ಜನರ ಕಷ್ಟಕ್ಕೆ ಸ್ಪಂದಿಸುವವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ
ಮೈಸೂರು

ಜನರ ಕಷ್ಟಕ್ಕೆ ಸ್ಪಂದಿಸುವವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ

September 26, 2021

ಮೈಸೂರು, ಸೆ.25(ಎಸ್‍ಪಿಎನ್)- ಜೀವನದಲ್ಲಿ ಯಾರಿಗೆ ಸಹನೆ, ಕರುಣೆ, ತಾಳ್ಮೆ ಹಾಗೂ ಶಾಂತಿಯಿಂದ ಇತರರ ಕಷ್ಟಕ್ಕೆ ಮಿಡಿಯುತ್ತಾರೋ ಅಂತಹವರು ಮಾತ್ರ ತಮ್ಮ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.
ಮೈಸೂರು ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಮೈಸೂರು ಶರಣ ಮಂಡಳಿ ವತಿಯಿಂದ ಆಯೋಜಿಸಿದ್ದ 2021ರ ಬಸವ ಜಯಂತಿ, ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳ ಹೆಸರಿ ನಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಕೊಡುವ ಪ್ರಶಸ್ತಿ ಯನ್ನು ಶನಿವಾರ ವಿತರಿಸಿ ಮಾತನಾಡಿದರು.

ನಾನು, ಚಿಕ್ಕವನಿದ್ದಾಗ ನನ್ನ ಬೆಳವಣಿಗೆಗೆ ಅಡ್ಡಿ ಪಡಿಸಿದವರಿಗೂ ನಾನು ರಾಜಕೀಯಕ್ಕೆ ಬಂದ ಮೇಲೆ ಅವರ ಕೆಲಸ ಮಾಡಿಕೊಟ್ಟಿದ್ದೇನೆ. ಆ ವೇಳೆ ನಾನು ಎಂದಿಗೂ ರಾಗ-ದ್ವೇಷವಿಲ್ಲದೆ ಕೆಲಸ ಮಾಡಿಕೊಟ್ಟಿದ್ದೇನೆ ಎಂದ ಅವರು, ಸಮಾಜದಲ್ಲಿ ದಿಢೀರ್ ಶ್ರೀಮಂತರಾದ ಮನೆಯವರ ಕಥೆಯನ್ನು ನೋಡಿದ್ದೀರಿ, ಕೇಳಿದ್ದೀರಿ. ಇದರಿಂದಾಗಿ ಆ ಮನೆಗಳಲ್ಲಿ ಅಲ್ಪ ಸಮಯದಲ್ಲಿ ಸುಖ ನೆಲಸಬಹುದು. ನಂತರ ಎದುರಾಗುವ ಕಷ್ಟದ ಸಾಲು.. ಸಾಲು.. ಹೇಳತೀರದು. ಹಾಗಾಗಿ ಮನುಷ್ಯ ತಮ್ಮ ಜೀವನದಲ್ಲಿ ಪರರ ಕಷ್ಟಕ್ಕೆ ಮಿಡಿಯುವ ಗುಣ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಿಲ್ಲ: ಜಿಪಂ ಅಧ್ಯಕ್ಷ ಸ್ಥಾನದಿಂದ ಸಚಿವ ಸ್ಥಾನದವರೆಗೂ ಸಾರ್ವಜನಿಕ ಜೀವನದಲ್ಲಿದ್ದೇನೆ. ಇಂದಿಗೂ ಶಾಸಕನಾಗಿ ಕೆಲಸ ಮಾಡು ತ್ತಿದ್ದೇನೆ. ನನ್ನ ಕ್ಷೇತ್ರದಲ್ಲಿ ನನಗೆ ಮತ ಹಾಕದ ಗ್ರಾಮ ಗಳಿಗೂ ಅನುದಾನ ನೀಡಿ ಅಭಿವೃದ್ಧಿಗೆ ಸಹಕರಿಸಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಪ್ರತಿಯೊಬ್ಬರು, ಇತರರ ಕಷ್ಟಕ್ಕೆ ಮಿಡಿಯುವ ಗುಣ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

379 ಕೋಟಿ ರೂ., ಮೀಸಲು: ಮುಡಾ ವ್ಯಾಪ್ತಿಯಲ್ಲಿ ಬರುವ ಬಡಾವಣೆ, ರಸ್ತೆ, ಯುಜಿಡಿ ನೀರು, ಉದ್ಯಾನ ಗಳು ಅಭಿವೃದ್ಧಿ ಆಗಿಲ್ಲ. ಕಾರಣ ಅನುದಾನ ಕೊರತೆ. ಇದನ್ನು ಮನಗಂಡ ಮುಡಾ ಆಯುಕ್ತ ಡಾ.ನಟೇಶ್, ಒನ್ ಟೈಂ ಅಭಿವೃದ್ಧಿಗೆ 379 ಕೋಟಿ ರೂ. ಪ್ರಸ್ತಾವನೆಗೆ ಸಂಸದರು, ಜನಪ್ರತಿನಿಧಿಗಳು ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಚಿವ ಸಂಪುಟದಲ್ಲಿ ಅನು ಮೋದನೆ ಪಡೆದುಕೊಂಡ ಪ್ರಸಂಗವನ್ನು ವಿವರಿಸಿದರು.

