ಅಂತೂ ಜನತೆ ಸಂಕಷ್ಟಕ್ಕೆ ದನಿಯಾಗದೇ  ಸಿದ್ದಲಿಂಗಯ್ಯ ಮೌನವಾದರು…
ಮೈಸೂರು

ಅಂತೂ ಜನತೆ ಸಂಕಷ್ಟಕ್ಕೆ ದನಿಯಾಗದೇ ಸಿದ್ದಲಿಂಗಯ್ಯ ಮೌನವಾದರು…

June 15, 2021

ಮೈಸೂರು,ಜೂ.14(ಪಿಎಂ)- ಅಧಿಕಾರ ಮತ್ತು ರಾಜಕಾರಣದ ಜೊತೆಗೆ ಅವರಿಗಿದ್ದ ಸಖ್ಯವೇನೋ ಅಥವಾ ಅವರಲ್ಲಿ ಬದಲಾಗಿದ್ದ ರಾಜಕಾರಣದ ನಿಲುವಿನ ಕಾರಣಕ್ಕೇನೋ ಜನತೆಯ ಪ್ರಸ್ತುತದ ಸಂಕಷ್ಟಕ್ಕೆ ದನಿಯಾಗ ಬೇಕಿದ್ದ ಸಾಹಿತಿ ಡಾ.ಸಿದ್ದಲಿಂಗಯ್ಯ ಮೌನ ವಾಗಿದ್ದರು. ಈ ಕಪ್ಪುಚುಕ್ಕೆ ಆ ದಲಿತ ಕಾವ್ಯ ಸೂರ್ಯನ ಮೇಲೆ ಉಳಿದೇ ಉಳಿಯುತ್ತದೆ ಎಂದು ವಿಷಾದಿಸಿದರು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್.

ಮೈಸೂರಿನ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಜನಸ್ಪಂದನಾ ಟ್ರಸ್ಟ್ ವತಿ ಯಿಂದ ಸೋಮವಾರ ಹಮ್ಮಿಕೊಂಡಿದ್ದ ಸಾಹಿತಿ ಡಾ.ಸಿದ್ದಲಿಂಗಯ್ಯ ಅವರ ಶ್ರದ್ಧಾಂ ಜಲಿ ಸಭೆಯಲ್ಲಿ ಆನ್‍ಲೈನ್ ಮೂಲಕ ಅವರು ಮಾತನಾಡಿದರು.

ಇಡೀ ದೇಶದಲ್ಲಿ ಇಂದು ಜನತೆ ಸಂಕ ಷ್ಟಕ್ಕೆ ಸಿಲುಕಿದ್ದಾರೆ. 6 ತಿಂಗಳಿಂದ ದೆಹಲಿ ಯಲ್ಲಿ ರೈತರು ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಕೋವಿಡ್ ಹೆಸರಿನಲ್ಲಿ ರಾಜ್ಯದಲ್ಲೂ ಬಹುಪಾಲು ಜನ ಬೀದಿಪಾಲಾಗಿದ್ದಾರೆ. ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭ ದಲ್ಲಿ ಜನತೆ ಪರವಾಗಿ ಮಾತನಾಡುವ, ಬರೆಯುವವರು ಅಸಂಖ್ಯೆಯಲ್ಲಿ ಬೇಕು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜನತೆಯ ದನಿಯಾಗಬೇಕಿದ್ದ ಡಾ.ಸಿದ್ದಲಿಂಗಯ್ಯ ಮೌನ ವಹಿಸಿದ್ದರು. ನಾವು ವಿರೋಧಿಸುವ ರಾಜಕಾರಣ ಮತ್ತು ಪಂಥದ ಜೊತೆಗೆ ಅವರು ಸಹಜ ಸ್ನೇಹ ಹೊಂದಿದ್ದರು. ಹೀಗೆ ವಿಮರ್ಶೆ ಮತ್ತು ಟೀಕೆಗೆ ಗುರಿಯಾಗಿದ್ದರು ಎಂದು ವಿಷಾದಿಸಿದರು.

