ನಮಗೆ ಹಣ ಕೊಡಿ! ನಮ್ಮ ಬಳಿ ಹಣವಿಲ್ಲ!!
ಮೈಸೂರು

ನಮಗೆ ಹಣ ಕೊಡಿ! ನಮ್ಮ ಬಳಿ ಹಣವಿಲ್ಲ!!

January 3, 2020

ಮೈಸೂರು, ಜ.2(ಎಸ್‍ಬಿಡಿ)- ಸ್ವಚ್ಛ ಸರ್ವೇಕ್ಷಣೆ ಆರಂಭವಾಗುವ ಹೊಸ್ತಿಲಲ್ಲಿ ಮೈಸೂರು ನಗರ ಪಾಲಿಕೆ ಮೇಯರ್, ಸದಸ್ಯರು ಹಾಗೂ ಆಯುಕ್ತರ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿದೆ.

ಈ ಹಿಂದೆ 2 ವರ್ಷ ಸತತವಾಗಿ ದೇಶದ ಮೊದಲ ಸ್ವಚ್ಛ ನಗರಿ ಪ್ರಶಸ್ತಿ ಪಡೆದಿದ್ದ ಮೈಸೂರನ್ನು ಮತ್ತೆ ಅಗ್ರ ಸ್ಥಾನಕ್ಕೆ ಕೊಂಡೊಯ್ಯಬೇಕೆಂಬ ಸಾರ್ವಜನಿಕರ ಆಶ ಯಕ್ಕೆ ಗುರುವಾರ ಭಾರೀ ಹೊಡೆತ ಬಿದ್ದಿದೆ. ಜ.4ರಿಂದ 2020ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆ ಆರಂಭವಾಗುವ ಹಿನ್ನೆಲೆಯಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಸದಸ್ಯರ ಅಭಿಪ್ರಾಯ, ಸಲಹೆ ಸ್ವೀಕರಿಸಲೆಂದು ಕರೆದಿದ್ದ ಸಭೆ ಭಿನ್ನಾಭಿಪ್ರಾಯ ಸ್ಫೋಟಕ್ಕೆ ವೇದಿಕೆಯಾಯಿತು. ಅಲ್ಲದೆ ವಿಷಯ ಸಂಬಂಧ ಯಾವುದೇ ರೀತಿಯ ಚರ್ಚೆ ನಡೆಸದೆ ಸದಸ್ಯರೆಲ್ಲಾ ಸಭೆ ಬಹಿಷ್ಕರಿಸಿ, ಹೊರನಡೆದ ಪ್ರಸಂಗವೂ ನಡೆಯಿತು.

ಆರಂಭದಲ್ಲೇ ಭಿನ್ನಮತ: ಪಾಲಿಕೆ ನವೀಕೃತ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸಭೆಯ ಆರಂಭದಲ್ಲೇ ಸದಸ್ಯರಿಂದ ಅಪಸ್ವರ ವ್ಯಕ್ತವಾಯಿತು. ಸ್ವಚ್ಛ ಸರ್ವೇ ಕ್ಷಣೆ ಆರಂಭವಾಗುವ ಹೊಸ್ತಿಲಲ್ಲಿ ಸದಸ್ಯರ ಅಭಿಪ್ರಾಯ ಕೇಳುವುದರಲ್ಲಿ ಅರ್ಥವಿಲ್ಲ ಎಂಬ ಬೇಸರವನ್ನು ಸದ ಸ್ಯರು ಹೊರ ಹಾಕಿದರು. ಈ ಬಾರಿ ಸ್ವಚ್ಛ ಸರ್ವೇಕ್ಷಣೆ ಯಲ್ಲಿ ಮೈಸೂರು ಪಾಲ್ಗೊಳ್ಳುವುದೇ? ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಪ್ರಶ್ನಿಸಿದ ಮಾಜಿ ಮೇಯರ್ ಅಯೂಬ್‍ಖಾನ್, ಕಸ ಸಂಗ್ರಹಣೆ, ಶೌಚಾ ಲಯ, ಒಳಚರಂಡಿ ನಿರ್ವಹಣೆಯಲ್ಲಿನ ವೈಫಲ್ಯವನ್ನು ತಿಳಿಸಿದರು. ಪಾಲಿಕೆ ಆಡಳಿತ ಪಕ್ಷ ಕಾಂಗ್ರೆಸ್ ನಾಯಕಿ ಶಾಂತಕುಮಾರಿ, ವಿರೋಧ ಪಕ್ಷ(ಬಿಜೆಪಿ)ದ ನಾಯಕ ಬಿ.ವಿ.ಮಂಜುನಾಥ್ ಸೇರಿದಂತೆ ಸಭೆಯಲ್ಲಿದ್ದ ಎಲ್ಲಾ ಪಕ್ಷಗಳ ಸದಸ್ಯರು, ಪ್ರಶಸ್ತಿಗಾಗಿ ಒಂದು ತಿಂಗಳು ಮಾತ್ರ ಸ್ವಚ್ಛತೆ ಕಾಯ್ದುಕೊಳ್ಳುವುದನ್ನು ವಿರೋಧಿಸಿ, ಪೌರ ಕಾರ್ಮಿಕರ ಕೊರತೆ, ಲಾರಿ, ಆಟೋ ಟಿಪ್ಪರ್‍ಗಳ ಸಮಸ್ಯೆಯನ್ನು ಬಿಚ್ಚಿಟ್ಟರು. ಸ್ವಚ್ಛ ಸರ್ವೇಕ್ಷಣೆ ಬಗ್ಗೆ ಚರ್ಚೆ ಬದಲು, ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿದರು.

