ಪೌರತ್ವ ಕಾಯ್ದೆ ವಿರೋಧಿಸುವ ಮೂಲಕ ಕಾಂಗ್ರೆಸ್ ಸಂಸತ್ತನ್ನೇ ವಿರೋಧಿಸುತ್ತಿದೆ
ಮೈಸೂರು

ಪೌರತ್ವ ಕಾಯ್ದೆ ವಿರೋಧಿಸುವ ಮೂಲಕ ಕಾಂಗ್ರೆಸ್ ಸಂಸತ್ತನ್ನೇ ವಿರೋಧಿಸುತ್ತಿದೆ

January 3, 2020

ತುಮಕೂರು,ಜ.2-ನಾಗರಿಕ ತಿದ್ದುಪಡಿ ಕಾಯ್ದೆ ಯನ್ನು ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿ ರುವ ಪ್ರಧಾನಿ ನರೇಂದ್ರ ಮೋದಿ, ಕಾಯ್ದೆ ವಿರುದ್ಧ ಆಂದೋಲನ ಆರಂಭಿಸುವ ಮೂಲಕ ವಿಪಕ್ಷ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸಂಸತ್ತನ್ನೇ ವಿರೋಧಿಸುತ್ತಿವೆ ಎಂದು ಕಿಡಿಕಾರಿದರು.

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾ ಡಿದ ಅವರು, ನೆರೆ ರಾಷ್ಟ್ರಗಳಲ್ಲಿ ಧಾರ್ಮಿಕ ದಬ್ಬಾ ಳಿಕೆಗೆ ಗುರಿಯಾದವರಿಗೆ ರಕ್ಷಣೆ ನೀಡುವುದು ನಮ್ಮ ಸಂಸ್ಕೃತಿ ಮಾತ್ರವಲ್ಲದೆ, ರಾಷ್ಟ್ರೀಯ ಜವಾಬ್ದಾರಿ ಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಕಾಯ್ದೆ ಜಾರಿಗೆ ತಂದಿದೆ. ಆದರೆ, ಅದರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ, ಧರಣಿ ನಡೆಸುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದೆ. ಈ ಮೂಲಕ ಸಂಸತ್ತನ್ನು ಅವಮಾನಿಸುತ್ತಿದೆ. ಸಂಸತ್ತಿನ ನಿರ್ಣಯದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ ಎಂದು ಆರೋಪಿಸಿದರು.

ಧರ್ಮದ ಆಧಾರದ ಮೇಲೆ ಹುಟ್ಟಿಕೊಂಡು, ವಿಭ ಜನೆಗೊಂಡ ಪಾಕಿಸ್ತಾನ ಅಲ್ಲಿನ ಹಿಂದೂ, ಜೈನ, ಸಿಖ್ ಮತ್ತಿತರ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಎಸಗುತ್ತಿದೆ. ಅಲ್ಲಿನ ಜನರು ತಮ್ಮ ಧರ್ಮ, ಜೀವನ ಮತ್ತು ಹೆಣ್ಣು ಮಕ್ಕಳನ್ನು ಸಂರಕ್ಷಿಸುವ ಸಲುವಾಗಿ ಭಾರತಕ್ಕೆ ವಲಸೆ ಬರುವ ಅನಿವಾ ರ್ಯತೆಗೆ ಸಿಲುಕಿದ್ದಾರೆ. ಅಂತಹವರಿಗೆ ಈ ಕಾಯ್ದೆ ರಕ್ಷಣೆ ನೀಡುತ್ತದೆ ಎಂದರು.

ರಕ್ಷಣೆ ಕೋರಿ ನಮ್ಮ ದೇಶಕ್ಕೆ ಬಂದ ಶರಣಾರ್ಥಿ ಗಳನ್ನು ಅವರ ಹಣೆಬರಹದಂತೆ ಬಿಡಲು ಸಾಧ್ಯವಿಲ್ಲ. ಅವರನ್ನು ರಕ್ಷಿಸುವುದು ನಮ್ಮ ರಾಷ್ಟ್ರೀಯ ಜವಾಬ್ದಾರಿ. ಕಾಯ್ದೆಯ ವಿರುದ್ಧ ಹೋರಾಟ ನಡೆಸುತ್ತಿರುವ ಕಾಂಗ್ರೆಸ್, ಪಾಕಿಸ್ತಾನದ ದೌರ್ಜನ್ಯದ ಬಗ್ಗೆ ಏಕೆ ಮಾತನಾಡು ತ್ತಿಲ್ಲ. ಅಲ್ಪಸಂಖ್ಯಾತರ ಶೋಷಣೆ ಮಾಡುತ್ತಿರುವ, ಲಕ್ಷಾಂತರ ಜನರ ಜೀವನ ಹಾಳು ಮಾಡಿದ ಪಾಕಿ ಸ್ತಾನದ ವಿರುದ್ಧ ಮಾತನಾಡಲು ಕಾಂಗ್ರೆಸ್ ಬಾಯಿಗೆ ಬೀಗ ಬಿದ್ದಿದೆಯೇಕೆ? ಜನರ ಮನಸ್ಸಿನಲ್ಲಿ ಈ ಕುರಿತು ಪ್ರಶ್ನೆ ಮೂಡಿದೆ ಎಂದರು.

