ಕಾವ್ಯ ನನ್ನನ್ನು ಬದುಕಿಸಿದೆ
ಮೈಸೂರು

ಕಾವ್ಯ ನನ್ನನ್ನು ಬದುಕಿಸಿದೆ

November 12, 2018

ಮೈಸೂರು: ನನ್ನ ಜೀವನದಲ್ಲಿ ಆದಂತಹ ನೋವು ಮರೆಯಲು ನಾನು ಆಯ್ದುಕೊಂಡದ್ದೇ ಕಾವ್ಯ. ಹೀಗಾಗಿ ಕಾವ್ಯ ನನ್ನನ್ನು ಬದುಕಿಸಿದೆ. ಹೀಗೆಂದು ಹೇಳಿದವರು ಕನ್ನಡದ ಹಿರಿಯ ಸಾಹಿತಿ, ಪ್ರೊರಾಗೌ ಎಂದು ಪರಿಚಿತರಾಗಿರುವ ಪ್ರೊ.ಎಂ.ರಾಮೇಗೌಡ.
ಕನ್ನಡ ರಾಜ್ಯೋತ್ಸವ ಅಂಗವಾಗಿ ಮೈಸೂರಿನ ಸಂವಹನ ಟ್ರಸ್ಟ್ ಜೆಎಸ್‍ಎಸ್ ರಾಜೇಂದ್ರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಹಿರಿಯ ಸಾಹಿತಿಗಳಿಗೆ ಸನ್ಮಾನ ಮತ್ತು ಸಂವಹನ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ತಮ್ಮ ನೋವಿನ ಹಲವು ಸಂಗತಿಗಳನ್ನು ಹಂಚಿಕೊಂಡರು. ನನ್ನ ಮೊದಲ ಆಸಕ್ತಿ ಕಾವ್ಯ. ಅದು ಕೊನೆಯ ಆಸಕ್ತಿಯೂ ಹೌದು. ನಾನು ಕಾವ್ಯವನ್ನು ಆಯ್ದುಕೊಳ್ಳದೇ ಹೋಗಿದ್ದರೆ ಬದುಕಿರುತ್ತಿಲ್ಲ. ಕಾವ್ಯ ನನ್ನನ್ನು ಬದುಕಿಸಿದೆ. ಇದು ನಿಜವಾದ ಮಾತು ಎಂದು ನುಡಿದರು.

ಇಂದಿಗೂ ನಾನು ಕಾವ್ಯ ಬರೆಯುತ್ತಿದ್ದೇನೆ. ನಿರಾವರಣ ಮತ್ತು ನಿರಾಭರಣ ಕೃತಿಗಳು ಬರಬೇಕಿವೆ. ಇನ್ನೂ 300 ಕವಿತೆಗಳು ಇಂದಿಗೂ ಇವೆ. ನನ್ನ ನೋವು ಮತ್ತು ದುಃಖವನ್ನು ಹೊರ ಹಾಕಲಿಕ್ಕೆ ಕವಿತೆ ಬರೆದೆ ಎಂದು ತಿಳಿಸಿದರು.

ತಮ್ಮ ಬದುಕಿನಲ್ಲಿ ಅನೇಕ ಬಾರಿ ಎದುರಾದ ಕೆಲವು ನೋವಿನ ಮತ್ತು ಮುಜುಗರದ ಪ್ರಸಂಗಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಹಿಂದೊಮ್ಮೆ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕಾರ್ಯಕ್ರಮದಲ್ಲಿ ತಮ್ಮ ಪದ್ಯವನ್ನು ಪ್ರಾರ್ಥನೆಯಾಗಿ ಸಾಮೂಹಿಕವಾಗಿ ಹಾಡಲಾ ಯಿತು. ನನಗೆ ಸಂತೋಷವೇನೋ ಆಯಿತು. ನಡುವೆ ನೋವೂ ಉಂಟಾಯಿತು. ಏಕೆಂದರೆ ಪದ್ಯ ಬರೆದ ನನ್ನ ಹೆಸರೇ ಅಲ್ಲಿ ಹೇಳ ಲಿಲ್ಲ. ಪಕ್ಕದಲ್ಲಿ ಕುಳಿತಿದ್ದ ಪ್ರೊ.ಸಿಪಿಕೆ ಅವರು, ಈ ಪದ್ಯ ಯಾರ ದೆಂದು ನನ್ನನ್ನು ಕೇಳಿದರು. ಅದರಿಂದ ನನಗೆ ಇನ್ನಷ್ಟು ನೋವಾ ಯಿತು. ನಾನು ಅಲ್ಲಿ `ಅದು ನನ್ನ ಪದ್ಯ’ ಎಂದು ಹೇಗೆ ಹೇಳಿ ಕೊಳ್ಳಲಿ ಎಂದರು. ಇಂತಹ ಇನ್ನಷ್ಟು ಮುಜುಗರದ, ನೋವಿನ ಪ್ರಸಂಗಗಳನ್ನು ವಿವರಿಸಿದರು.

ಪುರಸ್ಕøತರನ್ನು ಕುರಿತು ಮಾತನಾಡಿದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ, ಪ್ರೊ.ರಾಗೌ ಅವರ ಬದುಕು-ಬರಹ ಬಹಳ ಮೌಲಿಕವಾದದ್ದು. ಅವರ ಬದುಕು ಅರಿವಿನ ಯಾತ್ರೆ ಎಂದು ವಿಶ್ಲೇಷಿಸಿದರು.
ಹಿರಿಯ ಸಾಹಿತಿ ಪ್ರೊ.ರಾಗೌ ಅವರಿಗೆ ಸನ್ಮಾನ ಮತ್ತು ವಿಮ ರ್ಶಕ ಡಾ.ನಂದೀಶ್ ಹಂಚ್ಯ ಅವರಿಗೆ ಸಂವಹನ ಸಿರಿ ಪ್ರಶಸ್ತಿ ನೀಡಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಹಾಗೂ ಪತ್ರಕರ್ತ ರವೀಂದ್ರ ಜೋಷಿ ಗೌರವಿಸಿದರು. ಸಂವಹನ ಟ್ರಸ್ಟ್‍ನ ಗೌರವಾಧ್ಯಕ್ಷ, ಮಾಜಿ ಎಂಎಲ್‍ಸಿ ತೋಂಟದಾರ್ಯ ಅಧ್ಯಕ್ಷತೆ ವಹಿಸಿದ್ದರು. ನಟರಾಜ ಪ್ರತಿಷ್ಠಾನದ ಅಧ್ಯಕ್ಷ ಚಿದಾನಂದ ಸ್ವಾಮೀಜಿ, ಸಂವಹನ ಟ್ರಸ್ಟ್ ಅಧ್ಯಕ್ಷ ಡಿ.ಎನ್.ಲೋಕಪ್ಪ ಇನ್ನಿ ತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Translate »