50 ವರ್ಷದ ಕೆಲಸವನ್ನು 5 ವರ್ಷದಲ್ಲಿ ಮಾಡಿದ್ದೇವೆ…
ಮೈಸೂರು

50 ವರ್ಷದ ಕೆಲಸವನ್ನು 5 ವರ್ಷದಲ್ಲಿ ಮಾಡಿದ್ದೇವೆ…

April 9, 2019

ನವದೆಹಲಿ: ಒಂದು ನಿರ್ದಿಷ್ಟ ಗುರಿಯೆಡೆಗೆ ಒಂದೇ ದಿಕ್ಕಿನಲ್ಲಿ ದೇಶವನ್ನು ಕೊಂಡೊಯ್ಯುವ ಭರವಸೆಯನ್ನು ನಾವು ದೇಶದ ಜನತೆಗೆ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿ ಇಂದು ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಳೆದ 5 ವರ್ಷಗಳಲ್ಲಿ ಸರ್ಕಾರದ ಆಡಳಿತದಲ್ಲಿ ಸಹಕಾರ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ನಮ್ಮ ಪಕ್ಷದ ಪ್ರಣಾಳಿಕೆ ಹೊರತರಲು 2-3 ತಿಂಗಳು ನಿರಂತರ ಕೆಲಸ ಮಾಡಲಾಯಿತು. ಪ್ರಣಾಳಿಕೆ ಬಿಡುಗಡೆ ಮಾಡುತ್ತಿರುವ ಸರ್ಕಾರವೇ ಅಧಿಕಾರದಲ್ಲಿ ಮುಂದುವರಿಯಬಹುದಾದ ಸಾಧ್ಯತೆ ಹೆಚ್ಚಿದೆ ಎನಿಸುತ್ತದೆ. ದೇಶದ ಜನರಿಗೆ ನಾವು ಕಾಲಮಿತಿಯ ಆಧಾರದಲ್ಲಿ ಭರ ವಸೆಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ಸಮಾಜದ ಎಲ್ಲಾ ವರ್ಗದವರನ್ನು ಸೇರಿಸಲು ನಾವು ಬಹು ಹಂತದ ಪ್ರಕ್ರಿಯೆಯನ್ನು ರೂಪಿಸಿದ್ದೇವೆ. ಬಹು ಆಯಾಮದ ಪ್ರಕ್ರಿಯೆಯಿಂದ ನಮ್ಮ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ. ಕಳೆದ 50 ವರ್ಷಗಳಲ್ಲಿ ಪೂರ್ಣಗೊಳಿಸಲಾಗದ ಕೆಲಸಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ಕಳೆದ 5 ವರ್ಷಗಳಲ್ಲಿ ಪೂರ್ಣಗೊಳಿಸಿದೆ ಎಂದರು. ಉತ್ತರ ಮತ್ತು ದಕ್ಷಿಣ ಭಾರತೀಯರ ನಡುವಿನ ಅಂತರವನ್ನು ಕಡಿಮೆ ಮಾಡಿ ಸಂಪರ್ಕ ಬೆಸೆಯಲು ನಾವು ಅನೇಕ ವಿಷಯಗಳನ್ನು ಇಲ್ಲಿ ಹೇಳಿದ್ದೇವೆ. ಅಭಿವೃದ್ಧಿಯನ್ನು ಜನರ ಚಳವಳಿಯಾಗಿ ಮಾಡಬೇಕು. ಸ್ವಚ್ಛತೆ ಬಗ್ಗೆ ಹೇಳಲು ಮತ್ತು ಜನರ ಗಮನ ಸೆಳೆಯಲು ಸ್ವಚ್ಛ ಭಾರತ ಹೇಗೆ ಸಹಾಯ ಮಾಡಿತು ಎಂಬುದನ್ನು ನೋಡಬಹುದು ಎಂದು ಮೋದಿ ಹೇಳಿದರು.

ದೆಹಲಿಯ ಎಸಿ ಕೋಣೆಯಲ್ಲಿ ಕುಳಿತುಕೊಂಡು ದೇಶದ ಬಡತನದ ಬಗ್ಗೆ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದು ಸಣ್ಣ ಮತ್ತು ಅತಿ ಸಣ್ಣ ಬಡ ರೈತರಿಗೆ ವರ್ಷಕ್ಕೆ 6 ಸಾವಿರ ರೂಪಾಯಿ ಆದಾಯ ನೀಡುವ ತಮ್ಮ ಸರ್ಕಾರದ ಘೋಷಣೆಗೆ ವಿರೋಧ ಪಕ್ಷಗಳ ಟೀಕೆಗೆ ಮೋದಿ ಇದೇ ಸಂದರ್ಭದಲ್ಲಿ ತಿರುಗೇಟು ನೀಡಿದರು.

