ಕೆಆರ್‍ಎಸ್‍ನಲ್ಲಿ ಸಿಎಂ ಸೀಕ್ರೆಟ್ ಸಭೆ
ಮೈಸೂರು

ಕೆಆರ್‍ಎಸ್‍ನಲ್ಲಿ ಸಿಎಂ ಸೀಕ್ರೆಟ್ ಸಭೆ

April 9, 2019

ಶ್ರೀರಂಗಪಟ್ಟಣ: ರಾಜ್ಯದ ಗಮನವನ್ನು ಸೆಳೆದಿ ರುವ ಹೈ ವೋಲ್ಟೇಜ್ ಕ್ಷೇತ್ರವಾದ ಮಂಡ್ಯದಲ್ಲಿ ಅಂಬರೀಶ್ ಪತ್ನಿ ಸುಮಲತಾ ಆರ್ಭಟದ ಮುಂದೆ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಣತಂತ್ರ ರೂಪಿಸಿದ್ದಾರೆ.

ತಾಲೂಕಿನ ಕೆಆರ್‍ಎಸ್ ಬೃಂದಾವನದಲ್ಲಿರುವ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ರಾತ್ರಿ ಮುಖ್ಯಮಂತ್ರಿಗಳು ಮಂಡ್ಯ ಕ್ಷೇತ್ರದ ಸಚಿವರು, ಶಾಸಕರು ಹಾಗೂ ಮುಖಂಡರ ಸಭೆ ನಡೆಸಿದರು. ಈ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಭಾರೀ ಅಂತರದಲ್ಲಿ ಮಣಿಸಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು.

ಈಗಾಗಲೇ ಸುಮಲತಾ ಪರವಾಗಿ ಮೈತ್ರಿ ಪಕ್ಷ ವಾದ ಕಾಂಗ್ರೆಸ್‍ನ ಹಲವು ಮುಖಂಡರು ಮತ್ತು ಕಾರ್ಯಕರ್ತರು ಬಹಿರಂಗವಾಗಿಯೇ ಪಕ್ಷದ ಬಾವುಟ ಹಿಡಿದು ಪ್ರಚಾರ ಮಾಡುತ್ತಿರುವುದು ಹಾಗೂ ಮಾಜಿ ಶಾಸಕರುಗಳಾದ ಎನ್. ಚಲುವ ರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಪಿ. ನರೇಂದ್ರಸ್ವಾಮಿ ಸೇರಿದಂತೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್ ಮುಖಂಡರು ಪರೋಕ್ಷವಾಗಿ ಸುಮ ಲತಾ ಅವರಿಗೆ ಬೆಂಬಲ ನೀಡುತ್ತಿರುವ ಬಗ್ಗೆ ಚರ್ಚಿಸಲಾಯಿತು ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಅವರು ಭಾನುವಾರ ನಡೆಸಿದ ಮಂಡ್ಯ ಜಿಲ್ಲೆಯ ಅಸಮಾಧಾನಿತ ಕಾಂಗ್ರೆಸ್ ಮುಖಂಡರ ಸಭೆ ವಿಫಲವಾಗಿದ್ದು, ಹಾಗೂ ಆ ಸಭೆಯ ನಂತರ ಮಾಧ್ಯಮಗಳಿಗೆ ಚಲುವ ರಾಯಸ್ವಾಮಿ ನೀಡಿದ ಹೇಳಿಕೆ ಬಗ್ಗೆ ಮುಖ್ಯಮಂತ್ರಿಗಳು ತಮ್ಮ ಪಕ್ಷದ ಮುಖಂಡರ ಜೊತೆ ಚರ್ಚಿಸಿದ್ದು, ಯಾವುದೇ ಕಾರಣಕ್ಕೂ ಸ್ವಾಭಿಮಾನ ಬಿಟ್ಟು ಕಾಂಗ್ರೆಸ್‍ನ ಅಸಮಾಧಾನಿತ ಮುಖಂಡರಿಗೆ ಶರಣಾಗುವುದು ಬೇಡ ಎಂದು ಈ ಸಭೆಯಲ್ಲಿ ನಿರ್ಧರಿಸಲಾಯಿತು ಎನ್ನಲಾಗಿದೆ.