ಕನ್ನಡ ಕಾವ್ಯ ಲೋಕದ ದಿಕ್ಕನ್ನು ಬದ ಲಿಸಿದ ಡಾ.ಸಿದ್ದಲಿಂಗಯ್ಯ ಇಂದು ನಮ್ಮನ್ನು ಅಗಲಿದ್ದಾರೆ. ಇನ್ನು ಹಲವು ಕಾಲ ಅವರು ಬಾಳಿ ಬದುಕಬೇಕಿತ್ತು. ನಾನು ಅವರ ಕಿರಿಯ ಒಡನಾಡಿ. ಕಾವ್ಯ ಎಂಬುದು ಓದಿಗೆ ಸಂಬಂ ಧಿಸಿರುವ ಹಿನ್ನೆಲೆಯಲ್ಲಿ ಅದು ಶಿಷ್ಟ ವಲ ಯಕ್ಕೆ ಮಾತ್ರ ದಕ್ಕಿತ್ತು. ಆದರೆ ದಲಿತ ಮತ್ತು ಬಂಡಾಯ ಸಾಹಿತ್ಯದ ಕಾಲಘಟ್ಟವು ರಾಜ್ಯದ ಅಸಂಖ್ಯಾತ ಜನತೆಯ ಆಶೋತ್ತರಗಳನ್ನು ಕಾವ್ಯ-ಸಾಹಿತ್ಯಕ್ಕೆ ಪರಿಚಯಿಸಿತು. ಹೀಗಾಗಿ 80ರ ದಶಕದಲ್ಲಿ ಹೊಸ ಯುಗ ಆರಂಭ ವಾಗಿ, ಕಾವ್ಯ ದುಡಿಯುವ ಜನತೆಯ ನಾಲಿಗೆ ಮೇಲೆ ಹರಿದಾಡುವಂತಾಯಿತು. ಜನತೆಯೇ ಕವಿತೆಗಳನ್ನು ಹಾಡುವಂತಾದ ಕಾಲಘಟ್ಟ ಇದು. ಹೀಗೆ ದುಡಿಯುವ ಜನರು ಹಾಡಿದ ಬಹುತೇಕ ಹಾಡುಗಳು ಸಿದ್ದಲಿಂಗಯ್ಯ ಕಾವ್ಯವಾಗಿದ್ದವು ಎಂದು ಸ್ಮರಿಸಿದರು.

ಕರ್ನಾಟಕದ ದಲಿತ, ದಮನಿತ ಸಮು ದಾಯಗಳು ಸಿದ್ದಲಿಂಗಯ್ಯನವರ ಕಾವ್ಯ ಗಳನ್ನು ತಮ್ಮದೆಂದು ಹಾಡಿದರು. ಅಂತೆಯೇ ಎಡಪಂಥೀಯ ಪಕ್ಷದ ಕಾರ್ಯಕ್ರಮ ಗಳು, ರೈತ ಚಳುವಳಿ ಮತ್ತು ದಲಿತ ಚಳ ವಳಿಯಲ್ಲಿ ನಾವು ಸಿದ್ದಲಿಂಗಯ್ಯನವರ ಕಾವ್ಯಗಳನ್ನು ಸಂದರ್ಭಕ್ಕೆ ಅನುಸಾರವಾಗಿ ಮಾರ್ಪಾಡು ಮಾಡಿಕೊಂಡು ಹಾಡಿ ದ್ದೇವೆ. ದಲಿತ ಮತ್ತು ಬಂಡಾಯ ಸಾಹಿತ್ಯ ನಿರ್ದಿಷ್ಟವಾಗಿ ಕೇವಲ ದಲಿತ ಸಮು ದಾಯಕ್ಕೆ ಸೀಮಿತವಾಗಿರಲಿಲ್ಲ. ಬದಲಿಗೆ ಎಲ್ಲಾ ಬಡವರ, ದಮನಿತರ ಬವಣೆ ಗಳನ್ನು ಪ್ರತಿನಿಧಿಸುತ್ತಿದ್ದವು ಎಂದರು.

