ಬೆಂಗಳೂರು: ಆಡಳಿತ ವ್ಯವಸ್ಥೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿ ಕೇರಳ ಇದ್ದರೆ, ಬಿಹಾರ ಕೊನೆಯ ಸ್ಥಾನದಲ್ಲಿದೆ. ಇನ್ನು ಕರ್ನಾಟಕ 4ನೇ ಸ್ಥಾನ ಪಡೆದಿದೆ ಎಂದು ಥಿಂಕ್ ಟ್ಯಾಂಕ್ ಪಬ್ಲಿಕ್ ಅಫೆರ್ಸ್ ಸೆಂಟರ್ (ಪಿಎಸಿ) ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದ ಆಧಾರದಲ್ಲಿ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದೆ. ಸೂಚ್ಯಂಕ ಆಧಾರದ ಅಡಿಯಲ್ಲಿ ಕೇರಳ ಮೊದಲ ಸ್ಥಾನ ಗಳಿಸಿದೆ. 2016ರಿಂದಲೂ ಅತಿ ದೊಡ್ಡ ರಾಜ್ಯ ಗಳಲ್ಲಿ ಒಂದಾದ ಕೇರಳ ಮೊದಲ ಸ್ಥಾನವನ್ನು ಪಡೆ ಯುತ್ತಾ ಬಂದಿದೆ. ಅತಿ ದೊಡ್ಡ ರಾಜ್ಯಗಳಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದು, ನಂತರ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಗುಜರಾತ್ ಟಾಪ್ 5ರ ಸ್ಥಾನದಲ್ಲಿವೆ. ಮಧ್ಯ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ಕೊನೆಯ 3 ಸ್ಥಾನಗಳನ್ನು ಪಡೆದುಕೊಂಡಿವೆ.
ಅತಿ ಚಿಕ್ಕ ರಾಜ್ಯಗಳ ಪೈಕಿ (2 ಕೋಟಿಗಿಂತಲೂ ಕಡಿಮೆ ಜನಸಂಖ್ಯೆ) ಹಿಮಾಚಲ ಪ್ರದೇಶ ಮೊದಲ ಸ್ಥಾನ ಪಡೆದರೆ, ಗೋವಾ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರ ನಂತರದ ಸ್ಥಾನಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಪಡೆದುಕೊಂಡಿವೆ. ನಾಗಾ ಲ್ಯಾಂಡ್, ಮಣಿಪುರ ಮತ್ತು ಮೇಘಾಲಯ ಚಿಕ್ಕ ರಾಜ್ಯಗಳ ಪೈಕಿ ಕೊನೆಯ ಸ್ಥಾನದಲ್ಲಿವೆ.