ಬಿಎಂಶ್ರೀ ನಗರದಲ್ಲಿ ವಿಜಯನಗರ ಕಾಲದ ಮೂರು ವೀರಗಲ್ಲು ಪತ್ತೆ
ಮೈಸೂರು

ಬಿಎಂಶ್ರೀ ನಗರದಲ್ಲಿ ವಿಜಯನಗರ ಕಾಲದ ಮೂರು ವೀರಗಲ್ಲು ಪತ್ತೆ

July 31, 2020

ಮೈಸೂರು, ಜು.30(ಎಂಕೆ)- ಮೈಸೂರಿನಲ್ಲಿ 15ನೇ ಶತ ಮಾನದ ಮೂರು ವೀರಗಲ್ಲುಗಳು ಪತ್ತೆಯಾಗಿದ್ದು, ವಿಜಯ ನಗರ ಸಾಮ್ರಾಜ್ಯದ ಅವಧಿಯದ್ದೆಂದು ಹೇಳಲಾಗುತ್ತಿದೆ.

ನಗರದ ಮೇಟಗಳ್ಳಿಯ ಬಿಎಂಶ್ರೀ ನಗರದ ಮಹಾಲಿಂಗೇಶ್ವರ ದೇವಸ್ಥಾನ ಸಮೀಪದಲ್ಲಿ ಸ್ವಚ್ಛತೆಗೆ ಮುಂದಾದಾಗ ಮಣ್ಣಿನಲ್ಲಿ ಹುದುಗಿದ್ದ ಒಂದು ವೀರಗಲ್ಲು ಹಾಗೂ ಗಿಡಗಂಟಿಗಳ ಮಧ್ಯೆ ಮರೆಯಾಗಿದ್ದ ಎರಡು ವೀರಗಲ್ಲುಗಳು ದೊರೆತಿವೆ. ಯುದ್ಧದಲ್ಲಿ ಮಡಿದ ವೀರರನ್ನು ಸ್ಮರಿಸುವ ಸಂಕೇತವಾಗಿ ನಿರ್ಮಿಸಿರುವ ಕÀಲ್ಲುಗಳು ಇವು ಎಂದು ಹೇಳಲಾಗಿದೆ. ವಿಷಯ ತಿಳಿಯುತ್ತಿ ದ್ದಂತೆ ಸ್ಥಳಕ್ಕೆ ಆಗಮಿಸಿದ ಪುರಾತತ್ವ ಇಲಾಖೆ ಅಧಿಕಾರಿಗಳು, ಸ್ಥಳ ಪರಿಶೀಲನೆ ನಡೆಸಿ, ವೀರಗಲ್ಲುಗಳನ್ನು ಹೊರತೆಗೆಸಿದ್ದಾರೆ.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪುರಾತತ್ವ ಇಲಾಖೆಯ ಮ್ಯೂಸಿಯಂ ಕ್ಯೂರೇಟರ್ ಸುನೀಲ್ ಕುಮಾರ್, ಕೆಲ ದಿನಗಳ ಹಿಂದೆ ಸರ್ವೆ ನಡೆಸಿದಾಗ ಎರಡು ವೀರಗಲ್ಲು ಇರುವುದು ತಿಳಿದುಬಂದಿತ್ತು. ಮಣ್ಣಿನಲ್ಲಿ ಹುದುಗಿದ್ದ ವೀರಗಲ್ಲು ಸೇರಿ ಈಗ ಮೂರು ವೀರಗಲ್ಲು ಪತ್ತೆಯಾದಂತಾಗಿದೆ ಎಂದರು.

ಕಪ್ಪುಶಿಲೆಯಲ್ಲಿ ಕೆತ್ತಿದ ಮತ್ತಷ್ಟು ವೀರಗಲ್ಲುಗಳು ಮಣ್ಣಿನಲ್ಲಿ ಹುದುಗಿರುವ ಸಾಧ್ಯತೆ ಇದೆ. ವೀರಗಲ್ಲಿನಲ್ಲಿ 3 ಅಡ್ಡಪಟ್ಟಿಗಳಿವೆ. ಕೆಳಗಿನ ಪಟ್ಟಿಯಲ್ಲಿ ವೀರರು ಹೋರಾಡುತ್ತಿರುವ ದೃಶ್ಯವಿದ್ದರೆ, ಮಧ್ಯದ ಪಟ್ಟಿಯಲ್ಲಿ ಹೋರಾಡಿ ಮಡಿದವರನ್ನು ಅಪ್ಸರೆಯರು ಸ್ವರ್ಗಕ್ಕೆ ಕರೆದೊಯ್ಯುವ ದೃಶ್ಯವಿದೆ. ಮೇಲಿನ ಪಟ್ಟಿಯಲ್ಲಿ ಹುತಾತ್ಮ ರಿಗೆ ಸ್ವರ್ಗ ಪ್ರಾಪ್ತಿಯಾಗಿ ಸೂರ್ಯ-ಚಂದ್ರ ಇರುವವರೆಗೂ ಅಮರವಾದರೆಂದು ಹೇಳುವ ಕೆತ್ತನೆಯಿದೆ. ಮೂರು ವೀರಗಲ್ಲಿ ನಲ್ಲಿರುವ ಅಡ್ಡಪಟ್ಟಿಗಳು ಇತಿಹಾಸವನ್ನು ನೆನಪಿಸುತ್ತವೆ ಎಂದರು. 3 ವೀರಗಲ್ಲುಗಳನ್ನು ಗ್ರಾಮಸ್ಥರೇ ಸಂರಕ್ಷಣೆ ಮಾಡುತ್ತೇವೆಂದು ತಿಳಿಸಿದ್ದಾರೆ. ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಪುರಾತತ್ವ ಇಲಾಖೆಯು ವೀರಗಲ್ಲುಗಳನ್ನು ವಶಪಡಿಸಿಕೊಳ್ಳುವ ನಿರ್ಧಾರ ಕೈ ಬಿಟ್ಟಿದೆ ಎಂದರು.

Translate »