DFRL ಕ್ವಾಟ್ರರ್ಸ್ ಮನೆಗಳ ಬೀಗ ಮುರಿದು ನಗ-ನಾಣ್ಯ ಕಳವು
ಮೈಸೂರು

DFRL ಕ್ವಾಟ್ರರ್ಸ್ ಮನೆಗಳ ಬೀಗ ಮುರಿದು ನಗ-ನಾಣ್ಯ ಕಳವು

July 23, 2018

ಮೈಸೂರು: ಮೈಸೂರಿನ ಡಿಎಫ್‍ಆರ್‍ಎಲ್ ವಸತಿ ಸಮುಚ್ಛಯದ 2 ಮನೆಗಳ ಬೀಗ ಮುರಿದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಡಿಎಫ್‍ಆರ್‍ಎಲ್ ಉದ್ಯೋಗಿಗಳಾದ ಗೋಪಾಲಕೃಷ್ಣ ಹಾಗೂ ಸಗಾಯ್ ದಾಸ್ ಅವರ ಮನೆಗಳಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿರುವ ಖದೀಮರು, ಶುಕ್ರವಾರ ತಡರಾತ್ರಿ ಬೀಗ ಮುರಿದು ಒಳನುಗ್ಗಿ, ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ.

ಇವರಿಬ್ಬರೂ ಕುಟುಂಬ ಸಮೇತ ತಮ್ಮ ಊರಿಗೆ ಹೋಗಿದ್ದು, ಎಷ್ಟು ಮೌಲ್ಯದ ಚಿನ್ನಾಭರಣ ಹಾಗೂ ಹಣ ಕಳುವಾಗಿದೆ ಎಂಬುದು ತಿಳಿದುಬಂದಿಲ್ಲ. ಗೋಪಾಲ ಕೃಷ್ಣ ಅವರ ಮನೆಯ ಚಿಲಕ ಮುರಿದಿರುವುದನ್ನು ಶನಿವಾರ ಬೆಳಿಗ್ಗೆ ಗಮನಿಸಿದ ವಸತಿ ಸಮುಚ್ಛಯದ ಉಸ್ತುವಾರಿ(ಇನ್‍ಚಾರ್ಜ್) ರಾಜೇಂದ್ರನ್ ಅವರು, ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮನೆಯ ಕೊಠಡಿಯಲ್ಲಿರುವ ಪೆಟ್ಟಿಗೆಯಲ್ಲಿ ಚಿನ್ನಾಭರಣ ಹಾಗೂ ಹಣವನ್ನು ಇಟ್ಟಿದ್ದಾಗಿ ಗೋಪಾಲಕೃಷ್ಣ ಅವರು ತಿಳಿಸಿದ ಹಿನ್ನೆಲೆಯಲ್ಲಿ ರಾಜೇಂದ್ರನ್ ಮನೆಯ ಒಳಗೆ ಹೋಗಿ ಪರಿಶೀಲಿಸಿದಾಗ ಕಳ್ಳತನವಾಗಿರುವುದು ಸ್ಪಷ್ಟವಾಗಿದೆ.

ಹಾಗೆಯೇ ಸಗಾಯ್‍ದಾಸ್ ಅವರ ಮನೆಯ ಚಿಲಕ ಮುರಿದಿರುವುದನ್ನು ಗಮನಿಸಿದ ನೆರೆ ಹೊರೆಯ ನಿವಾಸಿಗಳು, ಭದ್ರತಾ ಉಸ್ತುವಾರಿ ನಂಜೇಗೌಡ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಹೋಗಿ ನೋಡಿದಾಗ ಬಾಗಿಲ ಚಿಲಕವನ್ನು ಆಯುಧದಿಂದ ಮೀಟಿರುವುದು ಹಾಗೂ ಮನೆಯ ಕೊಠಡಿಯಲ್ಲಿ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನಂಜೇಗೌಡ, ಮನೆಯ ನಿವಾಸಿ ಸಗಾಯ್ ದಾಸ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಅವರು ಕೊಠಡಿಯಲ್ಲಿ ಚಿನ್ನಾಭರಣ ಹಾಗೂ ಹಣ ಇಟ್ಟಿದ್ದಾಗಿ ಹೇಳಿದ್ದಾರೆ. ಅಲ್ಲದೆ ಪರಿಶೀಲಿಸಿದ ನಂತರ ಕಳ್ಳತನವಾಗಿರುವ ಹಣ ಹಾಗೂ ಚಿನ್ನಾಭರಣದ ಮೌಲ್ಯವನ್ನು ಹೇಳುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ವಸತಿ ಸಮುಚ್ಛಯದ ಉಸ್ತುವಾರಿ ರಾಜೇಂದ್ರನ್ ಹಾಗೂ ಭದ್ರತಾ ಉಸ್ತುವಾರಿ ನಂಜೇಗೌಡ, ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಳ್ಳರು ವಸತಿ ಸಮುಚ್ಛಯದ ಉತ್ತರ ದಿಕ್ಕಿನ ಕಾಂಪೌಂಡ್ ಮೇಲೆ ಅಳವಡಿಸಿರುವ ತಂತಿಯನ್ನು ಕತ್ತರಿಸಿ, ಒಳಗೆ ನುಗ್ಗಿ ಕಳ್ಳರು ದುಷ್ಕøತ್ಯವೆಸಗಿದ್ದಾರೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಹೊಂಚು ಹಾಕಿ ದುಷ್ಕೃತ್ಯ?: ಕಳ್ಳತನ ನಡೆದಿರುವ ಗೋಪಾಲಕೃಷ್ಣ ಹಾಗೂ ಸಗಾಯ್ ದಾಸ್ ಅವರ ಮನೆಗಳು ಒಂದೇ ಸಂಕೀರ್ಣ(ಟೈಪ್-2)ದಲ್ಲಿವೆ. ಸಗಾಯ್‍ದಾಸ್ ಅವರ ಮನೆ ಸಂಖ್ಯೆ-10 ಹಾಗೂ ಗೋಪಾಲಕೃಷ್ಣ ಅವರ ಮನೆ ಸಂಖ್ಯೆ-15. ಅಂದರೆ ಇವರಿಬ್ಬರ ಮನೆಗಳೂ ಸಮೀಪವಿದೆ. ಇವರಿಬ್ಬರೂ ಜು.20ರಂದು ಕುಟುಂಬ ಸಮೇತ ತಮ್ಮ ಊರಿಗೆ ತೆರಳಿದ್ದು, ಅಂದು ರಾತ್ರಿಯೇ ಕಳ್ಳತನ ನಡೆದಿದೆ. ಬೀಗ ಹಾಕಿದ್ದ ಎರಡೂ ಮನೆಗಳ ಚಿಲಕವನ್ನು ಯಾವುದೋ ಆಯುಧದಿಂದ ಮೀಟಿ, ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದಾರೆ. ಅಂದರೆ ಖದೀಮರು ಹೊಂಚು ಹಾಕಿ, ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಸ್ಪಷ್ಟಪಡಿಸಿಕೊಂಡೇ ಕಳ್ಳತನ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಆದರೆ ಭಿಗಿಭದ್ರತೆ ಇರುವ ಡಿಎಫ್‍ಆರ್‍ಎಲ್ ವಸತಿ ಸಮುಚ್ಛಯದಲ್ಲೇ ಹೀಗೆ ಸರಣಿ ಮನೆಗಳವು ನಡೆದಿರುವುದು ಇಲ್ಲಿನ ನಿವಾಸಿಗಳ ನೆಮ್ಮದಿ ಕೆಡಿಸಿದೆ.

Translate »