ಮೈಸೂರಲ್ಲಿ ಭರ್ಜರಿ ಮೊದಲ ಮಳೆ
ಮೈಸೂರು

ಮೈಸೂರಲ್ಲಿ ಭರ್ಜರಿ ಮೊದಲ ಮಳೆ

April 9, 2019

ಮೈಸೂರು: ಮೈಸೂರಿನಲ್ಲಿ ಸೋಮವಾರ ರಾತ್ರಿ ಗಾಳಿ, ಗಡುಗು ಸಹಿತ ಭಾರೀ ಮಳೆ ಸುರಿಯಿತು. ಒಂದೂವರೆ ತಿಂಗಳಿಂದ ಬೇಸಿಗೆ ಬಿಸಿಲ ಬೇಗುದಿಯಲ್ಲಿ ಬೆಂದಿದ್ದ ಮೈಸೂರು, ಯುಗಾದಿ ನಂತರದ ಮೊದಲ ಮಳೆಯಿಂದ ಕೊಂಚ ತಂಪಾಯಿತು.

ಇಂದು ಮಧ್ಯಾಹ್ನ ಮೋಡ ಕವಿದ ವಾತಾವರಣವಿತ್ತು. ರಾತ್ರಿ ಸುಮಾರು 8.30 ಗಂಟೆಗೆ ಗುಡುಗು ಸಹಿತ ಆರಂಭವಾಗಿ ಗಂಟೆಗೂ ಹೆಚ್ಚು ಕಾಲ ಬೋರ್ಗರೆದ ಪರಿಣಾಮ ಹಲವೆಡೆ ಮರಗಳು ಧರೆಗುರುಳಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿರುವುದಲ್ಲದೆ, ವಿದ್ಯುತ್ ವ್ಯತ್ಯಯ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ರಸ್ತೆ ಸಂಚಾರ ಅಸ್ತವ್ಯಸ್ತವಾಗಿ, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು, ಬೀದಿ ಬದಿ ವ್ಯಾಪಾರಿಗಳು ಪರದಾಡುವಂತಾಗಿತ್ತು.

ಧರೆಗುರುಳಿದ ಮರಗಳು: ಮೈಸೂರಿನ ಸರಸ್ವತಿ ಪುರಂ ಜವರೇಗೌಡ ಉದ್ಯಾನ, ಹನುಮಂತನಗರ, ಉದಯಗಿರಿಯ ವಿನ್ನರ್ ಮಿಲ್ ಸೇರಿದಂತೆ ವಿವಿಧೆಡೆ ಮರಗಳು ಧರೆಗುರುಳಿವೆ. ಸಿದ್ಧಿಕಿನಗರದಲ್ಲಿ ಕೊಂಬೆ ಯೊಂದು ಮುರಿದು, ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ದೊಡ್ಡ ಗಡಿಯಾರ ಸಮೀಪ, ಸುಭಾಷ್‍ನಗರ, ಮೇದರ್‍ಬ್ಲಾಕ್ ಇನ್ನಿತರ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳಿಗೆ ತೊಂದರೆಯುಂಟಾಗಿದೆ. ವಿಜಯನಗರ, ಎನ್.ಆರ್. ಮೊಹಲ್ಲಾ, ಮೇಟಗಳ್ಳಿ, ಬಿಎಂಶ್ರೀ ನಗರ, ಇಲವಾಲ, ಮಂಡಿ ಮೊಹಲ್ಲಾ, ಶಿವರಾಂ ಪೇಟೆ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿರುವ ಬಗ್ಗೆ ವರದಿಯಾಗಿದೆ.

ಮಹಾರಾಜ ಕಾಲೇಜು ಮೈದಾನ: ಪ್ರಧಾನಿ ಮೋದಿ ಅವರು ಭಾಗವಹಿಸುವ ಸಮಾವೇಶಕ್ಕಾಗಿ ಮಹಾರಾಜ ಕಾಲೇಜು ಮೈದಾನ ಸಜ್ಜಾಗಿದ್ದು, ಮಳೆಯಿಂದಾಗಿ ಕೊಂಚ ಅಸ್ತವ್ಯಸ್ತವಾಗಿದೆ. ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಮಾಡಿರುವ ಸ್ಥಳದಲ್ಲೂ ತಾತ್ಕಾಲಿಕ ಮೇಲ್ಛಾವಣಿ ಅಳವಡಿಸುವುದರಿಂದ ರಾಡಿಯಾಗಿಲ್ಲ. ಆದರೆ ನೀರಿನಿಂದಾಗಿ ಅಲ್ಲಲ್ಲಿ ಕಾರ್ಪೆಂಟ್ ಒದ್ದೆಯಾಗಿದೆ. ಈಗಾಗಲೇ ಕರ್ತವ್ಯ ನಿರತ ರಾಗಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೆಂಡಾಲ್‍ನಲ್ಲಿ ಆಶ್ರಯ ಪಡೆದಿದ್ದರು. ಚುನಾವಣಾ ಚೆಕ್‍ಪೋಸ್ಟ್‍ಗಳ ಬಳಿಯೂ ನೀರು ತುಂಬಿ ದ್ದರಿಂದ ಕಾರ್ಯಾಚರಣೆಗೆ ಕೆಲಕಾಲ ಅಡ್ಡಿಯಾಗಿತ್ತು ಎನ್ನಲಾಗಿದೆ. ಮಳೆಯಿಂದಾಗಿ ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ.

ಯುಗಾದಿ ನಂತರದ ಮೊದಲ ಮಳೆ ಸಾರ್ವಜನಿಕರಲ್ಲಿ ಮಂದಹಾಸ ಮೂಡಿಸಿದೆ. ಆದರೆ ಮುಂದಿನ ದಿನಗಳಲ್ಲಿ ಉಷ್ಠಾಂಶ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಹವಾಮಾನ ಇಲಾಖೆ ಮಾಹಿತಿ ನೀಡಿರುವುದು ಆತಂಕ ಹೆಚ್ಚಿಸಿದೆ. ಮಳೆಯ ನೀರಿನಲ್ಲಿ ಕಲ್ಲು-ಮಣ್ಣು ಕೊಚ್ಚಿಕೊಂಡು ರಸ್ತೆ ಮಧ್ಯೆ ಉಳಿದರೆ ವಾಹನ ಸಂಚಾರಕ್ಕೆ ಅಡ್ಡಿಯಾಗಬಹುದು. ಭಾರೀ ವಾಹನಗಳ ಸಂಚಾರದಿಂದ ಧೂಳೆದ್ದು, ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳಿಗೆ ತೊಂದರೆಯಾಗಬಹುದು. ಸಾಂಕ್ರಮಿಕ ರೋಗಗಳ ಬಗ್ಗೆಯೂ ಜನ ಎಚ್ಚರವಹಿಸಬೇಕಿದೆ.

Translate »