5 ಹೊಸ ಬಡಾವಣೆ ರಚನೆಗೆ ಮುಡಾ ಸಿದ್ಧತೆ
ಮೈಸೂರು

5 ಹೊಸ ಬಡಾವಣೆ ರಚನೆಗೆ ಮುಡಾ ಸಿದ್ಧತೆ

July 23, 2018

ಮೈಸೂರು:  ಮೈಸೂರು ನಗರ ಬೆಳೆದಂತೆ ಸೂರು ರಹಿತರಿಗೆ ವಸತಿ ಬಡಾವಣೆಗಳನ್ನು ರಚಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಬಡಾವಣೆ, ಸ್ವರ್ಣ ಜಯಂತಿ ನಗರ ಬಡಾವಣೆ, ಶಾಂತವೇರಿ ಗೋಪಾಲಗೌಡ ಬಡಾವಣೆ, ರವೀಂದ್ರ ನಾಥ ಠಾಕೂರ್ ಬಡಾವಣೆಯ 2ನೇ ಹಂತ ಹಾಗೂ ಬಲ್ಲಹಳ್ಳಿ ಬಡಾವಣೆಗಳನ್ನು ರಚನೆ ಮಾಡುವ ಮೂಲಕ ಒಟ್ಟು 7 ಸಾವಿರ ವಿವಿಧ ಅಳತೆಯ ನಿವೇಶನಗಳನ್ನು ವಿತರಿ ಸಲು ಮುಡಾ ಭರದಿಂದ ಪ್ರಕ್ರಿಯೆ ನಡೆಸುತ್ತಿದೆ.

