ಸಣ್ಣ ರೈತರಿಗೆ ಪಿಂಚಣಿ, ಲಕ್ಷ ರೂ. ಬಡ್ಡಿರಹಿತ ಸಾಲ
ಮೈಸೂರು

ಸಣ್ಣ ರೈತರಿಗೆ ಪಿಂಚಣಿ, ಲಕ್ಷ ರೂ. ಬಡ್ಡಿರಹಿತ ಸಾಲ

April 9, 2019

ನವದೆಹಲಿ: ಭಾರತೀಯ ಜನತಾ ಪಾರ್ಟಿಯ ಬಹುನಿರೀಕ್ಷೆಯ ಲೋಕಸಭೆ ಚುನಾವಣೆ 2019ರ ಪ್ರಣಾಳಿಕೆ ‘ಸಂಕಲ್ಪ ಪತ್ರ’ ಹೊರಬಿದ್ದಿದೆ. ದೆಹಲಿಯಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ಅರುಣ್‍ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಪ್ರಣಾಳಿಕೆಯನ್ನು 12 ಭಾಗಗಳಾಗಿ ವಿಂಗಡಿ ಸಲಾಗಿದ್ದು ‘ಸಂಕಲ್ಪದ ಭಾರತ, ಸಶಕ್ತ ಭಾರತ’ ಪ್ರಣಾಳಿಕೆಯ ಧ್ಯೇಯವಾಕ್ಯವಾಗಿದೆ. ಪ್ರಣಾಳಿಕೆ ಯಲ್ಲಿ 75 ಘೋಷಣೆಗಳನ್ನು ಮಾಡಲಾಗಿದೆ.

ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಯನ್ನೇ ಮೂಲವನ್ನಾಗಿ ಆಧರಿಸಿ ಬಿಜೆಪಿ ತನ್ನ ಪ್ರಣಾಳಿಕೆ ತಯಾರಿಸಿದೆ. ಚುನಾವಣೆಯ ದೃಷ್ಟಿಯಿಂದ ಮತದಾರನಿಗೆ ಒಳ್ಳೆಯ ಭರವಸೆಗಳನ್ನು ನೀಡಲಾ ಗಿದೆ. ದೇಶದ ಭದ್ರತೆ, ಆರ್ಥಿಕತೆ ಮತ್ತು ಇತರ ಕಲ್ಯಾಣ ಯೋಜನೆಗಳ ಭರವಸೆಯನ್ನು ಬಿಜೆಪಿ ನೀಡಿದೆ. ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಟ್ಯಾಗ್‍ಲೈನ್ ಅನ್ನು ಚುನಾವಣೆ ಪ್ರಣಾಳಿಕೆಯಲ್ಲಿ ಬಳಸಲಾಗಿದೆ. ಪ್ರಣಾಳಿಕೆ ಬಿಡುಗಡೆ ಮಾಡಿ ಮಾತ ನಾಡಿದ ರಾಜನಾಥ್ ಸಿಂಗ್, ಬಿಜೆಪಿ ಸಂಕಲ್ಪ ಪತ್ರದಲ್ಲಿ ನೀಡಿರುವ ಎಲ್ಲಾ ಭರವಸೆಗಳು ಮತ್ತು ಆಶೋತ್ತರಗ ಳೊಂದಿಗೆ ನಾವು ನವ ಭಾರತದ ನಿರ್ಮಾಣಕ್ಕಾಗಿ ಮುಂದಿನ ಹೆಜ್ಜೆ ಇಡುತ್ತೇವೆ. ಪ್ರಸ್ತುತ ಭಾರತ ದೇಶ ವಿಶ್ವದಲ್ಲಿ ಆರ್ಥಿಕತೆಯಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಬದಲಾಗಿದ್ದು, ನಮಗೆಲ್ಲ ಹೆಮ್ಮೆಯ ವಿಷಯ. ಈ ನಿಟ್ಟಿನಲ್ಲಿ ವಿಶ್ವದಲ್ಲಿ ಆರ್ಥಿಕವಾಗಿ ಪ್ರಬಲತೆ ಹೊಂದುತ್ತಿರುವ ದೇಶಗಳ ಸಾಲಿನಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಭಾರತ ಸ್ಥಾನ ಪಡೆಯಬೇಕೆಂಬುದು ನಮ್ಮ ಗುರಿಯಾಗಿದೆ ಎಂದರು. ಕೃಷಿ ವಲಯಕ್ಕೆ 25 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.ಕಿಸಾನ್ ಸಮ್ಮಾನ್ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿದೆ. ಸಣ್ಣ ಉದ್ಯಮಿಗಳು, ವ್ಯಾಪಾರಸ್ಥರಿಗೆ ಪಿಂಚಣಿ ಯೋಜನೆ, 60 ವರ್ಷ ಪೂರೈಸಿದ ರೈತರಿಗೆ ಕಿಸಾನ್ ಪಿಂಚಣಿ ಯೋಜನೆಯನ್ನು ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಜಾರಿಗೆ ತರಲಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ಕಳೆದ 5 ವರ್ಷಗಳಲ್ಲಿ ಯಾವುದೇ ಹಗರಣ ಗಳು ನಡೆದಿಲ್ಲ, ದೇಶದ ಭದ್ರತೆಗೆ ಆದ್ಯತೆ ನೀಡಲಾಗಿದ್ದು, ಭಯೋತ್ಪಾದನೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ, ಉಗ್ರರನ್ನು ಸದೆಬಡಿಯಲು ದೇಶದ ಸೇನೆಗೆ ಮುಕ್ತ ಸ್ವಾತಂತ್ರ್ಯದ ನೀತಿ ನೀಡಿದ್ದೇವೆ. ಉಗ್ರರ ಸಂಪೂರ್ಣ ನಿಗ್ರಹವಾಗುವವರೆಗೆ ಶೂನ್ಯ ಸಹಿಷ್ಣುತೆ ನೀತಿ ಜಾರಿಯಲ್ಲಿರುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಮಂದಿರ ನಿರ್ಮಾಣ: ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಬಿಜೆಪಿ ಬದ್ಧವಾಗಿದ್ದು , ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಕೂಡ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ, ಜಿಎಸ್‍ಟಿ ವ್ಯವಸ್ಥೆಯ ಸರಳೀಕರಣ, ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬಿ, ಕೃಷಿ, ಗ್ರಾಮೀಣ ಅಭಿವೃದ್ಧಿಗಾಗಿ 25 ಲಕ್ಷ ಕೋಟಿ ಅನುದಾನ, ರಾಷ್ಟ್ರೀಯ ವ್ಯಾಪಾರಿ ಆಯೋಗ ರಚನೆ, 75 ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ, 5 ಕಿ.ಮೀ. ಅಂತರದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ, ನ್ಯಾಯಾಲಯಗಳ ಸಂಪೂರ್ಣ ಡಿಜಿಟಲೀಕರಣ, ಡಿಜಿಟಲ್ ಬ್ಯಾಂಕಿಂಗ್‍ಗೆ ಉತ್ತೇಜನ, ಅಸಂಘಟಿತ ಕಾರ್ಮಿಕರಿಗೆ ಪೆನ್ಷನ್, ವಿಮೆ, ತ್ರಿವಳಿ ತಲಾಖ್ ನಿಷೇಧ ಜಾರಿಗೆ ಕ್ರಮ, 2022ರ ವೇಳೆಗೆ ಕ್ಲೀನ್ ಗಂಗಾ ಪೂರ್ಣ, ಬಿಜೆಪಿಯ ಸಂಕಲ್ಪ ಪತ್ರದ ಭರವಸೆಗಳು, ರಾಷ್ಟ್ರೀಯ ಭದ್ರತೆಗೆ ಮೊದಲ ಆದ್ಯತೆ ಕೊಡಲಾಗಿದೆ.