ಪಾಕಿಸ್ತಾನದ ದೌರ್ಜನ್ಯಗಳನ್ನು ನಾವು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಬಹಿರಂಗೊಳಿಸಬೇಕಿದೆ. ಆದ್ದ ರಿಂದ ಕಾಂಗ್ರೆಸ್‍ಗೆ ನಾನು ನೀಡುವ ಸಲಹೆಯೆಂ ದರೆ, ನಿಮಗೆ ಆಂದೋಲನ ನಡೆಸಲೇಬೇಕೆಂದಿದ್ದರೆ ಪಾಕಿಸ್ತಾನದ ದೌರ್ಜನ್ಯದ ವಿರುದ್ದ ನಡೆಸಿ. ಪ್ರತಿಭಟನೆ ನಡೆಸುತ್ತಿರುವವರಿಗೆ ನೆರೆ ರಾಜ್ಯದ ಅಮಾನವೀಯ ನಡೆಯ ವಿರುದ್ಧ ಮಾತನಾಡುವ ಧೈರ್ಯವಿರಬೇಕು. ದ್ವೇಷ ಸಾಧಿಸುವುದಾದರೆ ಜನರ ಜೀವನ ದುರ್ಭರಗೊಳಿಸಿರುವ ಪಾಕ್ ವಿರುದ್ಧ ದ್ವೇಷ ಸಾಧಿಸಿ, ಧರಣಿ ಮಾಡುವುದಾದರೆ ಧಾರ್ಮಿಕ ಅಲ್ಪಸಂಖ್ಯಾತರ ನೋವಿನ ವಿರುದ್ಧ ಮಾಡಿ ಎಂದು ಸವಾಲು ಹಾಕಿದರು.

ಬಿಜೆಪಿ ಸರ್ಕಾರ ಕಳೆದ ಅನೇಕ ವರ್ಷಗಳಿಂದ ದೇಶದ ಹಳೆಯ ಸವಾಲುಗಳನ್ನು ಎದುರಿಸಿ ಜನರ ಜೀವನದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡು ತ್ತಿದೆ. ದೇಶದ ಜನರ ಜೀವನ ಸುಲಭವಾಗಿಸುವುದು ನಮ್ಮ ಆದ್ಯತೆ. ಎಲ್ಲರಿಗೂ ಸೂರು, ಅಡುಗೆ ಅನಿಲ ಸಂಪರ್ಕ, ಕುಡಿಯುವ ನೀರು, ವಿಮಾ ಸುರಕ್ಷಾ ಕವಚ, ಪ್ರತಿ ಗ್ರಾಮದಲ್ಲೂ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸುವುದು ನಮ್ಮ ಗುರಿ ಎಂದರು. 2014ರಲ್ಲಿ ತಾವು ಅಧಿಕಾರಕ್ಕೇರಿದಾಗ ಸ್ವಚ್ಛ ಭಾರತದ ಯೋಜನೆಗೆ ಕರೆ ನೀಡಿದ್ದೆ. ಲಕ್ಷಾಂತರ ಜನರು ಬೆಂಬಲಿಸಿದರು. ಈ ವರ್ಷದ ಮಹಾತ್ಮ ಗಾಂಧಿ ಅವರ 150ನೇ ಗಾಂಧಿ ಜನ್ಮದಿನಾಚರಣೆಯ ಸಂದರ್ಭದಲ್ಲಿ ನಮ್ಮ ದೇಶ ಬಯಲು ಶೌಚ ಮುಕ್ತವಾಗುವತ್ತ ಹೆಜ್ಜೆ ಇರಿಸಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು.

ಸಂತರಿಗೆ ಮೂರು ಮನವಿಗಳು: ದೇಶದ ಅಭಿವೃದ್ಧಿಗಾಗಿ ತಾವು ಸಂತರಿಂದ ಮೂರು ಸಂಕಲ್ಪದಲ್ಲಿ ಸಕ್ರಿಯ ನೆರವು ಕೋರುತ್ತಿದ್ದೇನೆ. ಮೊದಲನೆಯದಾಗಿ ಸಂತರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು. ಪುರಾತನ ಸಂಸ್ಕೃತಿಯನ್ನು ಮತ್ತೊಮ್ಮೆ ಬಲಗೊಳಿಸಬೇಕು. ತಮ್ಮ ಭಕ್ತರು, ಸಮಾಜವನ್ನು ಈ ನಿಟ್ಟಿನಲ್ಲಿ ನಿರಂತರ ಜಾಗೃತಿಗೊಳಿಸಬೇಕು ಎಂದು ಕರೆ ನೀಡಿದರು. ಎರಡನೆಯದಾಗಿ ಸಂತರು ಪ್ರಕೃತಿ ಮತ್ತು ಪರಿಸರದ ರಕ್ಷಣೆಗೆ ಕೈಜೋಡಿಸಬೇಕು. ಸಮಾಜವನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತವಾಗಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಮೂರನೆಯದಾಗಿ, ಜಲಸಂರಕ್ಷಣೆ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಈ ಕುರಿತು ಜನಜಾಗೃತಿ ಮೂಡಿಸಿ ಸಹಯೋಗ ಒದಗಿಸಬೇಕು ಎಂದರು.

Translate »