ಭೂ ಸ್ವಾಧೀನ ಮಾಡಿಕೊಂಡು ಬಡಾವಣೆ ರಚಿಸಿ ರಸ್ತೆ, ನೀರು, ವಿದ್ಯುತ್, ಒಳಚರಂಡಿ, ಉದ್ಯಾನವನ, ನಾಗರಿಕ ಸೌಲಭ್ಯ ನಿವೇಶನ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಲಭ್ಯವಾಗುವ ನಿವೇಶನಗಳನ್ನು ನಗರಾಭಿವೃದ್ಧಿ ನಿಯ ಮಾವಳಿಯನುಸಾರ ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡುವುದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಮುಖ ಉದ್ದೇಶ. ಮೈಸೂರು ನಗರ ಅತೀ ವೇಗದಲ್ಲಿ ಅಭಿವೃದ್ಧಿಗೊಳ್ಳುತ್ತಿ ರುವ ರಾಜ್ಯದ 2ನೇ ಅತೀ ದೊಡ್ಡ ಸಾಂಸ್ಕೃತಿಕ ರಾಜಧಾನಿಯಾಗಿದ್ದು, ಬೇರೆ ಬೇರೆ ಕಡೆಗಳಿಂದ ಬಂದು ಇಲ್ಲಿ ವಾಸಿಸುವ ಜನರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಒಂದು ಅಂದಾಜಿನ ಪ್ರಕಾರ ಮೈಸೂರು ನಗರದಲ್ಲಿ ನಿವೇಶನಕ್ಕಾಗಿ ಸುಮಾರು 1 ಲಕ್ಷ ಮಂದಿ ಅರ್ಜಿ ಸಲ್ಲಿಸಿ ಕಳೆದ 15-20 ವರ್ಷಗಳಿಂದ ಕಾಯುತ್ತಿದ್ದಾರೆ. ಈ ಬೇಡಿಕೆಗೆ ತಕ್ಕಂತೆ ನಿವೇಶನ ಒದಗಿಸಲು ಮೈಸೂರು ನಗರದಲ್ಲಿ ಭೂಮಿಯೇ ಇಲ್ಲದಂತಾ ಗಿದೆ. ಕೆಲ ಡೆವಲಪರ್‍ಗಳು, ವಿವಿಧ ಗೃಹ ನಿರ್ಮಾಣ ಸಹಕಾರ ಸಂಘಗಳು ಈಗಾಗಲೇ ರೈತರಿಂದ ಮಾರುಕಟ್ಟೆ ದರದಲ್ಲಿ ಜಮೀನು ಖರೀದಿಸಿ, ಭೂ ಪರಿವರ್ತನೆ ಮಾಡಿಸಿಕೊಂಡು ಮುಡಾದಿಂದ ಬಡಾವಣೆ ರಚನೆಗೆ ಅನುಮೋದನೆ ಪಡೆದು, ಲೇಔಟ್ ಮಾಡಿ ಮಾರಾಟ ಮಾಡುತ್ತಿರುವುದರಿಂದ ಮುಡಾಗೆ ಬಡಾವಣೆ ರಚಿಸಲು ಜಾಗದ ಅಭಾವ ಉಂಟಾಗಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ರಚನೆ ಮಾಡಿದ್ದ ರವೀಂದ್ರನಾಥ್ ಠಾಕೂರ್ ನಗರದ ಬಡಾವಣೆಯ ನಿವೇಶನಗಳನ್ನು ಇತ್ತೀಚೆಗಷ್ಟೇ 2017ರ ಡಿಸೆಂಬರ್ ಮಾಹೆಯಲ್ಲಿ ಅರ್ಹ ಫಲಾನುಭವಿಗಳಿಗೆ ಅಂದಿನ ಮುಖ್ಯಮಂತ್ರಿ ಗಳಾಗಿದ್ದ ಸಿದ್ದರಾಮಯ್ಯ ಅವರು ವಿತರಿಸಿದ್ದರು. ಅದೇ ರೀತಿ ಸುಮಾರು 10 ವರ್ಷಗಳ ಹಿಂದೆ ಲಲಿತಾದ್ರಿನಗರ ಬಡಾವಣೆಯ ನಿವೇಶನ ಹಂಚಿಕೆ ಪ್ರಕ್ರಿಯೆಯು ಸಹ ಇತ್ತೀಚೆಗಷ್ಟೇ ಪೂರ್ಣಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದೀಗ ಮುಡಾ ಆರ್‍ಟಿ ನಗರ 2ನೇ ಹಂತ, ಬಲ್ಲಹಳ್ಳಿ ಬಡಾವಣೆ, ಶಾಂತವೇರಿ ಗೋಪಾಲಗೌಡ ಬಡಾವಣೆ, ಸ್ವರ್ಣಜಯಂತಿ ನಗರ ಬಡಾವಣೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಬಡಾವಣೆಗಳನ್ನು ರಚಿಸಲು ಮುಂದಾಗಿದ್ದು, ವಿವಿಧ ಅಳತೆಯ 7 ಸಾವಿರ ನಿವೇಶನಗಳನ್ನು ನಿಯಮಾನುಸಾರ ಹಂಚಿಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಅದಕ್ಕಾಗಿ 50-50ರ ಅನುಪಾತದಡಿ ಅಂದರೆ, ರೈತರಿಂದ ಪಡೆದ ಜಮೀನಿನಲ್ಲಿ ರಚನೆಯಾದ ಬಡಾವಣೆಯ ಲಭ್ಯ ನಿವೇಶನಗಳ ಪೈಕಿ ಶೇ.50ರಷ್ಟನ್ನು ಭೂ ಮಾಲೀಕರಿಗೆ ಬಿಟ್ಟುಕೊಟ್ಟು ಉಳಿದ ಶೇ.50ರಷ್ಟು ನಿವೇಶನಗಳನ್ನು ಮುಡಾ ಹಂಚಿಕೆ ಮಾಡುವುದಾಗಿದೆ. ಈ ಹಿಂದೆ ಇದ್ದ ಭೂ ಸ್ವಾಧೀನ ವಿಧಾನದಲ್ಲಿ ಭೂ ಮಾಲೀಕರು ಭೂಮಿ ಬಿಟ್ಟುಕೊಡಲು ತೀವ್ರ ವಿರೋಧ ವ್ಯಕ್ತವಾದ ಕಾರಣ, ಮುಡಾಗೆ ಬಡಾವಣೆ ಮಾಡಲು ಸಾಧ್ಯವಾಗದಿರುವುದ ರಿಂದ 50-50ರ ಅನುಪಾತದಲ್ಲಿ ಮಾರ್ಗಸೂಚಿಯಂತೆ ರೈತರನ್ನು ಮನವೊಲಿಸಿ ಬಡಾವಣೆ ನಿರ್ಮಿಸಲು ಮುಡಾ ಹೊಸ ವಿಧಾನವನ್ನು ಅನುಸರಿಸಲು ಹೊರಟಿದೆ.

