ಕಾಲಕ್ಕೆ ತಕ್ಕಂತೆ ಧರ್ಮವೂ ಬದಲಾಗಬೇಕು
ಮೈಸೂರು

ಕಾಲಕ್ಕೆ ತಕ್ಕಂತೆ ಧರ್ಮವೂ ಬದಲಾಗಬೇಕು

January 18, 2021

ಒಂದಿಷ್ಟು ಚಿಂತಿಸಿ’ ಕಿರುಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕುಂದೂರು ಶ್ರೀ ಹಿತವಚನ
ಮೈಸೂರು, ಜ.17(ಎಸ್‍ಪಿಎನ್)- ಕಾಲಕ್ಕೆ ತಕ್ಕಂತೆ ಧರ್ಮ ಬದಲಾಗಬೇಕು. ನಾವು ಆಚರಿಸುವ ಧರ್ಮಗಳು ಸದಾ ಮಾನವೀಯ ನೆಲೆಗಟ್ಟಿನ ಕಡೆಗೆ ಚಲಿಸು ತ್ತಿರಬೇಕು ಎಂದು ಕುಂದೂರು ಮಠದ ಶ್ರೀ ಶರತ್‍ಚಂದ್ರ ಸ್ವಾಮೀಜಿ ಹೇಳಿದರು.

ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವದಳ, ಲಿಂಗಾಯತ ಸಾಂಸ್ಕøತಿಕ ಸಮಿತಿ ಹಾಗೂ ಬಸವಕೇಂದ್ರ ಮತ್ತು ತರಳಬಾಳು ಸಮಾಗಮ ಜಂಟಿಯಾಗಿ ಶಂಕರಮಠ ರಸ್ತೆಯ ನಟರಾಜ ಸಭಾಭವನ ದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಯುವ ಪೀಳಿಗೆ ಪುರಾಣಕ್ಕೂ, ಇತಿಹಾಸಕ್ಕೂ ಇರುವ ವ್ಯತ್ಯಾಸ ಅರಿಯಬೇಕು. ಈ ಹಿಂದೆ ಕವಿಗಳು ಮಠ ಪರಂಪರೆ ಬಗ್ಗೆ ದಾಖಲಿಸುವಾಗ ಕೆಲವು ಘಟನೆಗಳನ್ನು ವೈಭವೀಕರಿಸುತ್ತಿದ್ದರು. ಒಂದು ಸುಳ್ಳನ್ನು ನೂರು ಬಾರೀ ಹೇಳಿ ಸತ್ಯವೆಂಬಂತೆ ಬಿಂಬಿಸಲಾಗಿದೆ. ಈ ಪುಸ್ತಕದಲ್ಲಿ ಹೃದಯದೊಳಗಿನ ಮಾತು ದಾಖಲಾಗಿದೆ ಎಂದರು.

ಲೇಖಕ ಹಾಗೂ ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪ ರಚಿಸಿದ `ಒಂದಿಷ್ಟು ಚಿಂತಿಸಿ’ ಕಿರುಕೃತಿಯನ್ನು ಶ್ರೀ ಬಸವೇಶ್ವರ ಅಧ್ಯಯನ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರಯ್ಯ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, `ಒಂದಿಷ್ಟು ಚಿಂತಿಸಿ’ ಕೃತಿಯು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತಿದೆ. ಪುಸ್ತಕದಲ್ಲಿ ಶರಣರ ಚಿಂತನೆ, ಬಸವತತ್ವದ ಮಹತ್ವದ ಮಾಹಿತಿ ಇದೆ. 12ನೇ ಶತಮಾನದ ವಚನ ಚಳವಳಿ, ಶರಣರ ಸಂದೇಶಗಳು, ಬಸವತತ್ವದ ಬಗ್ಗೆ ಚುಟುಕಾಗಿ, ಜನರಿಗೆ ಅರ್ಥವಾಗುವ ರೀತಿ ಉಲ್ಲೇಖಿಸಿದ್ದಾರೆ ಎಂದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿದರು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ನೀಲಕಂಠ ಮಠದ ಶ್ರೀ ಸಿದ್ದಮಲ್ಲಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಮಹಾದೇವಪ್ಪ, ಕಾರ್ಯದರ್ಶಿ ಬಿ.ಎಂ.ಮರಪ್ಪ, ಮಡ್ಡಿಕೆರೆ ಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

 

Translate »