ಕೌಂಟರ್‍ಗಳ ಮುಂದೆ ಸಾಲುಗಟ್ಟಿದ ಜನ;  ಸಾವಿರಕ್ಕೂ ಅಧಿಕ ಮಂದಿ ಹೆಸರು ನೋಂದಣಿ
ಮೈಸೂರು

ಕೌಂಟರ್‍ಗಳ ಮುಂದೆ ಸಾಲುಗಟ್ಟಿದ ಜನ; ಸಾವಿರಕ್ಕೂ ಅಧಿಕ ಮಂದಿ ಹೆಸರು ನೋಂದಣಿ

September 27, 2021

ಮೈಸೂರು,ಸೆ.26(ಆರ್‍ಕೆಬಿ)-ಪಂಡಿತ್ ದೀನ್‍ದಿಯಾಳ್ ಉಪಾಧ್ಯಾಯರ ಜನ್ಮದಿನದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ಮತ್ತು ಪ್ರಕೋಷ್ಠ ವತಿಯಿಂದ ಭಾನುವಾರ ಗನ್‍ಹೌಸ್ ಬಳಿಯ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರಿಗಾಗಿ ಸರ್ಕಾರಿ ಯೋಜನೆಗಳ ಬೃಹತ್ ನೋಂದಣಿ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ಮಂದಿ ತಮ್ಮ ಹೆಸರು ನೋಂದಾಯಿಸಿಕೊಂಡರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಕೆ.ಎಂ.ನಿಶಾಂತ್ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕರ ಸಮಾವೇಶ ನಡೆಸಲಾಯಿತು. ಈ ವೇಳೆ ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ಅಂಕಿ ಅಂಶ ಕಾರ್ಯಕ್ರಮದಡಿ ಇ-ಶ್ರಮ್ ಗುರುತಿನ ಚೀಟಿ ಯೋಜನೆಗೆ ನೋಂದಣಿ ಕಾರ್ಯ ನಡೆಯಿತು. ಈ ವೇಳೆ ನಾನಾ ವರ್ಗದ 1113 ಮಂದಿ ತಮ್ಮ ಹೆಸರು, ವಿಳಾಸ ನೋಂದಣಿ ಮಾಡಿಕೊಂಡರು.

ಸಮಾವೇಶಕ್ಕೆ ಚಾಲನೆ ನೀಡಿದ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ದೇಶದ 38 ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಸ್ಮಾರ್ಟ್ ಕಾರ್ಡ್‍ಗೆ ನೋಂದಾಯಿಸಿ ಅದರ ಅಂಕಿ ಅಂಶಕ್ಕೆ ಅನುಗುಣವಾಗಿ ಸಾಮಾಜಿಕ ಭದ್ರತಾ ಕಾರ್ಯ ಕ್ರಮಗಳನ್ನು ಜಾರಿಗೆ ತರುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಇ-ಶ್ರಮ ಗುರುತಿನ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಅವರ ವೃತ್ತಿಗೆ ಅನುಗುಣವಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಮುಂದೆ ಜಾರಿಗೊಳಿಸುವ ಯೋಜನೆಗಳು ನೇರವಾಗಿ ತಲುಪಲಿವೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಶ್ರಮಿಕರ ಅಭ್ಯು ದಯವೇ ನರೇಂದ್ರ ಮೋದಿ ಸರ್ಕಾರದ ಮೂಲ ಆಶಯವಾಗಿದೆ. ಕಾರ್ಮಿಕ ವರ್ಗ ಆರ್ಥಿಕವಾಗಿ ಸುಸ್ಥಿರಗೊಂಡರೆ, ದೇಶದ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ಹೊಂದಲಿದೆ. ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರ ಅಂತ್ಯೋದಯದ ಕಲ್ಪನೆಯನ್ನು ಮೋದಿ ಸಾಕಾರಗೊಳಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಮೈಸೂರು ನಗರ ಪ್ರಭಾರಿ ಹೀರೇಂದ್ರ ಶಾ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರಸನ್ನನಾಯಕ್, ನಗರ ಸಂಚಾಲಕ ಕೆ.ಪಿ.ಮಧುಸೂದನ್, ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಜಯಶಂಕರ್, ವಸಂತ್‍ಗೌಡ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ.ಗಿರಿಧರ್, ವಾಣೀಶಕುಮಾರ್, ಸೋಮಸುಂದರ್ ಇನ್ನಿತರರು ಉಪಸ್ಥಿತರಿದ್ದರು.

Translate »