ರಾಜೇಂದ್ರ ಶ್ರೀಗಳ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ: ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ವಿವಿಧ ಹುದ್ದೆ ಯಲ್ಲಿ ಕೆಲಸ ನಿರ್ವಹಿಸಿ, ಇಂದು ಮುಡಾ ಆಯುಕ್ತ ರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕಳೆದ 25-30 ವರ್ಷಗಳ ಹಿಂದೆ ಕೆಲ ಸಂಘ-ಸಂಸ್ಥೆಗಳು ಕಡಿಮೆ ದರದಲ್ಲಿ ಸಿಎ ನಿವೇಶನ ಪಡೆದು, ಈ ನಿವೇಶನ ಅಭಿವೃದ್ಧಿಪಡಿಸದೇ ಖಾಲಿ ಬಿಟ್ಟಿದ್ದರು. ಇಂತಹ ನಿವೇಶನಗಳನ್ನು ವಾಪಸ್ಸು ಪಡೆದು ಮುಡಾಗೆ ಲಾಭ ಮಾಡಿಕೊಟ್ಟಿದ್ದಾರೆ. ಬಿಬಿಎಂಪಿ ನಿವೃತ್ತ ಇಂಜಿನಿಯರ್ ಲಯನ್ ಕೆ.ದೇವೇಗೌಡರು, ಮಂಡ್ಯ ಜಿಲ್ಲೆ ಪಾಂಡವ ಪುರ ತಾಲೂಕಿನ ಸುಂಕಾತೊಣ್ಣೂರು ಭಾಗದವರು, ನಾನು ಹುಣಸೂರಿನಲ್ಲಿ ಶಾಸಕನಾಗಿದ್ದಾಗ ಎಇಇಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ನಂತರ ಬಿಬಿಎಂಪಿ ಯಲ್ಲಿ ಕೆಲಸ ನಿರ್ವಹಿಸಿ, ಇತ್ತೀಚೆಗೆ ನಿವೃತ್ತಿ ಹೊಂದಿ ಮೈಸೂರಿನ ಲಯನ್ ಸಂಸ್ಥೆ ಮೂಲಕ ಸಮಾಜ ಸೇವೆ ಯಲ್ಲಿ ತೊಡಗಿದ್ದಾರೆ. ಅಂತೆಯೇ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕನ್ನಡ ಕಾರ್ಯಕ್ರಮ ಗಳು ಗ್ರಾಮೀಣ ಮಟ್ಟದಲ್ಲಿ ಹಮ್ಮಿಕೊಂಡು ಮೈಸೂ ರಿನ ಮನೆ ಮಾತಾಗಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮ ಣರ ಸಂಘ ಜಿಲ್ಲಾಧ್ಯಕ್ಷರಾಗಿರುವ ಡಿ.ಟಿ.ಪ್ರಕಾಶ್ ಸಹ ಸಮಾಜ ಸೇವೆಯಲ್ಲಿ ತೊಡಗಿದ್ದು, ಇವರಿಗೂ ರಾಜೇಂದ್ರ ಶ್ರೀಗಳ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರು ವುದು ಉತ್ತಮ ಕಾರ್ಯ ಎಂದು ಬಣ್ಣಿಸಿದರು.

ಕುಪ್ಪೂರು ಶ್ರೀಗಳ ನಿಧನ ಕಂಬನಿ: ಕುಪ್ಪೂರು ಶ್ರೀಗಳು ರಾಜ್ಯದ ಜನಪ್ರತಿನಿಧಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರು ಹೃದಯಾಘಾತದಿಂದ ನಿಧನ ರಾದರು ಎಂಬುದನ್ನು ನಂಬಲಿಕ್ಕೂ ಸಾಧ್ಯವಿಲ್ಲ. ಹಾಗಾಗಿ ಮನುಷ್ಯ ತಮ್ಮ ಜೀವಿತಾವಧಿಯಲ್ಲಿ ಸಾಧ್ಯವಾದಷ್ಟು ಸಮಾಜದ ಕಷ್ಟಕ್ಕೆ ಮಿಡಿಯುವ ಗುಣ ಬೆಳೆಸಿಕೊಳ್ಳ ಬೇಕು. ಈ ಕಾರ್ಯವನ್ನು ಕುಪ್ಪೂರು ಶ್ರೀಗಳಲ್ಲಿ ಕಾಣ ಬಹುದಾಗಿತ್ತು ಎಂದು ಕಂಬನಿ ಮಿಡಿದರು. ಈ ವೇಳೆ ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಾ ಚಾರ್ಯ ಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯ್ಯಕ್ಷ ಹೆಚ್.ಕೆ.ರಾಮು, ಮೈಸೂರು ದಾಸ್ತಿ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಡಿ.ತಿಮ್ಮಯ್ಯ, ಮೈಸೂರು ಶರಣ ಮಂಡಳಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಬಿ.ಮಹದೇವ ಸ್ವಾಮಿ, ಚಂದ್ರಶೇಖರ್, ಎಂ.ಕೆ.ನಾಗೇಂದ್ರಪ್ರಸಾದ್, ದೇವನೂರು ಬಸವಣ್ಣ, ಮಹದೇವಶೆಟ್ಟಿ, ಮಲ್ಲಣ್ಣ, ಕಾಶಿನಾಥ್, ಪ್ರಭುಸ್ವಾಮಿ ಇದ್ದರು.

Translate »