ಅಂಬರೀಶ್ ಪರಮಾಪ್ತರಾದ ಅಮರಾವತಿ ಚಂದ್ರಶೇಖರ್ ಅವರು ಸುಮಲತಾ ಪರ ಹೋಗದೇ ಕಾಂಗ್ರೆಸ್‍ನಲ್ಲೇ ಉಳಿದು ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಕೆಲಸ ಮಾಡುತ್ತಿರುವಂತೆಯೇ ಕಾಂಗ್ರೆಸ್‍ನ ಅಸಮಾಧಾನಿತ ಮುಖಂಡರ ಆಪ್ತರಾಗಿರುವ ಮುಖಂಡರು ಹಾಗೂ ಯುವಕರನ್ನೂ ಗುರುತಿಸಿ ಅವರನ್ನು ಜೆಡಿಎಸ್‍ಗೆ ಸೆಳೆಯುವ ಜವಾಬ್ದಾರಿಯನ್ನು ಆಯಾ ಕ್ಷೇತ್ರಗಳ ಶಾಸಕರಿಗೆ ಮುಖ್ಯಮಂತ್ರಿಗಳು ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಸುಮಲತಾ ಜೊತೆ ಕ್ರಿಯಾಶೀಲವಾಗಿ ಚುನಾವಣಾ ಕಾರ್ಯದಲ್ಲಿ ನಿರತರಾಗಿರುವವರನ್ನು ಸೆಳೆಯಲು ಕೂಡ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಹೇಳಲಾಗಿದೆ.

ಈ ಸಭೆಯಲ್ಲಿ ಮಳವಳ್ಳಿ ಶಾಸಕ ಡಾ. ಅನ್ನದಾನಿ ಹೊರತುಪಡಿಸಿ ಉಳಿದ 7 ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಪ್ರಮುಖ ಮುಖಂಡರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಕಾರು ನಿಲ್ಲಿಸಿ ಪೋಷಕರ ಕಷ್ಟ ಆಲಿಸಿದ ಸಿಎಂ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾರ್ಗ ಮಧ್ಯೆ ಕಾರು ನಿಲ್ಲಿಸಿ ತಮಗಾಗಿ ಕಾದು ಕುಳಿತಿದ್ದ ಮಗುವಿನ ಪೋಷಕರ ಕಷ್ಟವನ್ನು ಆಲಿಸಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದ ಬಳಿ ನಡೆಯಿತು.

ಜೆಡಿಎಸ್ ಸಚಿವರು ಮತ್ತು ಶಾಸಕರೊಂದಿಗೆ ಪುತ್ರನ ಗೆಲುವಿಗೆ ನಡೆಸಬೇಕಾದ ತಂತ್ರಗಾರಿಕೆ ಕುರಿತು ಕೆಆರ್‍ಎಸ್‍ನಲ್ಲಿ ಗುಪ್ತ ಸಭೆ ನಡೆಸಿದ ಬಳಿಕ ಬೆಂಗಳೂರಿಗೆ ಹಿಂದಿರುಗುತ್ತಿದ್ದ ಮುಖ್ಯಮಂತ್ರಿಗಳು ಮಾರ್ಗಮಧ್ಯೆ ಕಾದು ನಿಂತಿದ್ದ ಮಗುವಿನ ಪೋಷಕರ ಕಷ್ಟ ಆಲಿಸಿದರು. ಆಗ ಮಗುವಿನ ಅನಾರೋಗ್ಯದ ಬಗ್ಗೆ ಸಿಎಂ ಬಳಿ ದಂಪತಿ ಹೇಳಿಕೊಂಡರು. ಅನಾರೋಗ್ಯಪೀಡಿತ ಮಗುವಿಗೆ ಚಿಕಿತ್ಸೆ ಕೊಡಿಸುವ ಭರವಸೆಯನ್ನು ಸಿಎಂ ಕುಮಾರಸ್ವಾಮಿ ನೀಡಿದರು.

ಅಷ್ಟೇ ಅಲ್ಲದೇ ನಾಳೆ (ಮಂಗಳವಾರ) ಬೆಂಗಳೂರಿನ ತಮ್ಮ ನಿವಾಸಕ್ಕೆ ಬರುವಂತೆ ಪೋಷಕರಿಗೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದರು. ನಂತರ ಕೆಆರ್‍ಎಸ್‍ನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಈ ಹಿಂದೆಯೂ ಕೂಡ ಸಿಎಂ ಕುಮಾರಸ್ವಾಮಿ ಅವರು ಹೂ ಮಾರಾಟ ಮಾಡುತ್ತಿದ್ದ ಬಾಲಕಿಯ ಬಳಿ ಕಾರು ನಿಲ್ಲಿಸಿ, ಮಾತನಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »