ಮೈಸೂರು-ಕೊಡಗು ಶೇ.68.85, ಮಂಡ್ಯ ಶೇ. 80.23,  ಚಾಮರಾಜನಗರ ಶೇ.74.11, ಹಾಸನದಲ್ಲಿ ಶೇ.77.28 ದಾಖಲೆ ಮತದಾನ
ಮೈಸೂರು

ಮೈಸೂರು-ಕೊಡಗು ಶೇ.68.85, ಮಂಡ್ಯ ಶೇ. 80.23, ಚಾಮರಾಜನಗರ ಶೇ.74.11, ಹಾಸನದಲ್ಲಿ ಶೇ.77.28 ದಾಖಲೆ ಮತದಾನ

April 19, 2019

ಮೈಸೂರು: ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಚಾಮರಾಜ, ಕೃಷ್ಣರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು.

ಒಟ್ಟು 18,95,056 ಮತದಾರರಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಾದ್ಯಂತ ಸ್ಥಾಪಿಸಿದ್ದ ಒಟ್ಟು 2,187 ಮತಗಟ್ಟೆಗಳಲ್ಲೂ ಕುಡಿಯುವ ನೀರು, ಶೌಚಾಲಯ, ರ್ಯಾಂಪ್, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿತ್ತು. ಪ್ರತೀ ಮತಗಟ್ಟೆಯ ಬಳಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು, ಕ್ರಮ ಸಂಖ್ಯೆ, ಚಿಹ್ನೆಗಳನ್ನು ಬರೆದು ಅಂಟಿಸಲಾಗಿತ್ತು. ಮತಗಟ್ಟೆ ಸಂಖ್ಯೆ, ಕೊಠಡಿ ಸಂಖ್ಯೆ, ಮತ ಜಾಗೃತಿ ಮಾಹಿತಿ ಮುಂತಾದ ಮಾರ್ಗದರ್ಶಿ ಫಲಕ ಗಳನ್ನು ಹಾಕಿರುವ ಜೊತೆಗೆ ಮತದಾರರ ಪಟ್ಟಿಯೊಂದಿಗೆ ಸಿಬ್ಬಂದಿ ಹಾಜರಿದ್ದು, ಮಾಹಿತಿ ನೀಡುತ್ತಿದ್ದರು. ಎಂದಿನಂತೆ ಮತಗಟ್ಟೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಟೇಬಲ್‍ಗಳನ್ನಿಟ್ಟು ಕೊಂಡು ಮತದಾರರಿಗೆ ಮಾಹಿತಿ ನೀಡುತ್ತಿದ್ದುದು ಸಾಮಾನ್ಯವಾಗಿತ್ತು.

ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಮತದಾನ ಆರಂಭಗೊಂಡಾಗ ಬಿರುಸಿನಿಂದ ನಡೆಯಿತು. ಮಧ್ಯಾಹ್ನ 1 ಗಂಟೆ ನಂತರ ಬಿಸಿಲಿನ ಝಳದಿಂದ ನಿಧಾನವಾಯಿತು. ಅಷ್ಟರವರೆಗೆ ಶೇ.35.69ರಷ್ಟು ಮತದಾನ ದಾಖಲಾಗಿತ್ತು. ಸಂಜೆ 3.30ರ ನಂತರ ಮತ್ತೆ ತೀವ್ರಗೊಂಡು ಅಂತಿಮ ಕ್ಷಣದವರೆಗೂ ಜನರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆವರೆಗೆ ಶೇ.7.79ರಷ್ಟು ಅಂದರೆ ಮಡಿಕೇರಿಯಲ್ಲಿ ಶೇ.12.17, ವಿರಾಜಪೇಟೆಯಲ್ಲಿ ಶೇ.12.67, ಪಿರಿಯಾಪಟ್ಟಣದಲ್ಲಿ ಶೇ.10, ಹುಣಸೂರಲ್ಲಿ ಶೇ.7.55, ಚಾಮುಂಡೇಶ್ವರಿಯಲ್ಲಿ ಶೇ.5.81, ಕೆಆರ್‍ನಲ್ಲಿ ಶೇ.3.5, ಚಾಮರಾಜದಲ್ಲಿ ಶೇ. 8.2 ಹಾಗೂ ಎನ್‍ಆರ್‍ನಲ್ಲಿ ಶೇ.4.58ರಷ್ಟು ಮತದಾನವಾಗಿತ್ತು. ಬೆಳಿಗ್ಗೆ 11 ಗಂಟೆ ವೇಳೆಗೆ ಎಲ್ಲಾ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.19.99, ಮಧ್ಯಾಹ್ನ 1 ಗಂಟೆವರೆಗೆ ಶೇ.35.69 ರಷ್ಟು, ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.50.39 ಮತ್ತು ಸಂಜೆ 5 ಗಂಟೆವರೆಗೆ ಒಟ್ಟು ಶೇಕಡಾ 63.13ರಷ್ಟು ಮಂದಿ ಮತ ಚಲಾಯಿಸಿದ್ದರು.

