ವರ್ಣರಂಜಿತ ಕೆಆರ್‌ಎಸ್‌ ಜಲವೈಭವ ಕಣ್ತುಂಬಿಕೊಂಡ ಜನಸಾಗರ
ಮೈಸೂರು

ವರ್ಣರಂಜಿತ ಕೆಆರ್‌ಎಸ್‌ ಜಲವೈಭವ ಕಣ್ತುಂಬಿಕೊಂಡ ಜನಸಾಗರ

July 23, 2018

ಮೈಸೂರು:  ಕೃಷ್ಣರಾಜ ಸಾಗರ(ಕೆಆರ್‌ಎಸ್‌) ಅಣೆಕಟ್ಟೆ ಕಣ್ತುಂಬಿಕೊಳ್ಳಲು ರಜಾ ದಿನವಾದ ಭಾನುವಾರ ಜನ ಸಾಗರವೇ ಹರಿದು ಬಂದಿತ್ತು.ಇಂದು ಬೆಳಿಗ್ಗೆ ಸುಮಾರು 8.30 ರಿಂದಲೇ ಪ್ರವಾಸಿಗರು ಕೆಆರ್‌ಎಸ್‌ಗೆ ಆಗಮಿಸಿ, ಜಲವೈಭವವನ್ನು ಸವಿದರು.

ಅಣೆಕಟ್ಟೆಯಿಂದ ಗೇಟ್‍ಗಳ ಮೂಲಕ ಹರಿಬಿಡುವ ನೀರಿಗೂ ಬಣ್ಣ ಬಣ್ಣದ ಬೆಳಕಿನ ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಸಂಜೆ ವೇಳೆ ಗಂತೂ ಜನ ಸಾಗರೋಪಾದಿಯಲ್ಲಿ ಹರಿದು ಬಂದರು. 300ಕ್ಕೂ ಹೆಚ್ಚು ಎಲ್‍ಇಡಿ ಲೈಟ್ ಗಳಿಂದ ರಾಷ್ಟ್ರ ಧ್ವಜದ ತ್ರಿವರ್ಣವನ್ನು ಧುಮ್ಮಿ ಕ್ಕುವ ನೀರಿನಲ್ಲಿ ಸಮ್ಮಿಳಿತಗೊಳಿಸಿರುವ ಸೊಬಗು ಸವಿದು ಸಂಭ್ರಮಿಸಿದರು. ತಮ್ಮ ಮೊಬೈಲ್ ಗಳಲ್ಲಿ ವರ್ಣರಂಜಿತ ಜಲಧಾರೆಯನ್ನು ಸೆರೆ ಹಿಡಿದು ಖುಷಿಪಟ್ಟರು. ದಟ್ಟಣೆಯ ನಡು ವೆಯೂ ಬೆಳಕಿನ ಚಿತ್ತಾರದ ಜೊತೆಗೆ ದೂರ ದಲ್ಲೇ ಸೆಲ್ಫೀ ತೆಗೆದುಕೊಂಡು ಸಂತಸದ ನಗೆ ಬೀರುತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು. ಕೃಷ್ಣ ರಾಜ ಸಾಗರದಲ್ಲಿ ಜನ ಸಾಗರವೂ ಸಮ್ಮಿಳಿತಗೊಂಡಂತೆ ಕಂಡು ಬಂದಿತು.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಮಾತ್ರವಲ್ಲದೆ, ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಕೆಆರ್‌ಎಸ್‌ಗೆ ವೀಕ್ಷಣೆಗೆ ಧಾವಿಸಿದ್ದರಿಂದ ಜನ ದಟ್ಟಣೆ ಹೆಚ್ಚಾಗಿತ್ತು. ಇಂದು ಸುಮಾರು 50 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದರೆಂದು ತಿಳಿದುಬಂದಿದೆ. ಸರತಿಯಲ್ಲಿ ಸಾಗಿದಂತೆ ಒಂದೊಂದೆ ಹೆಜ್ಜೆ ಹಾಕಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಯೋವೃದ್ಧರು, ಮಹಿಳೆಯರು, ಮಕ್ಕಳು ಜನ ದಟ್ಟಣೆಯಲ್ಲಿ ಹೈರಾಣಾಗಿದ್ದರೂ ವರ್ಣ ರಂಜಿತವಾಗಿ ಝಗಮಗಿಸಿದ ಕಾವೇರಿಯನ್ನು ಕಂಡು ಪುಳಕಿತರಾಗಿ, ತಮಗಾದ ಆಯಾಸವನ್ನೆಲ್ಲಾ ಮರೆತು ಸಂಭ್ರಮಿಸಿದರು.