ಈ ಸಂಬಂಧ ಈಗಾಗಲೇ ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು ಅವರು, ಮೂರ್ನಾಲ್ಕು ಬಾರಿ ರೈತರೊಂದಿಗೆ ಸಮಾಲೋಚನೆ ನಡೆಸಿದಾಗ ಉತ್ತಮ ಪ್ರತಿಕ್ರಿಯೆ ಬಂದಿತ್ತಾದರೂ ಒಡಂಬಡಿಕೆ ಮಾಡಿಕೊಳ್ಳಲು ಕೆಲ ರೈತರು ಹಿಂಜರಿಯುತ್ತಿರುವ ಕಾರಣ ಇಷ್ಟರಲ್ಲೇ ಚಾಮುಂಡೇಶ್ವರ ಕ್ಷೇತ್ರದ ಶಾಸಕರಾಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ಸಮ್ಮುಖದಲ್ಲಿ ಒಂದು ಪ್ರತ್ಯೇಕ ಸಭೆಯನ್ನು ಏರ್ಪಡಿಸಿ ರೈತರ ಮನವೊಲಿಸಲು ಮುಂದಾಗಿದ್ದಾರೆ.

ಈಗಾಗಲೇ ಉದ್ದೇಶಿತ ಈ ಹೊಸ 5 ಬಡಾವಣೆ ನಿರ್ಮಿಸುವ ಸ್ಥಳಗಳಾದ ಬಲ್ಲಹಳ್ಳಿ, ಆಲಾಳು, ಚೌಡಳ್ಳಿ, ಬಂಡಿಪಾಳ್ಯ, ಮಂಡಕಳ್ಳಿ ಹಾಗೂ ಇತರ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅದಕ್ಕಾಗಿ ರಚಿಸಿರುವ ಜಂಟಿ ಅಳತೆ ಸಮಿತಿ (Joint Measurement Committee) ಸದಸ್ಯರು ಸಹ ಈ ನಿಟ್ಟಿನಲ್ಲಿ ಭೂಮಿಯ ವಿಸ್ತೀರ್ಣ ಹಾಗೂ ಇನ್ನಿತರ ಮಾಹಿತಿಗಳನ್ನು ಕಲೆ ಹಾಕಿದ್ದು, ಬಡಾವಣೆ ರಚನೆಗೆ ಸರ್ಕಾರದಿಂದ ಅನುಮೋದನೆ ಪಡೆದು, ಡಿಪಿಆರ್ (ಸಮಗ್ರ ಯೋಜನಾ ವರದಿ) ತಯಾರಿಸಿದ ನಂತರ ನಕ್ಷೆಯೊಂದಿಗೆ ಪ್ರಾಧಿಕಾರದ ಸಭೆಯಲ್ಲಿಟ್ಟು, ಒಪ್ಪಿಗೆ ಪಡೆದ ನಂತರ ಮತ್ತೇ ಸರ್ಕಾರಕ್ಕೆ ಕಳುಹಿಸಿ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋ ದನೆ ಪಡೆದು ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಮುಡಾ ಕಮೀಷ್ನರ್ ಪಿ.ಎಸ್. ಕಾಂತರಾಜು ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಮುಂದಿನ ವಾರ ಮುಡಾ ಸೂಪರಿಂಟೆಂಡಿಂಗ್ ಇಂಜಿನಿಯರ್ ಬಿ.ಕೆ.ಸುರೇಶ್‍ಬಾಬು, ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳಾದ ಆರ್.ಕೆ.ರಾಜು, ಪ್ರಭಾಕರ್, ನಗರ ಯೋಜಕ ಸದಸ್ಯ ಬಿ.ಎನ್.ಗಿರೀಶ್, ವಿಶೇಷ ಭೂಸ್ವಾಧೀನಾಧಿಕಾರಿ ಇಂದ್ರಮ್ಮ ಸೇರಿದಂತೆ ಅಧಿಕಾರಿಗಳೊಂದಿಗೆ ಉದ್ದೇಶಿತ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಹೊಸ ಬಡಾವಣೆಗಳ ಯೋಜನೆಗೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

Translate »