ಸಂಜೆ 5 ಗಂಟೆ ವೇಳೆ ನರಸಿಂಹರಾಜದಲ್ಲಿ ಶೇ.52.55, ಚಾಮರಾಜದಲ್ಲಿ ಶೇ.54.08, ಕೃಷ್ಣರಾಜದಲ್ಲಿ ಶೇ.53.36, ಚಾಮುಂಡೇಶ್ವರಿಯಲ್ಲಿ ಶೇ.66.94, ಹುಣಸೂರಿನಲ್ಲಿ ಶೇ.70.87, ಪಿರಿಯಾಪಟ್ಟಣದಲ್ಲಿ ಶೇ.71.11, ವಿರಾಜಪೇಟೆಯಲ್ಲಿ ಶೇ.67.38 ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.72.10ರಷ್ಟು ಮತದಾರರು ಆಸಕ್ತಿಯಿಂದ ತಮ್ಮ ಹಕ್ಕು ಚಲಾಯಿಸಿರುವುದು ದಾಖಲಾಗಿದೆ. ಸಂಜೆ 6 ಗಂಟೆ ವೇಳೆಗೆ ಮತಗಟ್ಟೆ ಆವರಣ ಪ್ರವೇಶಿಸಿದವರಿಗೆ ಹಿಂದಿನಿಂದ ಡಿಸೆಂಡಿಂಗ್ ಆರ್ಡರ್‍ನಲ್ಲಿ ಟೋಕನ್‍ಗಳನ್ನು ವಿತರಿಸಿ `ಜೀರೊ’ (0) ಸಂಖ್ಯೆ ಬರುವವರಿಗೆ ಮತಚಲಾಯಿಸಲು ಅವಕಾಶ ಕಲ್ಪಿಸಲಾಯಿತು. ಸರಿಯಾಗಿ 6 ಗಂಟೆಗೆ ಕಾಂಪೌಂಡ್ ಗೇಟ್ ಅನ್ನು ಬಂದ್ ಮಾಡಿ ನಂತರ ಯಾರನ್ನೂ ಮತಗಟ್ಟೆ ಆವರಣ ಪ್ರವೇಶಿಸದಂತೆ ಭದ್ರತಾ ಕರ್ತವ್ಯ ನಿರತ ಪೊಲೀಸರು ಎಚ್ಚರ ವಹಿಸಿದರು.

ಮತದಾನ ಪ್ರಕ್ರಿಯೆ ಮುಗಿದ ಬಳಿಕ ಎಲ್ಲಾ ಇವಿಎಂಗಳನ್ನು ಸೀಲ್ ಮಾಡಿ ಬಾಕ್ಸ್‍ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಸುರಕ್ಷಿತವಾಗಿರಿಸಿದ ಮತಗಟ್ಟೆ ಅಧ್ಯಕ್ಷೀಯ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಂದಿಗೆ ತಾವು ಹೋಗಿದ್ದ ಬಸ್ಸುಗಳಲ್ಲಿ ಪೊಲೀಸ್ ಸರ್ಪಗಾವಲಿನೊಂದಿಗೆ ಆಯಾ ಮಸ್ಟರಿಂಗ್ ಕೇಂದ್ರಗಳಿಗೆ ಬಂದು ತಮ್ಮ ಪ್ರಮಾಣ ಪತ್ರದೊಂದಿಗೆ ಪ್ರತೀ ವಿಧನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ಮತ ದಾಖಲಾಗಿರುವ ಇವಿಎಂಗಳನ್ನು ಒಪ್ಪಿಸಿದರು.

ನಂತರ ಎಲ್ಲಾ ದಾಖಲಾತಿಗಳನ್ನು ಪರೀಕ್ಷಿಸಿ ಸರಿಯಾಗಿದೆ ಎಂದು ಖಾತರಿಯಾದ ನಂತರ ಸಹಾಯಕ ಚುನಾವಣಾ ಧಿಕಾರಿಗಳು ಪೊಲೀಸ್ ಬೆಂಗಾವಲಿನೊಂದಿಗೆ ವೀಡಿಯೋ ರೆಕಾರ್ಡ್ ಮಾಡಿಸಿ ಇವಿಎಂಗಳನ್ನು ಮೈಸೂರಿನ ಪಡುವಾರಹಳ್ಳಿ ಬಳಿ ಇರುವ ಸ್ಟ್ರಾಂಗ್ ರೂಂಗೆ ತಂದು ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಭದ್ರಪಡಿಸಿದರು.

ಪ್ರತೀ ಮತದಾನ ಕೇಂದ್ರದ ಮತಗಟ್ಟೆಗಳ ಮತದಾನ ಪ್ರಕ್ರಿಯೆಯನ್ನು ಸಂಪೂರ್ಣ ವಾಗಿ ವೀಡಿಯೋ ರೆಕಾರ್ಡಿಂಗ್ ಮಾಡಲಾಗಿದ್ದು, ಜಿಲ್ಲಾ ಚುನಾವಣಾಧಿಕಾರಿ ಅಭಿರಾಂ ಜಿ.ಶಂಕರ್, ಉಪ ಚುನಾವಣಾಧಿಕಾರಿ ಜಿ.ಅನುರಾಧ ಹಾಗೂ ಪ್ರಧಾನ ಚುನಾವಣಾಧಿಕಾರಿಗಳು ಕ್ಷೇತ್ರದಾದ್ಯಂತ ಸಂಚರಿಸಿ ಕೆಲ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮತದಾನ ಮುಕ್ತಾಯ ಹಂತಕ್ಕೆ ಬರುವಾಗ ಹೆಚ್ಚು ಮಂದಿ ಮತಗಟ್ಟೆಗೆ ಬಂದು ಬಿರುಸಿನ ಮತದಾನ ಮಾಡುತ್ತಿದ್ದುದು ಕ್ಷೇತ್ರದಾದ್ಯಂತ ಕಂಡು ಬಂದಿತು. ಈ ಮೂಲಕ ಮೊದಲ ಹಂತದ ಮತದಾನ ಪ್ರಕ್ರಿಯೆ ಮೈಸೂರು-ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಗೊಂದಲವಿಲ್ಲದೆ ಶಾಂತಿಯುತವಾಗಿ, ಮುಕ್ತಾಯಗೊಂಡಿತು.

Translate »