ವಿಷಪ್ರಾಶನ; ಮೈಸೂರಲ್ಲಿ 5 ಬೀದಿನಾಯಿ ಸಾವು
ಮೈಸೂರು

ವಿಷಪ್ರಾಶನ; ಮೈಸೂರಲ್ಲಿ 5 ಬೀದಿನಾಯಿ ಸಾವು

June 13, 2020

ಮೈಸೂರು, ಜೂ.12(ಎಂಟಿವೈ)- ಕೇರಳದಲ್ಲಿ ಗರ್ಭಿಣಿ ಆನೆಗೆ ಸ್ಫೋಟಕವಿಟ್ಟ ಅನಾನಸ್ ನೀಡಿ ಹತ್ಯೆ ಮಾಡಿದ ಪ್ರಕರಣದ ನೆನಪಿನ್ನೂ ಮಾಸಿಲ್ಲ. ಅಷ್ಟರಲ್ಲಾಗಲೇ ಮೈಸೂರಲ್ಲಿ ದುರುಳರು ವಿಷವಿಕ್ಕಿ 5 ಬೀದಿನಾಯಿಗಳನ್ನು ಕೊಂದಿದ್ದಾರೆ. 10ಕ್ಕೂ ಹೆಚ್ಚು ಬೀದಿನಾಯಿಗಳ ಸಾವು ಬದುಕಿನ ನಡುವೆ ಹರಾಡುತ್ತಿವೆ.

ಮೈಸೂರಿನ ಟಿ.ಕೆ.ಲೇಔಟ್‍ನ ಕವಿತಾ ಬೇಕರಿ ಹಾಗೂ ಸುತ್ತಲಿನ ರಸ್ತೆಗಳಲ್ಲಿದ್ದ 15ಕ್ಕೂ ಹೆಚ್ಚು ಬೀದಿನಾಯಿಗಳಿಗೆ ಗುರುವಾರ ಮಧ್ಯಾಹ್ನ ವಿಷಪೂರಿತ ಆಹಾರ ನೀಡಿದ್ದಾರೆ. ವಿಷಾಹಾರ ಸೇವಿಸಿದ ನಾಯಿಗಳು ಕೆಲ ಹೊತ್ತಲ್ಲೇ ರಸ್ತೆಯಂಚಲ್ಲಿ, ಪಾದಚಾರಿ ಮಾರ್ಗದಲ್ಲಿ ನರಳುತ್ತಾ ಬಿದ್ದಿವೆ. ಮೊದಲಿಗೆ ನಾಯಿಗಳ ಸ್ಥಿತಿಯನ್ನು ದಾರಿ ಹೋಕರು ಗಮನಿಸಿಲ್ಲ. ನಾಯಿಗಳಿಗೆ ನಿತ್ಯವೂ ಆಹಾರ ನೀಡುತ್ತಿದ್ದ ಸ್ಥಳೀಯ ನಿವಾಸಿ ಲಕ್ಷ್ಮೀ ಗುರುರಾಜ್ ಎಂಬವರು ನಾಯಿಗಳು ಒದ್ದಾಡುವುದನ್ನು ಕಂಡು ಕೂಡಲೇ ಪೀಪಲ್ಸ್ ಫಾರ್ ಎನಿಮಲ್ಸ್(ಪಿಎಫ್‍ಎ)ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಂಬುಲೆನ್ಸ್‍ನಲ್ಲಿ ಬಂದ ಪಿಎಫ್‍ಎ ಸ್ವಯಂಸೇವಕರು ಒದ್ದಾಡುತ್ತಾ ಬಿದ್ದಿದ್ದ 13 ನಾಯಿಗಳನ್ನು ರಕ್ಷಿಸಿದ್ದಾರೆ. 5 ನಾಯಿಗಳು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿವೆ.

ಪಿಎಫ್‍ಎ ಮ್ಯಾನೇಜಿಂಗ್ ಟ್ರಸ್ಟಿ ಸವಿತಾ ನಾಗಭೂಷಣ್ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ವಿಷಾಹಾರ ಸೇವಿಸಿ ಬೀದಿನಾಯಿಗಳು ನರಳುತ್ತಾ ಬಿದ್ದಿರುವ ಬಗ್ಗೆ ಸ್ಥಳೀಯರು ಕರೆ ಮಾಡಿ ತಿಳಿಸಿದರು. ಗಂಭೀರಸ್ಥಿತಿಯಲ್ಲಿದ್ದ 4 ನಾಯಿಗಳಿಗೆ ಚಿಕಿತ್ಸೆ ಆರಂಭಿಸಿದರೂ ಅವು ಮೃತಪಟ್ಟವು. ಮತ್ತೊಂದು ನಾಯಿ ಬೇರೆಡೆ ಮೃತಪಟ್ಟಿದೆ. ನಾಯಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬೆಂಗಳೂರಿನ ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ವಿಷಪೂರಿತ ಆಹಾರ ಸೇವನೆಯ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ಯಿಂದ ಸ್ಪಷ್ಟಕಾರಣ ತಿಳಿಯಲಿದೆ. ಸಂಸ್ಥೆಯ ಸ್ವಯಂಸೇವಕರು ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವಿವರಿಸಿದರು.

ಸಿಸಿ ಕ್ಯಾಮರಾ: ಬೀದಿನಾಯಿಗಳ ಮೇಲಿನ ವಿಷಪ್ರಯೋಗ ಪ್ರಕರಣವನ್ನು ಪೊಲೀ ಸರು ಗಂಭೀರವಾಗಿ ಪರಿಗಣಿಸಬೇಕು. ಕ್ರೂರಿಗಳಿಗೆ ತಕ್ಕ ಶಾಸ್ತಿ ಆಗಬೇಕು. ಘಟನೆ ಬೆಳಕಿಗೆ ಬಂದಿರುವುದು ಗುರುವಾರ ಮಧ್ಯಾಹ್ನ 3.30ಕ್ಕೆ. ಸುತ್ತಲಿನ ವಾಣಿಜ್ಯ ಮಳಿಗೆ, ಕಚೇರಿಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದರೆ ವಿಷವಿಕ್ಕಿ ದವರÀ ಸುಳಿವು ಸಿಗುತ್ತದೆ ಎಂದಿರುವ ಸ್ಥಳೀಯರು, ದುರುಳರ ಕೃತ್ಯಕ್ಕೆ ಹಿಡಿಶಾಪ ಹಾಕಿದ್ದಾರೆ. ವಿಷವುಣಿಸಿದವರನ್ನು ಬೇಗ ಪತ್ತೆ ಮಾಡಿ ಶಿಕ್ಷಿಸುವಂತೆ ಆಗ್ರಹಿಸಿದ್ದಾರೆ.

Translate »