ಕೆ.ಆರ್.ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್‍ನಲ್ಲಿ ವಿಕೃತಕಾಮಿ ಪ್ರತ್ಯಕ್ಷ
ಮೈಸೂರು

ಕೆ.ಆರ್.ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್‍ನಲ್ಲಿ ವಿಕೃತಕಾಮಿ ಪ್ರತ್ಯಕ್ಷ

July 23, 2018

ಮೈಸೂರು: ಮೈಸೂರಿನ ಕೆಆರ್ ಆಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್ ಹಾಸ್ಟೆಲ್‍ನಲ್ಲಿ ರಾತ್ರೋರಾತ್ರಿ ವಿಕೃತಕಾಮಿಯೊಬ್ಬ ವಿದ್ಯಾರ್ಥಿಗಳಿಗೆ ಆತಂಕ ಹುಟ್ಟಿಸಿ ಪರಾರಿಯಾಗಿರುವ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.

ಸುಮಾರು ಒಂದು ತಾಸು ಸೈಕೋ ರೀತಿ ವರ್ತಿಸಿ ಕಡೆಗೆ ಮುಂಜಾನೆ 3 ಗಂಟೆ ವೇಳೆಗೆ ಪರಾರಿಯಾಗಿರುವ ದೃಶ್ಯ ಹಾಸ್ಟೆಲ್‍ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂದು ಮಧ್ಯರಾತ್ರಿ ಕೆ.ಆರ್. ಆಸ್ಪತ್ರೆಯ ಕಲ್ಲು ಕಟ್ಟಡ (ಸರ್ಜಿಕಲ್ ಬ್ಲಾಕ್)ದ ಕಡೆಯಿಂದ ಪ್ರವೇಶ ಪಡೆದಿರುವ ಆತ ನರ್ಸಿಂಗ್ ಹಾಸ್ಟೆಲ್‍ನ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಸ್ಥಳದಲ್ಲೇ ಮಲಗಿದ್ದ ಭದ್ರತಾ ಸಿಬ್ಬಂದಿ ರಂಗಸ್ವಾಮಿ ಎಂಬುವರ ಶರ್ಟ್ ಪಾಕೆಟ್‍ನಲ್ಲಿದ್ದ ಮೊಬೈಲ್ ಕಸಿದುಕೊಂಡು ಅಲ್ಲಿಂದ ಹಾಸ್ಟೆಲ್ ಕಟ್ಟಡದ ಹಿಂಭಾಗದಿಂದ ಒಳಗೆ ನುಸುಳಿ 2ನೇ ಅಂತಸ್ತಿಲ್ಲಿ ಮಲಗಿದ್ದ ವಿದ್ಯಾರ್ಥಿನಿಯೋರ್ವಳ ಕತ್ತು ಹಿಸುಕಲು ಪ್ರಯತ್ನಿಸಿದ್ದಾನೆ. ಅಲ್ಲಿ ಒಣ ಹಾಕಿದ್ದ ವಿದ್ಯಾರ್ಥಿನಿಯರ ಉಡುಪುಗಳನ್ನು ತೆಗೆದು ಕೊಂಡು ವಿಚಿತ್ರವಾಗಿ ವರ್ತಿಸಿ ಆತಂಕ ಮೂಡಿಸಿದ್ದಾನೆ.

ಇದರಿಂದ ಗಾಬರಿಗೊಂಡ ವಿದ್ಯಾರ್ಥಿನಿಯರು ಎಚ್ಚರಗೊಂಡು ಕೂಗ ತೊಡಗಿದಾಗ ಅವರ ವೇಲ್‍ಗಳಿಂದ ಬಾಯಿ ಮುಚ್ಚಿಸಲು ಯತ್ನಿಸಿದ ಆತನನ್ನು ಕಂಡು ವಿದ್ಯಾರ್ಥಿನಿಯರು ಹೆದರಿ ತಮ್ಮ ತಮ್ಮ ಕೊಠಡಿಗಳಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾರೆ. ಸುಮಾರು 1 ತಾಸು ಕಾಲ ಇದೇ ರೀತಿ ಅನುಚಿತವಾಗಿ ಸೈಕೋ ತರಹದಲ್ಲಿ ವರ್ತಿಸಿ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಆತ ಆಳೆತ್ತರದ ಕಾಂಪೌಂಡ್ ಹಾರಿ ಪರಾರಿಯಾಗಿರುವ ದೃಶ್ಯ ಹಾಸ್ಟೆಲ್‍ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಳಿಗ್ಗೆಯಾಗುತ್ತಿದ್ದಂತೆ ಹಾಸ್ಟೆಲ್ ವಿದ್ಯಾರ್ಥಿನಿಯರು ಕೆಆರ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಶ್ರೀನಿವಾಸ್ ಅವರ ಬಳಿ ಹೋಗಿ ರಾತ್ರಿ ನಡೆದ ಘಟನೆಯನ್ನು ವಿವರಿಸಿದರು. ತಕ್ಷಣ ಎಚ್ಚೆತ್ತ ಆಸ್ಪತ್ರೆ ಅಧಿಕಾರಿಗಳು ದೇವರಾಜ ಠಾಣೆಗೆ ತೆರಳಿ ಲಿಖಿತ ದೂರು ನೀಡಿದರು.

