ಇಂದು ಬಂಡಿಪಾಳ್ಯ ಎಪಿಎಂಸಿ ವರ್ತಕರಿಂದ ಬಂದ್
ಮೈಸೂರು

ಇಂದು ಬಂಡಿಪಾಳ್ಯ ಎಪಿಎಂಸಿ ವರ್ತಕರಿಂದ ಬಂದ್

July 27, 2018

ಮೈಸೂರು: ಲಾರಿ ಮುಷ್ಕರ ಗುರುವಾರ 7ನೇ ದಿನಕ್ಕೆ ಕಾಲಿಟ್ಟಿದ್ದು, ಇಂದೂ ಕೂಡ ಯಾವುದೇ ಲಾರಿಗಳ ಸಂಚಾರ ಇರಲಿಲ್ಲ. ಈ ಮಧ್ಯೆ ಲಾರಿ ಮುಷ್ಕರ ಬೆಂಬಲಿಸಿ ಮೈಸೂರಿನ ಬಂಡೀಪಾಳ್ಯದ ಎಪಿಎಂಸಿ ವರ್ತಕರು ನಾಳೆ (ಜು.27) ಇಡೀ ದಿನ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ.

ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದೇಶಾದ್ಯಂತ ನಡೆದಿರುವ ಲಾರಿ ಮುಷ್ಕರಕ್ಕೆ ಮೈಸೂರಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿದ್ದು, ಹೊರ ರಾಜ್ಯಗಳಿಂದ ಇಲ್ಲಿಗೆ ಹಾಗೂ ಇಲ್ಲಿಂದ ಹೊರ ರಾಜ್ಯಗಳಿಗೆ ಯಾವುದೇ ಲಾರಿಗಳ ಸಂಚಾರ ಇರಲಿಲ್ಲ. ಇದರಿಂದಾಗಿ ಬಂಡೀಪಾಳ್ಯ ಎಪಿಎಂಸಿ ಮತ್ತು ಬಂಬೂ ಬಜಾರ್ ಆರ್‍ಎಂಸಿ ಮಾರುಕಟ್ಟೆಗಳಿಗೆ ಒಳ ಬರುವ ಮತ್ತು ಹೊರ ಹೋಗುವ ಯಾವುದೇ ಪದಾರ್ಥಗಳ ಸಾಗಣೆ ಆಗಲಿಲ್ಲ.

ಎಪಿಎಂಸಿಯಲ್ಲಿ ಅಕ್ಕಿ, ಈರುಳ್ಳಿ, ಆಲೂಗಡ್ಡೆ ಇನ್ನಿತರ ದಿನಸಿ ವಹಿವಾಟು ಬಹುತೇಕ ಸ್ಥಗಿತ ಗೊಂಡಿದ್ದು, ಸ್ಥಳೀಯ ರೈತರ ಅನುಕೂಲಕ್ಕಾಗಿ ಮುಷ್ಕರನಿರತರು ಸ್ವಲ್ಪ ವಿನಾಯಿತಿ ನೀಡಿದ್ದ ರಿಂದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಶೇ.50ರಷ್ಟು ವಹಿವಾಟುನಡೆಯುತ್ತಿದೆ. ಆದರೂ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಪದಾರ್ಥಗಳ ಆವಕ ಮತ್ತು ಮಾರಾಟದಲ್ಲಿ ವ್ಯತ್ಯಯವಾಗಿದೆ. ಬಂಬೂ ಬಜಾರ್‍ನ ಆರ್‍ಎಂಸಿ ಮಾರು ಕಟ್ಟೆಯಲ್ಲಿ ಹಣ್ಣುಗಳ ಆಮದು ಸಂಪೂರ್ಣ ಸ್ಥಗಿತಗೊಂಡು, ಹಣ್ಣುಗಳ ಕೊರತೆ ಎದುರಾಗಿದೆ. ದಾಸ್ತಾನಿದ್ದ ದಾಳಿಂಬೆ, ಅನಾನಸ್ ಇನ್ನಿತರ ಹಣ್ಣುಗಳು ಕೊಳೆಯಲು ಶುರುವಾಗಿದ್ದು, ಅದರ ಬೆಲೆಯೂ ಇಳಿಮುಖವಾಗಿದೆ ಎಂದು ಆರ್‍ಎಂಸಿ ಮಾರುಕಟ್ಟೆ ವರ್ತಕರು `ಮೈಸೂರು ಮಿತ್ರ’ನೊಂದಿಗೆ ಅಳಲು ತೋಡಿಕೊಂಡಿದ್ದಾರೆ.

Translate »