ಮೈಸೂರಲ್ಲಿ ಕೊರೊನಾ ಗೆದ್ದ ಮೂವರಿಂದ ಪ್ಲಾಸ್ಮಾ ಕೊಡುಗೆ
ಮೈಸೂರು

ಮೈಸೂರಲ್ಲಿ ಕೊರೊನಾ ಗೆದ್ದ ಮೂವರಿಂದ ಪ್ಲಾಸ್ಮಾ ಕೊಡುಗೆ

July 17, 2020

ಕೆ.ಆರ್. ಆಸ್ಪತ್ರೆ ರಕ್ತನಿಧಿ ಅಧಿಕಾರಿ ಡಾ.ಮಂಜುನಾಥ್
ಮೈಸೂರು, ಜು.16(ಆರ್‍ಕೆ)- ಮೈಸೂರಲ್ಲಿ ಕೊರೊನಾ ವೈರಸ್ ಸೋಂಕಿಗೆ ಚಿಕಿತ್ಸೆ ಪಡೆದು, ಸಂಪೂರ್ಣ ಗುಣಮುಖರಾದ ಮೂವರು ಯುವಕರಿಂದ ಪ್ಲಾಸ್ಮಾ ಪಡೆಯ ಲಾಗಿದೆ ಎಂದು ಕೆ.ಆರ್.ಆಸ್ಪತ್ರೆ ರಕ್ತನಿಧಿ ಅಧಿಕಾರಿ ಡಾ.ಮಂಜುನಾಥ ತಿಳಿಸಿದ್ದಾರೆ.

ಗಂಟಲು ದ್ರವ ತೆಗೆದು ಪರೀಕ್ಷಿಸಿದಾಗ ಕೊರೊನಾ ಪಾಸಿಟಿವ್ ಬಂದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಪುನರಾವರ್ತಿತ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ 4 ವಾರ ಮನೆಯಲ್ಲಿ ಪ್ರತ್ಯೇಕವಾಗಿದ್ದವರ ಪೈಕಿ ಮೂವರು ಪ್ಲಾಸ್ಮಾ ದಾನ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ವೈದ್ಯಕೀಯ ಶಿಷ್ಟಾಚಾರ (ಮೆಡಿಕಲ್ ಪ್ರೋಟೋಕಾಲ್) ಹಾಗೂ ಕೋವಿಡ್-19 ಮಾರ್ಗಸೂಚಿಯಂತೆ ರಕ್ತ ಪರೀಕ್ಷೆ ಮಾಡಿ ಪೂರಕ ಅಂಶಗಳು ಕಂಡು ಬಂದ ಹಿನ್ನೆಲೆಯಲ್ಲಿ ಮೂವರಿಂದ ತಲಾ 170 ಮಿಲಿ ಲೀಟರ್ ಪ್ಲಾಸ್ಮಾವನ್ನು ಡ್ರಾ ಮಾಡಲಾಗಿದೆ ಎಂದು ಡಾ. ಮಂಜುನಾಥ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

231 ಯೂನಿಟ್ ರಕ್ತ ದಾಸ್ತಾನಿದೆ: ಕೆ.ಆರ್. ಆಸ್ಪತ್ರೆ ಬ್ಲಡ್ ಬ್ಯಾಂಕ್‍ನಲ್ಲಿ ಪ್ರಸ್ತುತ 231 ಯೂನಿಟ್ ರಕ್ತ ಸ್ಟಾಕ್ ಇದೆ. ಕೊರೊನಾ ವೈರಸ್ ಹರಡುತ್ತಿರುವುದರಿಂದ ರಕ್ತದಾನ ಶಿಬಿರಗಳು ನಡೆಯುತ್ತಿಲ್ಲವಾದರೂ, ನಾವೇ ವೈದ್ಯರ ದಿನಾಚರಣೆಯಂದು ಹೆಚ್.ಡಿ.ಕೋಟೆಯ ಸರಗೂರಿನಲ್ಲಿ, ಮೈಸೂರಿನ ಬೃಂದಾವನ ಆಸ್ಪತ್ರೆ ಮತ್ತಿತರೆಡೆ ರಕ್ತದಾನ ಶಿಬಿರ ಮಾಡಿ ರಕ್ತ ಸಂಗ್ರಹಿಸಿದ್ದೇವೆ ಎಂದು ಅವರು ತಿಳಿಸಿದರು.

ಮೊದಲು ಹೆಚ್ಚು ಹೆಚ್ಚು ಶಿಬಿರಗಳು ನಡೆಯುತ್ತಿದ್ದರಿಂದ ದಾನಿಗಳು ರಕ್ತ ನೀಡುತ್ತಿದ್ದರು. ಅನೀಮಿಯಾ, ಗರ್ಭಿಣಿಯರು, ಆಪರೇಷನ್‍ಗೊಳಪಡುವ ರೋಗಿ ಗಳಿಗೆ ಬೇಡಿಕೆಗನುಗುಣವಾಗಿ ರಕ್ತ ಪೂರೈಸುತ್ತಿದ್ದೆವು. ಈಗ ನಾವೇ ರಕ್ತದಾನ ಮಾಡುವಂತೆ ಕೇಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಅವರು ತಿಳಿಸಿದರು.

ತುರ್ತು ಚಿಕಿತ್ಸೆಗೆ ಯಾವುದೇ ಷರತ್ತಿಲ್ಲದೆ ರಕ್ತ ನೀಡುತ್ತಿದ್ದೇವೆ. ಮೊದಲು ಬ್ಲಡ್ ಬ್ಯಾಂಕಿಗೆ ಪ್ರತೀ ದಿನ 35ರಿಂದ 40 ಯೂನಿಟ್ ರಕ್ತ ಬರುತ್ತಿತ್ತು. 50ರಿಂದ 60 ಬಾಟೆಲ್ ಅನ್ನು ನೀಡುತ್ತಿದ್ದೆವು. ಈಗ 15ರಿಂದ 20 ಬಾಟಲ್ ಬಂದರೆ ಅದೇ ಹೆಚ್ಚು, ಆದರೆ ನಮ್ಮಲ್ಲಿ ಸದ್ಯ ಸುಮಾರು 200 ಯೂನಿಟ್ ರಕ್ತ ಸದಾ ದಾಸ್ತಾನಿರುತ್ತದೆ. ಆದ್ದರಿಂದ ರಕ್ತದ ಕೊರತೆ ಉಂಟಾಗಿಲ್ಲ ಎಂದು ಡಾ.ಮಂಜುನಾಥ ತಿಳಿಸಿದರು.

ಕೊರೊನಾ ಸೋಂಕಿತರಿಗಾಗಿ ರಕ್ತ ಬೇಕೆಂಬ ಬೇಡಿಕೆ ಈವರೆಗೆ ಬಂದಿಲ್ಲ. ಆದರೆ ಬೇರೆ ತುರ್ತು ಚಿಕಿತ್ಸೆಗಾಗಿ ಬೇಡಿಕೆ ಬರುತ್ತಿದೆ. ಯಾರನ್ನೂ ವಾಪಸ್ ಕಳಿಸದೇ ಅಗತ್ಯವಿದ್ದವರಿಗೆ ರಕ್ತಕೊಡುತ್ತಿದ್ದೇವೆ ಎಂದು ಅವರು ತಿಳಿಸಿದರು.

Translate »