ಪ್ರಣಾಳಿಕೆಯ ಮುಖ್ಯಾಂಶಗಳು

  • ಕಿಸಾನ್ ಸಮ್ಮಾನ್ ನಿಧಿಯಲ್ಲಿ ಎಲ್ಲಾ ರೈತರಿಗೆ ವರ್ಷಕ್ಕೆ 6 ಸಾವಿರ ಧನಸಹಾಯ.
  •  60 ವರ್ಷ ಪೂರೈಸಿದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪಿಂಚಣಿ ಸೌಲಭ್ಯ
  •  ಶೂನ್ಯ ಬಡ್ಡಿ ದರದಲ್ಲಿ ಸೂಕ್ತ ಕಾಲಕ್ಕೆ ಮರುಪಾವತಿ ಮಾಡುವ ಷರತ್ತಿನ ಮೇಲೆ 1 ಲಕ್ಷದವರೆಗೆ ಅಲ್ಪಾವಧಿಯ ಹೊಸ ಕೃಷಿ ಸಾಲ.
  •  ಸಾಮರಸ್ಯದ ವಾತಾವರಣದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ
  •  75 ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳ ಸ್ಥಾಪನೆ
  •  ಮುಂದಿನ 5 ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿಗೆ 25 ಲಕ್ಷ ಕೋಟಿ ರೂ.ವೆಚ್ಚ
  •  ಆಧುನಿಕ ಉಪಕರಣಗಳ ನೀಡುವ ಮೂಲಕ ಭಾರತೀಯ
    ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುವುದು.
  • ಜಮ್ಮು-ಕಾಶ್ಮೀರದಲ್ಲಿ ತಾತ್ಕಾಲಿಕವಾಗಿ ನೆಲೆಸಿರುವ ನಾಗರಿಕರ ಮೇಲೆ ತಾರತಮ್ಯ ಎಸಗುವ ಸಂವಿಧಾನದ ಪರಿಚ್ಛೇದ 35ಎಯನ್ನು ರದ್ದುಗೊಳಿಸಲು ಬಿಜೆಪಿ ಬದ್ಧ.
  •  2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ.
  • ಭೂ ದಾಖಲೆಗಳ ಡಿಜಿಟಲೀಕರಣ.
  • ಮೀನುಗಾರರಿಗೆ ಮತ್ಸ್ಯ ಸಂಪದ ಯೋಜನೆ, ಉನ್ನತ ಶಿಕ್ಷಣಕ್ಕೆ 1 ಲಕ್ಷ ಕೋ. ಅನುದಾನ, ವೃತ್ತಿ ಶಿಕ್ಷಣದಲ್ಲಿ ಶೇ.50ರಷ್ಟು ಸೀಟು ಹೆಚ್ಚಳ.
  • ದೇಶದ ಪ್ರತಿ ಕುಟುಂಬಕ್ಕೂ ಮನೆ ಖಾತ್ರಿ.
  •  ಎಲ್ಲ ಬಡ ಕುಟುಂಬಕ್ಕೂ ಎಲ್‍ಪಿಜಿ ಸೌಲಭ್ಯ, ದೇಶದ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ. ಎಲ್ಲ ನಾಗರಿಕರಿಗೂ ಬ್ಯಾಂಕ್ ಖಾತೆ, ಪ್ರತಿ ಮನೆಯಲ್ಲೂ ಶೌಚಾಲಯ ವ್ಯವಸ್ಥೆ, ಎಲ್ಲರಿಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ.
  •  ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ.
  • ಜಿಎಸ್‍ಟಿ ವ್ಯವಸ್ಥೆಯ ಸರಳೀಕರಣ.
  • ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬಿ.
  • ರಾಷ್ಟ್ರೀಯ ವ್ಯಾಪಾರಿ ಆಯೋಗ ರಚನೆ.
  • 5 ಕಿ.ಮೀ. ಅಂತರದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ.
  • ನ್ಯಾಯಾಲಯಗಳ ಸಂಪೂರ್ಣ ಡಿಜಿಟಲೀಕರಣ.
  • ಡಿಜಿಟಲ್ ಬ್ಯಾಂಕಿಂಗ್‍ಗೆ ಉತ್ತೇಜನ.

Translate »