ಸಾಲುಗಟ್ಟಿ ನಿಂತ ವಾಹನಗಳು: ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ವಿಪರೀತವಾಗಿತ್ತು. ವಾಹನ ನಿಲುಗಡೆಗೂ ಸ್ಥಳಾವಕಾಶವಿಲ್ಲದೆ ಪ್ರವಾಸಿಗರು ಪರಿತಪಿಸಿದರು. ಮೈಸೂರು ನಗರ, ಇಲವಾಲ, ಶ್ರೀರಂಗಪಟ್ಟಣ, ಪಾಂಡವಪುರದಿಂದ ಕೆಆರ್‌ಎಸ್‌ಗೆ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನ ದಟ್ಟಣೆ ನಿರ್ಮಾಣವಾಗಿತ್ತು.

ಕೆಆರ್‌ಎಸ್‌ನಿಂದ ಸುಮಾರು ನಾಲ್ಕೈದು ಕಿಮೀ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಆರ್‌ಎಸ್‌ ತಲುಪಲು ಎರಡು ತಾಸು ಬೇಕಾಯಿತು. ಪ್ರವಾಸಿಗರಿದ್ದ ಬಸ್ಸುಗಳು, ಕಾರುಗಳು, ದ್ವಿಚಕ್ರ ವಾಹನಗಳ ಪೆರೇಡ್ ನಡೆದಂತಿತ್ತು. ವಾಹನ ದಟ್ಟಣೆಯಲ್ಲಿ ಆಂಬುಲೆನ್ಸ್ ಸಿಲುಕಿತ್ತು. ಸದ್ಯ ವಾಹನ ಸವಾರರೇ ಆಂಬುಲೆನ್ಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಹೆಣಗಾಡಿದ ಪೊಲೀಸರು: ಜನದಟ್ಟಣೆ ಹಾಗೂ ವಾಹನ ದಟ್ಟಣೆಯನ್ನು ನಿರ್ವಹಿಸಲು ಪೊಲೀಸರು ಹೆಣಗಾಡಬೇಕಾಯಿತು. ಕೆಆರ್‌ಎಸ್‌ ಅಣೆಕಟ್ಟೆಗೆ ಭದ್ರತೆ ನೀಡುತ್ತಿರುವ ಕರ್ನಾಟಕ ರಾಜ್ಯ ಕೈಗಾರಿಕಾ ರಕ್ಷಣಾ ಪಡೆ ಸಿಬ್ಬಂದಿ, ಜನ ದಟ್ಟಣೆಯನ್ನು, ಕೆಆರ್‌ಎಸ್‌ ಠಾಣೆ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ವಾಹನ ದಟ್ಟಣೆಯನ್ನು ನಿರ್ವಹಿಸುತ್ತಿದ್ದರು. ಆದರೆ ಇವರ ಸಂಖ್ಯೆ ಕಡಿಮೆಯಿದ್ದ ಕಾರಣ ಅಧ್ವಾನವಾಗಿತ್ತು. ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಫಲರಾಗಿದ್ದರು ಎಂಬ ಆರೋಪವೂ ಕೇಳಿ ಬಂದಿತು. ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದು ಸಾಮಾನ್ಯ. ಇದರ ಅರಿವಿದ್ದರೂ ಹೆಚ್ಚುವರಿ ಪೊಲೀಸರನ್ನು ನಿಯೋಜಿಸದಿರುವುದು ವಿಷಾದನೀಯ. ಸಾಮಾನ್ಯ ದಿನಗಳಂತೆ ಇಂದೂ ಸಹ ಸುಮಾರು 70 ಮಂದಿ ಸಿಬ್ಬಂದಿಯಷ್ಟೇ ಕರ್ತವ್ಯದಲ್ಲಿದ್ದರು. ಇದರಿಂದ ಕರ್ತವ್ಯದಲ್ಲಿದ್ದ ಸಿಬ್ಬಂದಿ ಜೊತೆಗೆ ಸಾರ್ವಜನಿಕರೂ ತೊಂದರೆ ಅನುಭವಿಸಬೇಕಾಯಿತು.

