ಸರಳ, ಸುರಕ್ಷಿತ ಬಕ್ರೀದ್ ಆಚರಣೆಗೆ ಪೊಲೀಸರ ಸಲಹೆ
ಮೈಸೂರು

ಸರಳ, ಸುರಕ್ಷಿತ ಬಕ್ರೀದ್ ಆಚರಣೆಗೆ ಪೊಲೀಸರ ಸಲಹೆ

July 31, 2020

ಮೈಸೂರು, ಜು.30(ಎಂಕೆ)- ಮೈಸೂರು ನಗರದೆಲ್ಲೆಡೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದವರು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ, ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ಬಕ್ರೀದ್ ಆಚರಣೆ ಮಾಡುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

ಕಳೆದೆರಡು ದಿನಗಳಿಂದ ನಗರದ ಅಶೋಕ ರಸ್ತೆಯಲ್ಲಿರುವ ಮೀಲಾದ್ ಪಾರ್ಕ್, ಉದಯಗಿರಿಯ ನೆಹರು ಪಾರ್ಕ್ ಹಾಗೂ ಪ್ರಮುಖ ಮಸೀದಿಗಳಲ್ಲಿ ಮುಸ್ಲಿಂ ಧರ್ಮಗುರುಗಳು, ಸ್ವಯಂಸೇವಕರೊಂದಿಗೆ ಸಭೆ ನಡೆಸಿರುವ ಎನ್.ಆರ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಿವಶಂಕರ್ ಮತ್ತು ದೇವರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಶಿಧರ್ ಬಕ್ರೀದ್ ಆಚರಣೆ ಕುರಿತು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. `ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿರುವ ಹಿನ್ನೆಲೆ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಣೆ ಮಾಡುವಂತೆ ಸೂಚಿಸ ಲಾಗುತ್ತಿದೆ. ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿಯೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಸಾಮೂಹಿಕ ಪ್ರಾರ್ಥನೆ ಮಾಡದಂತೆ ಸೂಚಿಸಲಾಗಿದೆ. ಜನಸಂದಣಿ ಹೆಚ್ಚದಂತೆ ಜಾಗ್ರತೆ ವಹಿಸುವಂತೆ ತಿಳಿಸಲಾಗಿದೆ’ ಎಂದು ನಗರ ಪೊಲೀಸ್ ಉಪ ಆಯುಕ್ತ ಪ್ರಕಾಶ್‍ಗೌಡ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »