ಮೈಸೂರಲ್ಲಿ ಇಂದು ಮೋದಿ ಹವಾ
ಮೈಸೂರು

ಮೈಸೂರಲ್ಲಿ ಇಂದು ಮೋದಿ ಹವಾ

April 9, 2019

ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ 5 ಗಂಟೆಗೆ ಮೈಸೂರು, ಚಾ.ನಗರ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಭಾಷಣ

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ (ಏ. 9) ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭಾರೀ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ.

ಚಿತ್ರದುರ್ಗದಿಂದ ವಿಶೇಷ ವಿಮಾನದಲ್ಲಿ ಸಂಜೆ 4.40 ಗಂಟೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಮಂತ್ರಿಗಳು ರಸ್ತೆ ಮೂಲಕ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿ, ಸಂಜೆ 5 ಗಂಟೆಗೆ ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಾದ ಪ್ರತಾಪ್ ಸಿಂಹ ಹಾಗೂ ವಿ. ಶ್ರೀನಿವಾಸಪ್ರಸಾದ್ ಪರ ಬಹಿರಂಗ ಸಭೆಯಲ್ಲಿ ಭಾಷಣ ಮಾಡುವರು. ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿಗಳಾದ ಪ್ರತಾಪ್‍ಸಿಂಹ, ವಿ.ಶ್ರೀನಿವಾಸ ಪ್ರಸಾದ್, ಮೈಸೂರು ನಗರ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಚಾಮರಾಜನಗರ ಜಿಲ್ಲಾ ಧ್ಯಕ್ಷರು ಉಪಸ್ಥಿತರಿರುವರು.

ಲಕ್ಷಕ್ಕೂ ಅಧಿಕ ಜನ ನಿರೀಕ್ಷೆ: ಬಿಜೆಪಿ ಚುನಾ ವಣಾ ಪ್ರಚಾರ ಸಭೆಗೆ ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದ್ದು, ಮಹಾರಾಜ ಕಾಲೇಜು ಮೈದಾನದಲ್ಲಿ ಜರ್ಮನ್ ಟೆಂಟ್ ಮಾದರಿಯ ಬೃಹತ್ ಪೆಂಡಾಲ್ ಹಾಕಲಾಗಿದ್ದು, ವಿಐಪಿ, ಮಹಿಳೆ ಯರು ಹಾಗೂ ಜನರಿಗಾಗಿ ಪ್ರತ್ಯೇಕ ಎನ್‍ಕ್ಲೋಸರ್ ಗಳನ್ನು ಸಿದ್ಧಪಡಿಸಿ, ಆಸನಗಳ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ವೇದಿಕೆ: ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಭದ್ರತಾ ಜವಾಬ್ದಾರಿ ಹೊತ್ತಿರುವ ಎಸ್ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಅಧಿಕಾರಿಗಳ ನಿರ್ದೇಶನ ದಂತೆ 30 ಅಡಿ ಅಗಲ, 20 ಅಡಿ ಉದ್ದ ಹಾಗೂ 8 ಅಡಿ ಎತ್ತರದ ಸುವ್ಯವಸ್ಥಿತ ಹಾಗೂ ಸುರಕ್ಷಿತ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಅದರ ಹಿಂದೆಯೇ ಪ್ರತ್ಯೇಕ ರೆಸ್ಟ್ ರೂಂ ರೀತಿ ಎನ್ ಕ್ಲೋಸರ್ ನಿರ್ಮಿಸಿ ಅಲ್ಲಿ ವಿಶೇಷ ಶೌಚಾಲಯ, ರಿಫ್ರೆಷ್‍ಮೆಂಟ್, ವಿಶ್ರಾಂತಿಗೆ ವ್ಯವಸ್ಥೆ ಮಾಡ ಲಾಗಿದ್ದು, ಅದನ್ನು ಪ್ರವೇಶ ನಿಷಿದ್ಧ ಸ್ಥಳವ ನ್ನಾಗಿಸಿ ಭಾರೀ ಭದ್ರತೆ ಒದಗಿಸಲಾಗಿದೆ.

ಇನ್ನಿಲ್ಲದ ಭದ್ರತೆ: ಪ್ರಧಾನಮಂತ್ರಿಗಳ ಆಗ ಮನದ ಹಿನ್ನೆಲೆಯಲ್ಲಿ ಮಹಾರಾಜ ಕಾಲೇಜು ಮೈದಾನ, ಮಂಡಕಳ್ಳಿ ವಿಮಾನ ನಿಲ್ದಾಣ ಹಾಗೂ ಅವರು ಸಾಗುವ ಮಾರ್ಗದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಭಾರೀ ಬಂದೋಬಸ್ತ್ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ. ಮಹಾರಾಜ ಕಾಲೇಜು ಮೈದಾನ ದಲ್ಲಿ ವಿಐಪಿ ಸೇರಿ ಒಟ್ಟು 12 ಪ್ರವೇಶ ದ್ವಾರಗಳ ವ್ಯವಸ್ಥೆ ಮಾಡಿ, ಪ್ರತೀ ದ್ವಾರದಲ್ಲಿ ಮೆಟಲ್ ಡೋರ್ ಡಿಟೆಕ್ಟರ್‍ಗಳನ್ನು ಅಳವಡಿಸಲಾಗಿದೆ. ವಿಧ್ವಂಸಕ ಕೃತ್ಯ ತಡೆ ತಂಡ, ಶ್ವಾನದಳ, ಬೆರಳಚ್ಚು ಮುದ್ರೆ ಘಟಕದ ಸಿಬ್ಬಂದಿ ಪ್ರತೀ ಗಂಟೆಗೊಮ್ಮೆ ತಪಾಸಣೆ ಮಾಡುತ್ತಿದ್ದಾರೆ. ವೇದಿಕೆಯಲ್ಲಿ ಪ್ರಧಾನಮಂತ್ರಿಗಳು ನಿಂತು ಭಾಷಣ ಮಾಡುವ ಪೋಡಿಯಂ ಬಳಿ ವಿಶೇಷ ಕಟ್ಟೆಚ್ಚರ ವಹಿಸಿ ಇಡೀ ಸಭಾಂಗಣ ಹಾಗೂ ಹೊರ ಆವರಣದಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಕಾನ್ವೇ ರಿಹರ್ಸಲ್: 2 ಟೈಯರ್ ಸೆಕ್ಯೂರಿಟಿ (Z+) ನೀಡಬೇಕಾಗಿರುವುದರಿಂದ ಪ್ರಧಾನಮಂತ್ರಿಗಳನ್ನು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮಹಾರಾಜ ಕಾಲೇಜು ಮೈದಾನಕ್ಕೆ ಕರೆತರುವ ನಂಜನಗೂಡು ರಸ್ತೆ, ಎಲೆ ತೋಟ ರಸ್ತೆ, ಜೆಎಲ್‍ಬಿ ರಸ್ತೆ, ಬುಲೇವಾರ್ಡ್ ರಸ್ತೆಗಳಲ್ಲಿ ಕಾನ್ವೇ, ಎಸ್ಕಾರ್ಟ್ ಮಾಡುವ ಬಗ್ಗೆ ಮೈಸೂರು ನಗರ ಸಿವಿಲ್ ಹಾಗೂ ಸಂಚಾರ ಪೊಲೀಸರು ಇಂದು ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ತಾಲೀಮು ನಡೆಸಿದರು.

ಮೋದಿ ರ್ಯಾಲಿಗೆ ಹೊರ ಜಿಲ್ಲೆಗಳಿಂದಲೂ ಭದ್ರತೆಗಾಗಿ ಬಂದಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮೈಸೂರಿನ ಸಿಎಆರ್ ಮೈದಾನದಲ್ಲಿ ಇಂದು ಬೆಳಿಗ್ಗೆ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರು ಬಂದೋಬಸ್ತ್ ಬಗ್ಗೆ ವಿವರಿಸಿದರು.

ಜೀರೋ ಟ್ರಾಫಿಕ್: ಪ್ರಧಾನಮಂತ್ರಿಗಳು ನಿರ್ಗಮಿಸುವವರೆಗೆ ಅವರು ಸಾಗುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿರುವ ಪೊಲೀಸರು, ಆ ವೇಳೆ ಶೂನ್ಯ ಸಂಚಾರದೊಂದಿಗೆ ಬದಲಿ ಮಾರ್ಗ ವ್ಯವಸ್ಥೆ ಮಾಡಿದ್ದಾರೆ.

ಮೈಸೂರು ನಗರ ಹಾಗೂ ಜಿಲ್ಲಾ ಪೊಲೀಸರು, ಎಸ್‍ಪಿಜಿ ಅಧಿಕಾರಿಗಳ ಸೂಚನೆಯಂತೆ ಕಟ್ಟೆಚ್ಚರ ವಹಿಸಿ, ಪ್ರಧಾನಿ ಭೇಟಿ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಿದ್ದಾರೆ.

Translate »