ಪ್ರಜ್ವಲ್ ಸೋಲಿಸಲು ಕಾಂಗ್ರೆಸ್‍ನಿಂದಲೇ ಪ್ಲಾನ್…!
ಹಾಸನ

ಪ್ರಜ್ವಲ್ ಸೋಲಿಸಲು ಕಾಂಗ್ರೆಸ್‍ನಿಂದಲೇ ಪ್ಲಾನ್…!

April 11, 2019

ಬೇಲೂರು: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸರ್ಧಿಸಿರುವ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಲು ಹಾಸನ ಕಾಂಗ್ರೆಸ್‍ನಿಂದಲೇ ಪ್ಲಾನ್ ರೂಪಿಸಲಾಗಿದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ ಹೇಳಿದರು.

ಪಟ್ಟಣದಲ್ಲಿ ಬುಧವಾರ ನಡೆದ ಬಿಜೆಪಿ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಸೇರ್ಪಡೆಗೊಂಡ ನಂತರ ಅವರು ಮಾತ ನಾಡಿದರು.

ಕಾಂಗ್ರೆಸ್‍ನಲ್ಲಿ ಎರಡು ಗುಂಪುಗಳಾಗಿ ನಾವು ವಿಭಜನೆ ಆಗಿದ್ದೆವು. ಮೊದಲ ಗುಂಪು ಸೂಸೈಡ್ ತಂಡವಾಗಿದ್ದು, ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗುವುದು. 2ನೇ ಗುಂಪು ಕಾಂಗ್ರೆಸ್ಸಿನಲ್ಲೇ ಇರಲಿದೆ. ಈ ಗುಂಪು ಪ್ರಜ್ವಲ್ ಸೋಲಿಗೆ ಶ್ರಮಿಸಲಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಒಳ ತಂತ್ರವನ್ನು ಬಿಚ್ಚಿಟ್ಟರು. ಇದಕ್ಕೂ ಮುನ್ನ ಬಹಿರಂಗವಾಗಿ ಬಿಎಸ್‍ವೈ ಅವರ ಕ್ಷಮೆ ಕೋರಿದ ಅವರು, ಹಿಂದೆ ನಾನು ಜೆಡಿಎಸ್‍ನಿಂದ ಕೈಬಿಟ್ಟಾಗ ಯಡಿಯೂರಪ್ಪ ಅವರು ಕರೆ ಮಾಡಿ, ಆಹ್ವಾನ ನೀಡಿದ್ದರು. ಆದರೆ, ಅಂದು ಜಿಲ್ಲೆಯ ಪರಿಸ್ಥಿತಿಯಿಂದ ಬಿಜೆಪಿ ಬರಲು ಸಾಧ್ಯವಾಗಲಿಲ್ಲ. ಇಂದು ಹಾಸನ ಕಾಂಗ್ರೆಸ್‍ನ ಸುಮಾರು 4 ಲಕ್ಷ ಮತದಾರರು ಬಿಜೆಪಿಗೆ ಮತ ಹಾಕಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದರು. ಎತ್ತಿನ ಹೊಳೆ ಯೋಜನೆಯನ್ನು ಪ್ರಾರಂಭ ಮಾಡಲು ಪ್ರಮುಖ ಕಾರಣರಾಗಿದ್ದು ಸದಾನಂದಗೌಡರು. ಆದರೆ ಇಂದು ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲು ರಾಜ್ಯ ಸರ್ಕಾರ ಯಾವುದೇ ಸಭೆಯನ್ನು ಕರೆದು ಚರ್ಚೆ ಮಾಡಿಲ್ಲ. ಮೇ 23ರಂದು ಹೊರಬೀಳುವ ಫಲಿತಾಂಶದಲ್ಲಿ ಬಿಜೆಪಿ ಗೆಲುವು ಪಡೆಯಲಿದ್ದು, ಮೇ 30ಕ್ಕೆ ರಾಜ್ಯ ಸಮ್ಮಿಶ್ರ ಸರ್ಕಾರ ಉರುಳಲಿದೆ ಎಂದು ಭವಿಷ್ಯ ನುಡಿದ ಅವರು, ರಾಜ್ಯದ ಮುಖ್ಯಮಂತ್ರಿ ಆಗಲು ಬಿಎಸ್‍ವೈ ಅವರಿಗೆ ನಿಮ್ಮ ಬೆಂಬಲ ಅಗತ್ಯವಿದೆ ಎಂದು ಮನವಿ ಮಾಡಿದರು.

Translate »