ಜಡ ಸಮಾಜದ ಉದ್ದೀಪನಕ್ಕೆ ದಾರ್ಶನಿಕರ ಚಿಂತನೆ ಅಗತ್ಯ
ಮೈಸೂರು

ಜಡ ಸಮಾಜದ ಉದ್ದೀಪನಕ್ಕೆ ದಾರ್ಶನಿಕರ ಚಿಂತನೆ ಅಗತ್ಯ

January 12, 2021

ಮೈಸೂರು, ಜ.11(ವೈಡಿಎಸ್)- `ಸಮಾಜದ ಜಡತ್ವ ಹೋಗಲಾಡಿಸಲು ದಾರ್ಶನಿಕರ ಚಿಂತನೆ ಗಳು ಅಗತ್ಯ’ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.

ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪ ದಲ್ಲಿ `ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ಫೌಂಡೇಷನ್’ ವತಿಯಿಂದ ದಾಸ ಶ್ರೇಷ್ಠ ಶ್ರೀ ಕನಕ ದಾಸರ ಜಯಂತಿ ಪ್ರಯುಕ್ತ ಆಯೋಜಿಸಿದ್ದ `ಶ್ರೀ ಕನಕದಾಸರ ಕೀರ್ತನೆಗಳ ಹಾಡುಗಾರಿಕೆ ಸ್ಪರ್ಧೆ’ ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರ ಕೀರ್ತನೆಗಳ ಹಾಡುಗಾರಿಕೆ ಸ್ಪರ್ಧೆ ಆಯೋಜಿಸಿರುವುದು ಸಂತೋಷದ ವಿಷಯ. ಕನಕದಾಸರ ಕೀರ್ತನೆಗಳು ಸಂಗೀತ ಕ್ಷೇತ್ರಕ್ಕೆ ಹೊಸ ಮಾರ್ಗಗಳನ್ನೇ ಸೃಷ್ಟಿಸಿದವು. ಅವರ ಜೀವನ, ತತ್ವಾ ದರ್ಶ, ಸಾಮಾಜಿಕ ಕಳಕಳಿ ಹಾಗೂ ಅವರ ಕೀರ್ತನೆ ಗಳು ಕನ್ನಡ ಸಾಹಿತ್ಯ ಮಾತ್ರವಲ್ಲದೇ ಭಾರತೀಯ ಸಂಸ್ಕೃತಿಯ ಸಂದರ್ಭದಲ್ಲೂ ಅತ್ಯಂತ ಮಹತ್ವವೆನಿ ಸಿವೆ. ಇತ್ತೀಚೆಗೆ ಜಾತೀಯತೆ ಹೆಚ್ಚುತ್ತಿದ್ದು ಅದನ್ನು ತೊಡೆದು ಹಾಕಲು ಬುದ್ಧ ಬಸವಾದಿ ಶರಣರು ವಚನಗಳ ತ್ರಿಪದಿಗಳ ಮೂಲಕ ಮೌಢ್ಯದ ವಿರುದ್ಧ ಕರೆ ನೀಡಿದ್ದರು. ಕನಕದಾಸರೂ ಜಾತೀಯತೆ, ಮೌಢ್ಯಗಳ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದರು ಎಂದು ಸ್ಮರಿಸಿದರು. ನಾನು ಎಂಬ ಅಹಂಕಾರ ತೊಲಗಬೇಕು. ವೈಜ್ಞಾನಿಕ ಚಿಂತನೆಗಳು, ದಾರ್ಶನಿಕರ ಆಲೋ ಚನೆಗಳನ್ನು ಅನುಷ್ಠಾನಕ್ಕೆ ತಂದು ಜಡವಾಗಿರುವ ಸಮಾಜವನ್ನು ತಿದ್ದುವ ಕೆಲಸವಾಗಬೇಕು ಎಂದರು.

ಇದೇ ಸಂದರ್ಭ ಖ್ಯಾತ ಹಿರಿಯ ಸಾಹಿತಿಗಳಾದ ಶ್ಯಾಮಲಾಮೂರ್ತಿ, ಎ.ಎನ್.ಮೂರ್ತಿ ಅವರಿಗೆ `ಕನಕಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ಪರ್ಧೆ ಯಲ್ಲಿ ನಯನಾ ನಾಗರಾಜ್, ಭಾಗೀರಥಿ, ಪಾರ್ವ ತಮ್ಮ ಅವರು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದುಕೊಂಡರು. ಸಂಸ್ಕೃತಿ ಚಿಂತಕ ಕೆ.ರಘುರಾಂ ವಾಜಪೇಯಿ, ಕಸಾಪ ಜಿಲ್ಲಾ ಘಟಕ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಂಚಾಲಕರಾದ ಎನ್.ಅನಂತ ದೀಕ್ಷಿತ್, ನವೀನ್ ಕುಮಾರ್, ಎಂ.ವಿ.ನಾಗೇಂದ್ರ ಬಾಬು, ಪತ್ರಕರ್ತ ಮಹಾವೀರ ಪ್ರಸಾದ್ ಮತ್ತಿತರರಿದ್ದರು.

Translate »