ಸಭೆಗೆ ಬಹಿಷ್ಕಾರ: ಮೇಯರ್ ಪುಷ್ಪಲತಾ ಜಗನ್ನಾಥ್, ಕೌನ್ಸಿಲ್ ಸಭೆಯಲ್ಲಿ ಘೋಷಿಸಿದ್ದ ಅನುದಾನ ಬಿಡುಗಡೆಯಾಗದಿರುವುದು ಈ ಸಂಘರ್ಷಕ್ಕೆ ಕಾರಣ ವಾಯಿತು. ಮೇಯರ್ ತಮ್ಮ ಅನುದಾನದ ಸಾಮಾನ್ಯ ನಿಧಿಯಡಿ ಪ್ರತಿ ವಾರ್ಡ್ ಅಭಿವೃದ್ಧಿಗೆ 50 ಲಕ್ಷ ಅನುದಾನ ಘೋಷಿಸಿ, ನಿರ್ಣಯ ಮಾಡಿದ್ದರು. ಆದರೆ 3 ತಿಂಗಳಾದರೂ ಅನುದಾನ ಬಿಡುಗಡೆ ಯಾಗಿಲ್ಲ. ಈ ಬಗ್ಗೆ ಇಂದಿನ ಸಭೆಯಲ್ಲಿ ಕಾರ್ಪೊರೇಟರ್ ಎಸ್‍ಬಿಎಂ ಮಂಜು ಪ್ರಸ್ತಾಪಿಸಿ ದರು. ಇದಕ್ಕೆ ಧನಿಗೂಡಿಸಿದ ಎಲ್ಲಾ ಸದಸ್ಯರೂ, ಅನುದಾನ ನೀಡಿದರೆ ಉದ್ಯಾನ ನಿರ್ವಹಣೆ ಸೇರಿದಂತೆ ಸ್ವಚ್ಛ ಸರ್ವೇಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಅನುವಾಗುತ್ತದೆ ಎಂದು ಆಗ್ರಹಿಸಿದರು. ಪ್ರತೀ ವಾರ್ಡ್‍ಗೆ 50 ಲಕ್ಷ ರೂ. ಅನುದಾನ ಬಿಡುಗಡೆ ನಿರ್ಣಯದ ಬಗ್ಗೆ ಪತ್ರಿಕೆಗಳಿಂದ ತಿಳಿದಿರುವ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಆದರೆ ಪಾಲಿಕೆ ಆರ್ಥಿಕ ಪರಿಸ್ಥಿತಿ ಕಾರಣ ಹೇಳಿದ ಆಯುಕ್ತ ಗುರುದತ್ ಹೆಗ್ಡೆ, ಸದಸ್ಯರ ಆಗ್ರಹಕ್ಕೆ ಸ್ಪಂದಿಸಲಿಲ್ಲ. ಇದರಿಂದ ಸಿಟ್ಟಿಗೆದ್ದ ಸದಸ್ಯರು ಪಕ್ಷಭೇದ ಮರೆತು, ಮೇಯರ್ ಹಾಗೂ ಆಯುಕ್ತರ ವಿರುದ್ಧ ಹರಿಹಾಯ್ದರು. `ಮೊದಲು ಅನುದಾನ ನೀಡಿ ಆಮೇಲೆ ಸ್ವಚ್ಛತೆ ಮಾತು’ ಎಂದು ಪಟ್ಟು ಹಿಡಿದು ಸಭೆ ಬಹಿಷ್ಕರಿಸಿ, ಹೊರನಡೆದರು.

