ಲಾರಿ ಮುಷ್ಕರ: ಇಂದಿನಿಂದ  ಇನ್ನಷ್ಟು ತೀವ್ರ ಸಾಧ್ಯತೆ
ಮೈಸೂರು

ಲಾರಿ ಮುಷ್ಕರ: ಇಂದಿನಿಂದ  ಇನ್ನಷ್ಟು ತೀವ್ರ ಸಾಧ್ಯತೆ

July 23, 2018

ಮೈಸೂರು:  ಲಾರಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಯಾವುದೇ ಲಾರಿಗಳು ಭಾನುವಾರವೂ ರಸ್ತೆಗಿಳಿಯಲಿಲ್ಲ. ಸೋಮವಾರದಿಂದ ಮುಷ್ಕರ ಇನ್ನಷ್ಟು ತೀವ್ರಗೊಳ್ಳುವ ಸೂಚನೆ ಇದ್ದು, ದಿನಬಳಕೆ ಹಣ್ಣು, ತರಕಾರಿ, ದವಸ, ಧಾನ್ಯಗಳ ಅಭಾವ ಸೃಷ್ಟಿಯಾಗುವ ಸಾಧ್ಯತೆಗಳಿವೆ.

ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಆಶ್ರಯದಲ್ಲಿ ಎಂಎನ್‍ಜಿಟಿ ರೈಲ್ವೆ ಗೂಡ್ಸ್ ಲಾರಿ ಮಾಲೀಕರ ಸಂಘ, ಮೈಸೂರು ಸಿಟಿ ಲಾರಿ ಟ್ರಾನ್ಸ್‍ಪೋರ್ಟಿಂಗ್ ಏಜೆಂಟ್ಸ್ ಅಸೋಸಿಯೇಷನ್, ಮೈಸೂರು -ಚಾಮರಾಜನಗರ ಲಾರಿ ಮಾಲೀಕರ ಸಂಘ, ಮೈಸೂರು ಸಿಟಿ ಗೂಡ್ಸ್ ಲಾರಿ ಓನರ್ಸ್ ಅಸೋಷಿಯೇಷನ್, ಬಂಡೀಪಾಳ್ಯ ಲಾರಿ ಮಾಲೀಕರ ಸಂಘ, ಮೈಸೂರು ಸಿಟಿ ಲೋಕಲ್ ಲಾರಿ ಓನರ್ಸ್ ಅಸೋಸಿಯೇಷನ್, ಪಿರಿಯಾಪಟ್ಟಣ ತಾಲೂಕು ಲಾರಿ ಮಾಲೀಕರ ಸಂಘ, ಕೊಡಗು ಜಿಲ್ಲಾ ಕಾವೇರಿ ಲಾರಿ ಮಾಲೀಕರ ಸಂಘ ಸೇರಿದಂತೆ ವಿವಿಧ ಲಾರಿ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬಿಗಿಪಟ್ಟು ಹಿಡಿದಿರುವ ಕಾರಣ ಮುಷ್ಕರ ಇನ್ನಷ್ಟು ಬಿಸಿಯೇರುವ ಲಕ್ಷಣಗಳೇ ಕಾಣ ಬರುತ್ತಿವೆ.

ಹೊರ ರಾಜ್ಯಗಳಿಂದ ಮೈಸೂರಿನತ್ತ ಬರಬೇಕಿದ್ದ ಹಣ್ಣು, ತರಕಾರಿ, ಧಾನ್ಯ ಮತ್ತು ದಿನಬಳಕೆ ವಸ್ತುಗಳು ಇಲ್ಲಿಗೆ ಬರುತ್ತಿಲ್ಲ. ಈಗಾಗಲೇ ಬಂದಿದ್ದ ಪದಾರ್ಥಗಳು ಖರ್ಚಾಗಿದ್ದು, ಎಪಿಎಂಸಿ, ಆರ್‍ಎಂಸಿ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಕುಂಠಿತಗೊಂಡಿದೆ. ಎಪಿಎಂಸಿಗೆ ತರಕಾರಿ, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಅಕ್ಕಿ, ಗೋಧಿ ಇನ್ನಿತರ ಆಹಾರ ಪದಾರ್ಥಗಳದಾಸ್ತಾನು ಕಡಿಮೆಯಾಗಿದೆ. ಇರುವ ದಾಸ್ತಾನು ನಾಳೆಯೊಳಗೆ ಖಾಲಿಯಾಗಲಿದ್ದು, ನಂತರ ನಮ್ಮ ವಹಿವಾಟು ಕೂಡ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಎಪಿಎಂಸಿ ಆಲೂಗೆಡ್ಡೆ, ಈರುಳ್ಳಿ ವರ್ತಕ ಜಮೀಲ್ ಅಹಮದ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಬಂಬು ಬಜಾರ್ ಬಳಿಯ ಆರ್‍ಎಂಸಿ ಮಾರುಕಟ್ಟೆಗೆ ಬರಬೇಕಿದ್ದ ದಾಳಿಂಬೆ, ಸೇಬು, ಮೂಸಂಬಿ, ಅನಾನಸ್ ಇನ್ನಿತರ ಹಣ್ಣುಗಳ ಆಮದು ಸ್ಥಗಿತಗೊಂಡಿದ್ದು, ಇಂದು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ವ್ಯತ್ಯಯವಾಗಿತ್ತು. ಆಂಧ್ರ, ಮಹಾರಾಷ್ಟ್ರ, ತಮಿಳುನಾಡು, ಕೇರಳಗಳಿಂದ ಲಾರಿಗಳು ಬರುತ್ತಿಲ್ಲ. ಲಾರಿ ಮುಷ್ಕರ ಮುಂದುವರಿದಲ್ಲಿ ನಾಳೆಯಿಂದ ಹಣ್ಣು ವ್ಯಾಪಾರ ಕ್ಷೀಣಿಸಲಿದೆ ಎನ್ನುತ್ತಾರೆ ಆರ್‍ಎಂಸಿ ಮಾರುಕಟ್ಟೆಯ ಹಣ್ಣು ವಿತರಕ ಮೊಹಮ್ಮದ್ ಷರೀಫ್ (ಬಾಬು). ಇನ್ನೆರಡು ದಿನಗಳಲ್ಲಿ ಆಹಾರ ಪದಾರ್ಥ, ದಿನಬಳಕೆ ವಸ್ತುಗಳು, ಹಣ್ಣು, ತರಕಾರಿ, ಧಾನ್ಯಗಳ ಅಭಾವ ತಲೆದೋರಬಹುದು. ಇದರಿಂದ ಬೆಲೆ ಏರಿಕೆಗೂ ಕಾರಣವಾಗಬಹುದು ಎಂದು ಎಪಿಎಂಸಿ ವರ್ತಕ ಗುರುಸ್ವಾಮಿ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಸೋಮವಾರದಿಂದ ಲಾರಿ ಮುಷ್ಕರ ತೀವ್ರಗೊಳ್ಳುವ ಸೂಚನೆಯನ್ನು ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಕೋದಂಡರಾಮು ತಿಳಿಸಿದ್ದು, ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿ, ಬಳಿಕ ಜಿಲ್ಲಾಧಿಕಾರಿಗಳಿಗೆ ನಮ್ಮ ಬೇಡಿಕೆಗಳುಳ್ಳ ಮನವಿಪತ್ರ ಸಲ್ಲಿಸಲಿದ್ದೇವೆ ಎಂದರು.

Translate »