ಡಾಕ್ಟರ್ ಆಫ್ ಪ್ಲಾಂಟ್ ಮೆಡಿಸಿನ್ ಕೋರ್ಸ್ ಆರಂಭಿಸಿ
ಮೈಸೂರು

ಡಾಕ್ಟರ್ ಆಫ್ ಪ್ಲಾಂಟ್ ಮೆಡಿಸಿನ್ ಕೋರ್ಸ್ ಆರಂಭಿಸಿ

November 12, 2018

ಮೈಸೂರು:  ಮೈಸೂರು ವಿಶ್ವವಿದ್ಯಾ ನಿಲಯದಲ್ಲಿ `ಡಾಕ್ಟರ್ ಆಫ್ ಪ್ಲಾಂಟ್ ಮೆಡಿಸಿನ್’ ವಿಷಯ ಕುರಿತಂತೆ ಐದು ವರ್ಷಗಳ ಕೋರ್ಸ್ ಆರಂಭಿಸುವ ಸಂಬಂಧ ಯೋಜನೆಯ ರೂಪುರೇಷೆ ಸಿದ್ಧಪಡಿಸುವಂತೆ ಮೈಸೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ ಸಲಹೆ ನೀಡಿದರು.

ಮೈಸೂರಿನ ಎಂಎಎಸ್‍ವಿಎಸ್ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಮೈಸೂರು ವಿವಿಯ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ಲಾಂಟ್ ಕ್ಲಿನಿಕ್ ವತಿಯಿಂದ `ಸಸ್ಯಾರೋಗ್ಯ ತಪಾಸಣೆ ಮತ್ತು ಸಮಗ್ರ ರೋಗ ನಿರ್ವ ಹಣೆ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಾ ಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಲವೇ ದಿನಗಳಲ್ಲಿ ಮೈಸೂರು ವಿವಿಗೆ ಖಾಯಂ ಕುಲ ಪತಿ ನೇಮಕವಾಗುವ ಮಾಹಿತಿ ಇದೆ. ಈ ಹಿನ್ನೆಲೆ ಯಲ್ಲಿ ವಿವಿಯಲ್ಲಿ `ಡಾಕ್ಟರ್ ಆಫ್ ಪ್ಲಾಂಟ್ ಮೆಡಿಸಿನ್’ ವಿಷಯ ಕುರಿತಂತೆ 5 ವರ್ಷಗಳ ಅವಧಿಯ ಇಂಟರ್ ಗ್ರೇಡೆಟ್ ಕೋರ್ಸ್ ಆರಂಭಿಸುವ ಸಂಬಂಧ ಯೋಜ ನೆಯ ರೂಪುರೇಷೆ ಸಿದ್ಧಪಡಿಸಿ, ನೂತನ ಕುಲಪತಿ ಗಳಿಗೆ ಸಲ್ಲಿಸುವಂತೆ ವೇದಿಕೆಯಲ್ಲಿದ್ದ ಮೈಸೂರು ವಿವಿಯ ಪ್ಲಾಂಟ್ ಕ್ಲಿನಿಕ್ ಸ್ಥಾಪಕ ಪ್ರೊ.ಎಸ್.ಶಂಕರ್ ಭಟ್ ಅವರಿಗೆ ಸಲಹೆ ನೀಡಿದರು.

ಮೈಸೂರು ವಿವಿಯಲ್ಲಿ `ಪ್ರಾಚೀನ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ’ ಕುರಿತಂತೆ ಪದವಿ ಇಲ್ಲವೇ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸುವ ಸಂಬಂಧ ನೂತನ ಕುಲಪತಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿ ದ್ದೇನೆ ಎಂದ ಅವರು, ಶೈಕ್ಷಣಿಕ ಸಾಮಾಜಿಕ ಜವಾಬ್ದಾರಿ ಅಡಿ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಲು ವಿವಿಗಳು ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ಲಾಂಟ್ ಕ್ಲಿನಿಕ್ ಸ್ಥಾಪಕ ಪ್ರೊ.ಎಸ್.ಶಂಕರ ಭಟ್, ಪ್ರಸ್ತುತ ದೇಶದಲ್ಲಿ ರುವ 130 ಕೋಟಿ ಜನಸಂಖ್ಯೆಗೆ ಅಗತ್ಯವಿರುವ ಆಹಾರ ಪೂರೈಕೆಗೆ ಬೇಕಿರುವಷ್ಟು ಕೃಷಿ ಭೂಮಿ ಲಭ್ಯವಿಲ್ಲ. ನಗರ ಪ್ರದೇಶಗಳು ಬೆಳೆಯುತ್ತಿರುವ ಕಾರಣ ಕೃಷಿ ಭೂಮಿಗಳ ಕೊರತೆ ಉದ್ಭವವಾಗಿದೆ. ಜೊತೆಗೆ ಇಂದು ನೀರಾವರಿ ಸ್ಥಿತಿಯು ಕ್ಷೀಣಿಸಿದೆ. ಕೃಷಿಯಲ್ಲಿ ಸಾವಯವ ಗೊಬ್ಬರ ಬಳಕೆ ಕಡಿಮೆಯಾಗಿ ರಾಸಾಯನಿಕ ಗೊಬ್ಬರ ಅವೈಜ್ಞಾನಿಕವಾಗಿ ಬಳಕೆಯಾಗುತ್ತಿದೆ. ಪರಿಣಾಮ ಕೃಷಿ ಭೂಮಿಯ ಮಣ್ಣಿನ ಸೂಕ್ಷ್ಮ ರಚನೆ ಹಾಗೂ ಧನಾ ತ್ಮಕ ಗುಣ ಹದಗೆಡುತ್ತಿದೆ ಎಂದು ವಿಷಾದಿಸಿದರು.