ನಾಗರಿಕರ ಸಶಕ್ತೀಕರಣಕ್ಕೆ ಮತ್ತು ಬಡವರ ಸಶಕ್ತತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ನಾವು ಯಶಸ್ಸನ್ನು ಕಂಡಿದ್ದೇವೆ. ನಿಖರತೆ ಆಡಳಿತದಲ್ಲಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಿದೆ. 2022ರ ವೇಳೆಗೆ ಭಾರತ ಸ್ವಾತಂತ್ರ್ಯ ಬಂದು 75 ವರ್ಷಗಳನ್ನು ಪೂರೈಸಲಿದೆ. 21ನೇ ಶತಮಾನ ಏಷ್ಯಾ ಖಂಡಕ್ಕೆ ಸೇರಿದ್ದಾಗಿದ್ದು ಅದರ ಮುಂಚೂಣಿ ಭಾರತ ದೇಶ ವಹಿಸಬಾರದೇಕೇ ಎಂದು ಪ್ರಧಾನಿ ಕೇಳಿದರು. ಬಿಜೆಪಿ ಪ್ರಣಾಳಿಕೆಯಲ್ಲಿ ಮಾಡಿರುವ ಭರವಸೆಗಳನ್ನು ಪ್ರಧಾನಿ ಜಲಶಕ್ತಿ ಸಚಿವಾಲಯಕ್ಕೆ ಹೋಲಿಸಿದ್ದಾರೆ. ನಳ್ಳಿಯಿಂದ ನೀರು ಬರುತ್ತದೆ ಎಂಬ ಆಶಾವಾದದಂತೆ ಬಿಜೆಪಿಯ ಪ್ರಣಾಳಿಕೆಯಿಂದ ಒಳ್ಳೆಯದನ್ನು ನಿರೀಕ್ಷಿಸಬಹುದು ಎಂದು ಸೂಚ್ಯವಾಗಿ ಹೇಳಿದರು. ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಮತ್ತು ಜನರ ಜೀವನ ಮಟ್ಟ ಸುಧಾರಿಸಲು 100 ಲಕ್ಷ ಕೋಟಿ ರೂಪಾಯಿ ನೀಡುವ ಭರವಸೆಯನ್ನು ಕೂಡ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.2022ರ ವೇಳೆಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸಲು, ಉತ್ಪಾದನೆ ವಲಯಗಳಿಂದ ಜಿಡಿಪಿಯನ್ನು ಸುಧಾರಿಸಿ ದೇಶದ ರಫ್ತಿನ ವಲಯವನ್ನು ಹೆಚ್ಚಿಸಲು ಪ್ರಣಾಳಿಕೆಯಲ್ಲಿ ಕ್ರಮ ಕೈಗೊಂಡಿದ್ದಾರೆ.

ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ 263 ಮಿಲಿಯನ್ ರೈತರು ಮತವನ್ನು ನಿರ್ಧರಿಸುವವರು ಆಗಿದ್ದಾರೆ. ಕಳೆದ ವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ದೇಶಾದ್ಯಂತ ರೈತರ ಸಾಲವನ್ನು ಮನ್ನಾ ಮಾಡು ವುದಾಗಿ ಹೇಳಿತ್ತು. ಅದಕ್ಕೆ ಪ್ರತಿಯಾಗಿ ದೇಶದ ಮತದಾರರ ಗಮನ ಸೆಳೆಯಲು ಬಿಜೆಪಿ ಗ್ರಾಮೀಣಾಭಿವೃದ್ಧಿಗೆ 359 ಶತಕೋಟಿ ಡಾಲರ್ ಒದಗಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಮುಂದಿನ 5 ವರ್ಷಗಳಲ್ಲಿ ದೇಶದ ಬಡತನದ ಪ್ರಮಾಣವನ್ನು ಒಂದಂಕಿ ಶೇಕಡಾವಾರಿಗೆ ತರುವುದು ಬಿಜೆಪಿ ಪ್ರಣಾಳಿಕೆಯ ಮುಖ್ಯ ಉದ್ದೇಶವಾಗಿದ್ದು ಬಡತನ ನಿರ್ಮೂಲನೆಯ ಪಣವನ್ನು ಸಹ ತೊಟ್ಟಿದೆ. ರಾಷ್ಟ್ರೀಯತೆಯ ದೃಷ್ಟಿಕೋನವನ್ನಿಟ್ಟುಕೊಂಡು ಚುನಾವಣಾ ಪ್ರಣಾಳಿಕೆ ಸಿದ್ದಪಡಿಸಲಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದರು.

Translate »