ಮೇಯರ್ ಬೇಸರ: ಪ್ರತೀ ವಾರ್ಡ್‍ಗೆ 1 ಕೋಟಿ ರೂ.ವರೆಗೂ ಅನುದಾನ ನೀಡುವ ಅವಕಾಶ ಮೇಯರ್‍ಗಿದೆ. ಆದರೆ ಆಯುಕ್ತರ ಬದಲಾವಣೆ ಕಾರಣದಿಂದಾಗಿ ಪುಷ್ಪಲತಾ ಜಗನ್ನಾಥ್ ಅವರಿಗೆ ಅನುದಾನ ನೀಡಲು ವಿಳಂಬವಾಯಿತು. ಅಲ್ಲದೆ 3 ತಿಂಗಳ ಹಿಂದೆ ಘೋಷಿಸಿದ 50 ಲಕ್ಷ ರೂ. ಅನುದಾನ ಬಿಡುಗಡೆಗೂ ಆಯುಕ್ತರು ಅಂಕಿತ ಹಾಕಿಲ್ಲ. ಪರಿಣಾಮ ಸದಸ್ಯರಲ್ಲಿ ಉಂಟಾಗಿರುವ ಅಸಮಾಧಾನ ಜಟಾಪಟಿಗೆ ಕಾರಣ ವಾಯಿತು. ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದ ಬಳಿಕ, ಮೇಯರ್ ಪುಷ್ಪಲತಾ ಜಗನ್ನಾಥ್ ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 65 ಸದಸ್ಯರ ಪ್ರತಿನಿಧಿಯಾಗಿ ಮೇಯರ್ ಸ್ಥಾನದಲ್ಲಿದ್ದೇನೆ. ಸದಸ್ಯರು ಹೊರ ಹೋಗುವಾಗ ಸಮಾದಾನಪಡಿಸುವ ಸೌಜನ್ಯವನ್ನೂ ನೀವು ತೋರಲಿಲ್ಲ. ಯಾವ ಆಯುಕ್ತರೂ ಈ ರೀತಿಯಲ್ಲಿ ನಡೆದು ಕೊಂಡಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಗುರುದತ್ ಹೆಗ್ಡೆ, ಪಾಲಿಕೆಯಲ್ಲಿ ಅನುದಾನ ಕೊರತೆ ಇರುವಾಗ ಕೂಡಲೇ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಪೌರಕಾರ್ಮಿಕರಿಗೇ ಸಂಬಳ ನೀಡಲು ನಮ್ಮ ಬಳಿ ಹಣವಿಲ್ಲ. ಈ ಪರಿಸ್ಥಿತಿಯಲ್ಲಿ ವಾರ್ಡ್‍ಗಳಿಗೆ ಅನುದಾನ ಕೊಡು ವುದು ಹೇಗೆ? ಎಂದು ತಾವೂ ಸಭೆಯಿಂದ ನಿರ್ಗಮಿಸಿದರು. ಬಳಿಕ ಮೇಯರ್ ಪುಷ್ಪಲತಾ ಜಗನ್ನಾಥ್, ಈ ಹಿಂದಿನ ಎಲ್ಲಾ ಮೇಯರ್ 3 ಕಂತಿನಲ್ಲಿ ಪ್ರತಿ ವಾರ್ಡಿಗೆ 35 ಲಕ್ಷ ರೂ. ಅನುದಾನ ಕೊಟ್ಟಿದ್ದಾರೆ. ಆದರೆ, ನನ್ನ ಅವಧಿಯಲ್ಲಿ ಅನುದಾನ ಸರಿಯಾಗಿ ಹಂಚಿಕೆಯಾಗಿಲ್ಲ. 50 ಲಕ್ಷ ಬಿಡುಗಡೆ ಮಾಡಿ ಎಂದರೆ ಆಯುಕ್ತರು ಯಾವುದೇ ಉತ್ತರ ಕೊಡದೆ ಹೊರಟು ಹೋದರೆಂದು ಅಸಹಾಯಕ ನುಡಿಗಳನ್ನಾಡಿದರು.

 

 

Translate »