ರಾಜ್ಯದ ವಿವಿಧ ಹೋರಾಟಗಳಿಗೆ ಹಾಡಿನ ದನಿಯನ್ನು ಒದಗಿಸಿಕೊಟ್ಟವರು ದಲಿತ ಕವಿಗಳಾಗಿದ್ದರು. ಅವರ ಪೈಕಿ ಸಿದ್ದ ಲಿಂಗಯ್ಯ ಪ್ರಮುಖರು. ಸಂಗೀತದ ಜ್ಞಾನ ಇಲ್ಲವಾದರೂ ಸಿದ್ದಲಿಂಗಯ್ಯನವರು ಬರೆದ ಹಾಡುಗಳು ನಾಲಿಗೆ ಮೇಲೆ ಸುಲಭವಾಗಿ ಬರುತ್ತಿದ್ದವು. ಕವಿತೆಗಳಾಗಿ ಅವುಗಳನ್ನು ವಾಚಿಸಬೇಕಾದರೆ ಸರಳ ಎನ್ನಿಸಿದರೂ ಹಾಡುಗಳಾಗಿ ಹೊರಹೊಮ್ಮುವಾಗ ಜನತೆಯಲ್ಲಿ ಉತ್ಸಾಹ ಉಂಟು ಮಾಡು ತ್ತಿದ್ದವು ಎಂದು ತಿಳಿಸಿದರು.
ಜನಪರ ತಿರುವು ನೀಡಿದ ಕುವೆಂಪು: ಸಂಚಲನ ಮತ್ತು ಅನುಭೂತಿ ಉಂಟು ಮಾಡುವುದೇ ಕಾವ್ಯದ ನಿಜವಾದ ಗುಣ. ಅಂತಹ ಗುಣವನ್ನು ಸಿದ್ದಲಿಂಗಯ್ಯನವರ ಕವಿತೆಗಳು ಒಳಗೊಂಡಿದ್ದವು. ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ಬಹಳ ದೊಡ್ಡ ಜನಪರ ವಾದ ತಿರುವು ನೀಡಿದರು. ಅಂತೆಯೇ ಕವಿ ಮಾತ್ರವಲ್ಲದೆ, ಜನತೆಯೇ ತಮ್ಮ ಆಶೋ ತ್ತರಗಳನ್ನು ಹೇಳಿಕೊಳ್ಳುವಂತಹ ತಿರುವನ್ನು ದಲಿತ ಮತ್ತು ಬಂಡಾಯ ಸಾಹಿತ್ಯ ಕೊಟ್ಟಿತು. ಆವರೆಗೆ ಅಕ್ಷರ ಲೋಕದಲ್ಲಿ ತಮ್ಮ ಅನುಭವ ದಾಖಲಿಸದ ಎಷ್ಟೋ ಸಮುದಾಯಗಳು ತಮ್ಮ ನೋವುಗಳನ್ನು ಹೇಳಿಕೊಂಡವು. ಇದರ ಮುಂಚೂಣಿ ನಾಯಕರಾಗಿ ಸಿದ್ದಲಿಂಗಯ್ಯ ಹೊರ ಹೊಮ್ಮಿದರು ಎಂದು ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷರೂ ಆದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ರಂಗ ಕರ್ಮಿ ಜನಾರ್ಧನ್ (ಜನ್ನಿ), ಲೇಖಕ ಚಿನ್ನಸ್ವಾಮಿ ವಡ್ಡಗೆರೆ, ಮುಖಂಡರಾದ ಬಿ.ಎಸ್.ಸತ್ಯನಾರಾಯಣ್, ಡಾ.ಸ್ವಾಮಿ ಆನಂದ್, ಅರಗು ಮತ್ತು ಬಣ್ಣ ಕಾರ್ಖಾನೆ ಮಾಜಿ ಅಧ್ಯಕ್ಷ ಹೆಚ್.ಎ. ವೆಂಕಟೇಶ್ ಮತ್ತಿತರರು ಹಾಜರಿದ್ದರು.

Translate »