ಮಧ್ಯಾಹ್ನದ ನಂತರ ಟ್ರಾಫಿಕ್ ಜಾಮ್ ಹೆಚ್ಚಾದ ಕಾರಣ ಡಿವೈಎಸ್ಪಿ ವಿಶ್ವನಾಥ್, ಶ್ರೀರಂಗಪಟ್ಟಣ ಠಾಣೆ ಇನ್ಸ್‍ಪೆಕ್ಟರ್ ರವೀಂದ್ರ, ಸಬ್‍ಇನ್ಸ್‍ಪೆಕ್ಟರ್‍ಗಳಾದ ಬ್ಯಾಟರಾಯಗೌಡ, ಪುನೀತ್, ಸುರೇಶ್, ಪ್ರಮೋದ್ ಸೇರಿದಂತೆ ನೂರಾರು ಸಿಬ್ಬಂದಿ, ರಾತ್ರಿ 8.30ರವರೆಗೂ ಹರಸಾಹಸ ಪಟ್ಟು, ವಾಹನ ಸಂಚಾರ ನಿರ್ವಹಣೆ ಮಾಡಿದರು. ಆದರೆ ಕೆಆರ್‌ಎಸ್‌ ಸಂಪರ್ಕ ರಸ್ತೆಗಳು ಅತ್ಯಂತ ಕಿರಿದಾಗಿದ್ದು, ದ್ವಿಮುಖ ಸಂಚಾರವಿದೆ. ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರಿಂದ ವಾಹನ ದಟ್ಟಣೆ ನಿರ್ಮಾಣವಾಗುತ್ತದೆ. ಹಾಗೆಯೇ ಇಂದು ದಾಖಲೆ ಪ್ರಮಾಣದ ಜನ ಸಾಗರ ಹರಿದು ಬಂದಿದ್ದರಿಂದ ಪಂಪ್‍ಹೌಸ್‍ನಿಂದ ಬೆಳಗೊಳದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಗ್ರಾಮಸ್ಥರಿಗೂ ತೊಂದರೆಯಾಗಿತ್ತು. ಹೊರರಾಜ್ಯ ಹಾಗೂ ವಿದೇಶಿ ಪ್ರವಾಸಿಗರೂ ದಿನನಿತ್ಯ ಕೆಆರ್‌ಎಸ್‌ಗೆ ವೀಕ್ಷಣೆಗೆ ಬರುತ್ತಾರೆ. ಉತ್ತಮವಾದ ವಿಸ್ತಾರವಾದ ರಸ್ತೆ ನಿರ್ಮಾಣ ಮಾಡುವುದರ ಜೊತೆಗೆ ಅಣೆಕಟ್ಟೆ ವೀಕ್ಷಣೆ ಹಾಗೂ ಬೃಂದಾವನ ಪ್ರವೇಶಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗೋಪಾಲಸ್ವಾಮಿ ವೀಕ್ಷಣೆ: ಕೆಆರ್‌ಎಸ್‌ ಹಿನ್ನೀರು ಪ್ರದೇಶದಲ್ಲಿರುವ ವೇಣು ಗೋಪಾಲಸ್ವಾಮಿ ದೇವಾಲಯ ವೀಕ್ಷಣೆಗೂ ಸಹಸ್ರಾರು ಸಂಖ್ಯೆ ಜನ ಬಂದಿದ್ದರು. ಭಕ್ತರು ನೂಕು ನುಗ್ಗಲಿನಲ್ಲಿ ಸಾಗಿ ದೇವರ ದರ್ಶನ ಪಡೆದರು. ವೇಣುಗೋಪಾಲಸ್ವಾಮಿ ದೇವಾಲಯದಿಂದ ಮೈಸೂರಿಗೆ ವಾಪಸ್ಸಾಗಲು ಮೂರೂವರೆ ಗಂಟೆ ಸಮಯ ಬೇಕಾಯಿತು ಎಂದು ಪ್ರವಾಸಿಗರೊಬ್ಬರು, ಜನದಟ್ಟಣೆ ಹಾಗೂ ವಾಹನ ದಟ್ಟಣೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.

Translate »