ಇನ್ಸ್‍ಪೆಕ್ಟರ್ ತಿಮ್ಮರಾಜು ಸೇರಿದಂತೆ ಸಿಬ್ಬಂದಿ ನರ್ಸಿಂಗ್ ಹಾಸ್ಟೆಲ್ ತೆರಳಿ ಮಹಜರು ನಡೆಸಿದ್ದರಲ್ಲದೇ ಅನಾಮಿಕ ವ್ಯಕ್ತಿಯಿಂದ ತೊಂದರೆ ಅನುಭವಿಸಿದ ವಿದ್ಯಾರ್ಥಿನಿಯರಿಂದ ಹೇಳಿಕೆ ಪಡೆದುಕೊಂಡು, ಅಲ್ಲಿನ ಸಿಸಿ ಕ್ಯಾಮರಾ ಫುಟೇಜಸ್ ಪರಿಶೀಲಿಸಿ ದಾಗ ವಿಕೃತಕಾಮಿಯ ವರ್ತನೆ ತಿಳಿಯಿತು. ಪ್ರಕರಣ ದಾಖಲಿಸಿಕೊಂಡಿ ರುವ ದೇವರಾಜ ಠಾಣೆ ಪೊಲೀಸರು,
ಸಿಸಿ ಕ್ಯಾಮರಾ ದೃಶ್ಯಾವಳಿಯ ಸುಳಿವಿನ ಮೇರೆಗೆ ತಲೆಮರೆಸಿಕೊಂಡಿರುವ ಅನಾಮಿಕ ವ್ಯಕ್ತಿಯ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

ಇತ್ತೀಚೆಗೆ ಕೆಆರ್ ಆಸ್ಪತ್ರೆ ಆವರಣದಲ್ಲೇ ಇರುವ ಅಡುಗೆ ಮನೆ ತಾರಸಿ ಮೇಲೆ ಮಲಗಿದ್ದ ಮತ್ತೊರ್ವ ವ್ಯಕ್ತಿಯ ಮೇಲೆ ಮಧ್ಯರಾತ್ರಿ ಹಲ್ಲೆ ನಡೆಸಿ ಆತನ ಮರ್ಮಾಂಗ ಗಾಯಗೊಳಿಸಿ ವ್ಯಕ್ತಿಯೋರ್ವ ಪರಾರಿ ಯಾಗಿದ್ದ ಪ್ರಕರಣವೂ ದೇವರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಆರ್ ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಸರ ಅಪಹರಣ, ಹಲ್ಲೆ, ವಂಚನೆ ಮುಂತಾದ ಅಪರಾಧ ಕೃತ್ಯಗಳು ನಡೆಯುತ್ತಿರುವುದು ಆಸ್ಪತ್ರೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.

ಈ ನಿಟ್ಟಿನಲ್ಲಿ ಎಚ್ಚೆತ್ತ ಕೆಆರ್ ಆಸ್ಪತ್ರೆ ಅಧಿಕಾರಿಗಳು, ಸೆಕ್ಯೂರಿಟಿ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನೇಮಿಸಿ ರಾತ್ರಿ ಸೆಕ್ಯೂರಿಟಿ ಸೂಪರ್‍ವೈಸರ್ ಗಳು ಗಸ್ತು ತಿರುಗುವಂತೆ ಸೂಚನೆ ನೀಡಿದ್ದು, ಅಗತ್ಯ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಘಟನೆ ಸಂಬಂಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಕೆಆರ್ ಆಸ್ಪತ್ರೆ ವೈದ್ಯಕೀಯ ಅದೀಕ್ಷಕ ಡಾ.ಶ್ರೀನಿವಾಸ್ ಅವರು, ಘಟನೆ ಸಂಬಂಧ ದೇವರಾಜ ಠಾಣೆಗೆ ದೂರು ನೀಡಲಾಗಿದ್ದು, ಅನಾಮಿಕ ವ್ಯಕ್ತಿಯ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ನಾವು ಎಲ್ಲಾ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದರು.

Translate »