಾ ಗಾರದ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಾ ಗಾರದ ಪ್ರಮುಖ ಅಂಶಗಳನ್ನು ಒಳಗೊಂಡ ಕೈಪಿಡಿಯನ್ನು ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣೀಶ್ ಬಿಡುಗಡೆ ಮಾಡಲಿದ್ದಾರೆ. ಅತಿಥಿಯಾಗಿ ಹಿರಿಯ ರಂಗನಿರ್ದೇ ಶಕ ಪ್ರೊ.ಹೆಚ್.ಎಸ್.ಉಮೇಶ್ ಪಾಲ್ಗೊಳ್ಳಲಿದ್ದಾರೆ. ಇದೇ ನಾಟಕ ಜ.17, 24, 31ರಂದು ಪ್ರದರ್ಶನ ಮಾಡಲಾಗುವುದು ಎಂದರು.

ತರಬೇತಿಯಲ್ಲಿ ಶೇ.60ರಷ್ಟು ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿ ಗಳು ಭಾಗವಹಿಸಿರುವುದು ವಿಶೇಷ. ಸರ್ಕಾರ ರಂಗಾಯಣಕ್ಕೆ ನೀಡುವ ಅನುದಾನ ಹವ್ಯಾಸಿ ಕಲಾವಿದರಿಗೂ ತಲುಪಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಇದರ ಜೊತೆಗೆ ಪದ್ಮಶ್ರೀ ನಾಗರತ್ನಮ್ಮ ಮಹಿಳಾ ಅಭಿಯನ ಕಾರ್ಯಾಗಾರವೂ ರಂಗಾಯಣದಲ್ಲಿ ನಡೆಯುತ್ತಿದೆ. ಕಳೆದ ನ.15ರಿಂದ ಈ ಕಾರ್ಯಾ ಗಾರ ಪ್ರಾರಂಭವಾಗಿದೆ. ಇದೇ ಫೆ.16ಕ್ಕೆ ಇದು ಮುಕ್ತಾಯ ಗೊಳ್ಳಲಿದೆ ಎಂದರು. ಕೊರೊನಾ ಲಾಕ್‍ಡೌನ್ ವೇಳೆ ನಮ್ಮ ಹವ್ಯಾಸಿ ಕಲಾವಿದರು ಕಷ್ಟದಲ್ಲಿದ್ದಾಗ, ನಮ್ಮ ರಂಗಾಯಣ ಕಲಾ ವಿದರು ತಮ್ಮ ವೇತನದಲ್ಲಿ ಒಂದು ಭಾಗವನ್ನು ಆಸಕ್ತ ಹವ್ಯಾಸಿ ಕಲಾವಿದರಿಗೆ ನೀಡಿದ್ದಾರೆ. ಜೊತೆಗೆ ಈ ರೀತಿ ಕಾರ್ಯಾಗಾರದ ಮೂಲಕ ಹಲವು ಹವ್ಯಾಸಿ ಕಲಾವಿದರಿಗೆ ಉದ್ಯೋಗ ಸೃಜಿಸ ಲಾಗಿದೆ. ದಿ.ಸುಬ್ಬಯ್ಯ ನಾಯ್ಡು ಹೆಸರಿನ ರಂಗತರಬೇತಿಯಲ್ಲಿ ಭಾಗಿಯಾದ 26 ಮಂದಿಯಲ್ಲಿ 10 ಮಂದಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರೆ ನಮ್ಮ ಶ್ರಮ ಸಾರ್ಥಕ ಎಂದರು. ರಂಗಾ ಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ರಂಗಾಯಣದ ಹಿರಿಯ ಕಲಾವಿದೆ ಗೀತಾ ಮೋಂಟಡ್ಕ, ಹಿರಿಯ ಕಲಾವಿದ ಅರಸೀಕೆರೆ ಯೋಗಾನಂದ ಗೋಷ್ಠಿಯಲ್ಲಿದ್ದರು.

Translate »