ಅಭಿವೃದ್ಧಿಯತ್ತ ಜನರ ಮತದಾನ
ಚಾಮರಾಜನಗರ

ಅಭಿವೃದ್ಧಿಯತ್ತ ಜನರ ಮತದಾನ

December 10, 2019

ಗುಂಡ್ಲುಪೇಟೆ, ಡಿ.9(ಸೋಮ್.ಜಿ)- ರಾಜ್ಯದ ವಿಧಾನಸಭಾ ಉಪ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ 12 ಸ್ಥಾನವನ್ನು ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ವಿಜಯೋತ್ಸವ ಆಚರಣೆ ಮಾಡಲಾಯಿತು.

ಪಟ್ಟಣದ ಎಂಡಿಸಿಸಿ ಬ್ಯಾಂಕ್ ವೃತ್ತದಲ್ಲಿ ಸಮಾವೇಶಗೊಂಡ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಜೈ, ನಿರಂಜನ ಕುಮಾರ್‍ಗೆ ಜೈ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನಿರಂಜನ ಕುಮಾರ್, ಇದೊಂದು ಉತ್ತಮವಾದ-ಫಲಿತಾಂಶ. ಜನತೆ 15 ಸ್ಥಾನಗಳಿಗೆ 12 ಸ್ಥಾನಗಳನ್ನು ಗೆಲ್ಲಿಸುವುದರೊಂದಿಗೆ ಅಭಿವೃದ್ಧಿಯ ಕಡೆಗೆ ತಮ್ಮ ಮತದಾನವನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕಾಗಿ ಕಾದಿದ್ದ ಜನತೆ ವಿರೋಧಿ ಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯದ ಜನತೆಗೆ ಸುಭದ್ರ ಮತ್ತು ಸುಸ್ಥಿರ ಹಾಗೂ ಉತ್ತಮ ಅಭಿವೃದ್ಧಿಯನ್ನು ಕೊಡುತ್ತದೆ ಎಂದು ಆಶಾಭಾವನೆಯನ್ನು ವ್ಯಕ್ತಪಡಿಸಿದರು.

ಈ ವೇಳೆ ಮಂಡಲಾಧ್ಯಕ್ಷ ದೊಡ್ಡಹುಂಡಿಜಗದೀಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ಮುಖಂಡರಾದ ಎನ್. ಮಲ್ಲೇಶ್, ಪಿ.ಗಿರೀಶ್, ಪ್ರಣಯ್, ಎಸ್.ಸಿ.ಮಂಜುನಾಥ್, ಗೋವಿಂದ ರಾಜನ್, ನಂದೀಶ್, ಮಂಜುನಾಥ್, ದೇವಯ್ಯ, ನಾಗೇಂದ್ರ, ಪ್ರಭಾಕರ್, ಬಸವಣ್ಣ, ಮಹದೇವಪ್ರಸಾದ್, ನಾಗೇಶ್ ಮತ್ತು ಯುವ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

Translate »