ಪ್ಲಾಂಟ್ ಕ್ಲಿನಿಕ್‍ಗಳು ಹೆಚ್ಚಾಗಲಿ: ಅವೈಜ್ಞಾನಿಕ ಕೃಷಿ ಪದ್ಧತಿಯಿಂದ ಇಂದು ಮಾನವ ಸಂಕುಲಕ್ಕೆ ಸಂಕಷ್ಟ ಎದುರಾಗಿದ್ದು, ಪರಿಸರ ಸ್ನೇಹಿ ಕೃಷಿಗೆ ಆದ್ಯತೆ ನೀಡುವ ಜರೂರು ನಮ್ಮ ಮುಂದಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಪ್ಲಾಂಟ್ ಕ್ಲಿನಿಕ್, ಸಂಚಾರಿ ಪ್ಲಾಂಟ್ ಕ್ಲಿನಿಕ್‍ಗಳು ಹಾಗೂ ಪ್ಲಾಂಟ್ ಡಾಕ್ಟರ್‍ಗಳ ಸಂಖ್ಯೆ ಹೆಚ್ಚಳಗೊಳ್ಳು ವಂತಹ ಕ್ರಾಂತಿಯೇ ಆಗಬೇಕಿದೆ. ಇದರಿಂದ ಸಸ್ಯಗಳ ರೋಗ ನಿರ್ವಹಣೆ ಪರಿಣಾಮಕಾರಿ ಆಗಲಿದ್ದು, ಆ ಮೂಲಕ ರೈತರ ಬೆಳೆಗಳು ರೋಗಗಳಿಂದ ಮುಕ್ತವಾ ಗಲು ಸಾಧ್ಯವಾಗಲಿದೆ. ದೇಶದ ಒಟ್ಟು ಕೃಷಿಕರ ಪೈಕಿ ಶೇ.86ರಷ್ಟು ಸಣ್ಣ ರೈತರಿದ್ದಾರೆ. ಮುಖ್ಯವಾಗಿ ಇವರಿಗೆ ನೆರವಾಗಲು ಪ್ಲಾಂಟ್ ಕ್ಲಿನಿಕ್‍ಗಳು ಹೆಚ್ಚಾಗುವ ಅಗತ್ಯವಿದೆ. ಮೈಸೂರು ವಿವಿಯ ಸಸ್ಯಶಾಸ್ತ್ರದ ವಿಭಾಗದಲ್ಲಿರುವ `ಸಸ್ಯಾರೋಗ್ಯ ಕೇಂದ್ರ’ಕ್ಕೆ 27 ವರ್ಷಗಳ ಚರಿತ್ರೆ ಇದೆ ಎಂದು ಪ್ರೊ.ಎಸ್.ಶಂಕರ ಭಟ್ ತಿಳಿಸಿದರು.

ಸಸ್ಯಗಳಲ್ಲಿ ರೋಗ ಗುಣಗಳನ್ನು ಪತ್ತೆ ಹಚ್ಚುವ ವಿಧಾನಗಳ ಬಗ್ಗೆ ಮೈಸೂರು ವಿವಿ ಸಸ್ಯಶಾಸ್ತ್ರ ವಿಭಾ ಗದ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಸಾದರಪಡಿಸಿದರು. ಮಧ್ಯಾಹ್ನ 1ರವರೆಗೆ ನಡೆದ ಉಪನ್ಯಾಸ, ಸಂವಾದ ಕಾರ್ಯಕ್ರಮಗಳಲ್ಲಿ ರೈತರು, ವಿದ್ಯಾರ್ಥಿಗಳು, ಸಂಶೋಧಕರು, ಆಸಕ್ತರು ಪಾಲ್ಗೊಂಡು ಕಾರ್ಯಾ ಗಾರವನ್ನು ಸದುಪಯೋಗ ಪಡಿಸಿಕೊಂಡರು.  ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮ ದಾಸ್ ಉದ್ಘಾಟಿಸಿದರು. ಎಂಎಎಸ್‍ವಿಎಸ್ ಗುರು ಕುಲ ಪದವಿಪೂರ್ವ ಕಾಲೇಜಿನ ನಿರ್ದೇಶಕ ಪ್ರೊ. ಜಿ.ತಿಮ್ಮಪ್ಪ, ಪ್ರಾಂಶುಪಾಲ ಪ್ರೊ.ಪಿ.ಡಿ.ಕನ್ನೀಕರ್, ಪ್ಲಾಂಟ್ ಕ್ಲಿನಿಕ್ ಪ್ರಾಧ್ಯಾಪಕ ಪ್ರೊ.ಜಿ.ಆರ್. ಜನಾ ರ್ಧನ ಮತ್ತಿತರರು ಹಾಜರಿದ್ದರು.

Translate »