ಗನ್‍ಹೌಸ್ ಬಳಿ ಶೀಘ್ರ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಅನುಮತಿ ಸಂದೇಶ್‍ರಿಗೆ ಸಚಿವ ಬಸವರಾಜ್ ಭರವಸೆ
ಮೈಸೂರು

ಗನ್‍ಹೌಸ್ ಬಳಿ ಶೀಘ್ರ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಅನುಮತಿ ಸಂದೇಶ್‍ರಿಗೆ ಸಚಿವ ಬಸವರಾಜ್ ಭರವಸೆ

September 24, 2020

ಬೆಂಗಳೂರು, ಸೆ.23-ಮೈಸೂರು-ಊಟಿ ರಸ್ತೆಯಲ್ಲಿ ಗನ್‍ಹೌಸ್ ಬಳಿ ಪ್ರಯಾಣಿಕರಿಗೆ ತಂಗುದಾಣ ನಿರ್ಮಿಸಲು ಬಿ.ಒ.ಒ.ಟಿ. ಆಧಾರದ ಮೇಲೆ ಒ.ಒ.ಎಚ್. ಜಾಹೀರಾತು ಸಂಸ್ಥೆಗೆ ಅನುಮತಿ ನೀಡಿದ್ದು, ಕೋವಿಡ್-19 ಕಾರಣದಿಂದ ಇನ್ನೂ ನಿರ್ಮಾಣ ಕಾರ್ಯವನ್ನು ಆರಂಭಿಸಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ವಿಧಾನ ಪರಿಷತ್‍ನಲ್ಲಿ ತಿಳಿಸಿದ್ದಾರೆ.

ಮೈಸೂರಿನಿಂದ ನಂಜನಗೂಡು-ಗುಂಡ್ಲುಪೇಟೆ-ಚಾಮರಾಜನಗರ ಕಡೆಗೆ ಹೋಗುವ ಹೆಚ್ಚಿನ ಪ್ರಯಾಣಿಕರು ಇಲ್ಲಿ ಬಸ್ ಹತ್ತುವುದರಿಂದ ಅವರಿಗೆ ಬಿಸಿಲು-ಮಳೆಯಿಂದ ರಕ್ಷಣೆ ನೀಡಲು 1 ಬಸ್ ತಂಗುದಾಣ ನಿರ್ಮಿಸುವಂತೆ ಸಂದೇಶ್ ನಾಗರಾಜ್ ಅವರು ಮಾಡಿದ್ದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಇಲ್ಲಿ ಬಸ್ ಹತ್ತುವ ಪ್ರಯಾಣಿಕರ ಬವಣೆ ಸರ್ಕಾರದ ಗಮನಕ್ಕೆ ಬಂದಿದ್ದು, ಆದಷ್ಟು ಬೇಗ ಇಲ್ಲಿ ಒಂದು ಬಸ್ ತಂಗುದಾಣ ನಿರ್ಮಿಸಲು ಕ್ರಮ ತೆಗೆದುಕೊಳ್ಳಲಾಗುವುದೆಂದು ನಗರಾಭಿವೃದ್ಧಿ ಸಚಿವರು ಭರವಸೆ ನೀಡಿದರು.

ಒಳಚರಂಡಿ ರಿಪೇರಿ: ಚಾಮರಾಜನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಒಳಚರಂಡಿಯಿಂದ ಕೊಳಚೆ ನೀರು ಉಕ್ಕಿಹರಿದು ಸಾರ್ವಜನಿಕರಿಗೆ ತೊಂದರೆಯಾಗಿದೆ. ಒಳಚರಂಡಿ ಕಾಮಗಾರಿಯ ಕೆಲವು ಮಾರ್ಗಗಳಲ್ಲಿ ಕೊಳವೆ ಮಾರ್ಗ ಕಾಮಗಾರಿ ಪೂರ್ಣಗೊಂಡಿಲ್ಲದೇ ಇರುವುದರಿಂದ ಈ ರೀತಿ ಆಗಿದ್ದು, ಈ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದೆ. ಈ ಮಿಸ್ಸಿಂಗ್ ಲಿಂಕ್ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಸಂದೇಶ್ ಅವರ ಮತ್ತೊಂದು ಪ್ರಶ್ನೆಗೆ ಸಚಿವ ಬಿ.ಎ. ಬಸವರಾಜ್ ತಿಳಿಸಿದರು.

ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ. ಇದರಿಂದ ಒಳಚರಂಡಿ ನೀರು ಉಕ್ಕಿ ರಸ್ತೆಯಲ್ಲಿ ಹರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಂದೇಶ್ ಸಚಿವರ ಗಮನ ಸೆಳೆದಿದ್ದರು. ಚಾಮರಾಜನಗರ ಒಳಚರಂಡಿ ಕಾಮಗಾರಿಯ ಮೊದಲ ಹಂತದಲ್ಲಿ 104 ಕಿ.ಮೀ. ಕೊಳವೆ ಮಾರ್ಗ, 3501 ಮ್ಯಾನ್ ಹೋಲ್,2415 ರಿಸೀವಿಂಗ್‍ಚೇಂಬರ್‍ಗಳನ್ನು ನಿರ್ಮಿಸಲಾಗಿದ್ದು, ಡಿಸೆಂಬರ್ 2018ರಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದರು.

Translate »