ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿಗೆ ಪೂಜೆ ನಿಲುಗಡೆ: ಭಕ್ತರ ಬೇಸರ
ಮೈಸೂರು

ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿಗೆ ಪೂಜೆ ನಿಲುಗಡೆ: ಭಕ್ತರ ಬೇಸರ

October 23, 2020

ಜೀರ್ಣೋದ್ಧಾರ ಉದ್ದೇಶದಿಂದ ಒಂದೂವರೆ ವರ್ಷದಿಂದ ದೇವಾಲಯ ಬಂದ್ ಆಗಿದೆ
ಮೈಸೂರು, ಅ.22(ಎಸ್‍ಪಿಎನ್)- ಕಳೆದ ಒಂದೂವರೆ ವರ್ಷ ದಿಂದ ಮೈಸೂರಿನ ಮತ್ತೋರ್ವ ಶಕ್ತಿ ದೇವತೆ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿ(ಉತ್ತನಹಳ್ಳಿ ಮಾರಮ್ಮ) ಮೂಲ ವಿಗ್ರಹಕ್ಕೆ ಪೂಜೆ ಸಲ್ಲಿಸಲು ಅನುವು ಮಾಡಿಕೊಡದೇ ಇರುವುದಕ್ಕೆ ಭಕ್ತ ವೃಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದರಿಂದ ನಾನಾ ರೀತಿಯ ಕಷ್ಟ-ನಷ್ಟ ಸಂಭವಿಸುತ್ತಿವೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಕಳೆದ 10 ವರ್ಷಗಳಿಂದಲೂ ಯಾವುದೇ ಅಹಿತಕರ ಘಟನೆಗಳು ನಡೆದಿರಲಿಲ್ಲ. ಆದರೆ, ಕಳೆದೆರಡು ವರ್ಷಗಳಿಂದ ನಂಜನ ಗೂಡು ಭಾಗದಲ್ಲಿ ಏನಾದರೊಂದು ಅನಾಹುತ ಸಂಭವಿಸುತ್ತಲೇ ಇದೆ. ಕೊರೊನಾ ಸೋಂಕು ಕೂಡ ನಂಜನಗೂಡಿನಲ್ಲಿ ವ್ಯಾಪಕವಾಗಿತ್ತು. ಇದೀಗ ಮೈಸೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ. ಬೆಂಗಳೂರು ನಗರ ಬಿಟ್ಟರೆ, ನಂತರದಲ್ಲಿ ಮೈಸೂರು ಸ್ಥಾನ ಪಡೆದು ಸಾವು-ನೋವು ಹೆಚ್ಚಾಗುತ್ತಿದೆ. ಇದಕ್ಕೆಲ್ಲಾ ಮೈಸೂರಿನ ಶಕ್ತಿದೇವತೆಯಾದ ಉತ್ತನಹಳ್ಳಿ ಮಾರಮ್ಮ ಮೂಲ ವಿಗ್ರಹಕ್ಕೆ ಪೂಜೆ ನಿಲ್ಲಿಸಿರುವುದೇ ಕಾರಣ ಎನ್ನುತ್ತಾರೆ ಶ್ರೀರಾಂಪುರ 2ನೇ ಹಂತದ ಶ್ರೀ ಬಲಮುರಿ ವಿನಾಯಕ ದೇವಸ್ಥಾನದ ಅರ್ಚಕ ಸುದೀಂದ್ರಾಚಾರ್ಯ. ಕಳೆದ 8 ತಿಂಗಳ ಹಿಂದೆ ನಂಜನ ಗೂಡಿನ ಜುಬಿಲಂಟ್ ಕಾರ್ಖಾನೆ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತು. ಇದಾದ ನಂತರ ಒಂದಲ್ಲ ಒಂದು ಸಮಸ್ಯೆ ಜಿಲ್ಲಾಡಳಿತವನ್ನು ಕಾಡುತ್ತಿದೆ. ಇದಕ್ಕೆಲ್ಲಾ ಶಕ್ತಿದೇವತೆಯಾದ ಉತ್ತನಹಳ್ಳಿ ಮಾರಮ್ಮ ಮೂಲ ವಿಗ್ರಹಕ್ಕೆ ಪೂಜೆ ನಿಂತಿರುವುದೇ ಕಾರಣ ಎಂದು `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಯು ಪೂರ್ವಕ್ಕೆ ಮುಖ ಮಾಡಿದ್ದು, ಅಂದರೆ ಬಹುತೇಕ ಮೈಸೂರು ನಗರ ಅಮ್ಮನವರ ಹಿಂಭಾಗ ಬರುತ್ತದೆ. ಉತ್ತನಹಳ್ಳಿ ಮಾರಮ್ಮನವರದ್ದು ಪಶ್ಚಿಮಕ್ಕೆ ಮುಖ. ಈ ದೇವತೆ ಯಾವಾಗಲೂ ಮೈಸೂರು ನಗರವನ್ನು ನೋಡುತ್ತಿರುತ್ತಾಳೆ. ಹಾಗಾಗಿ ಮೈಸೂರಿನ ನಗರಕ್ಕೆ ಏನೇ ಅಹಿತಕರ ಘಟನೆ ನಡೆದರೂ ಅದರಿಂದ ಕಾಪಾಡುವವಳೂ ಈ ಶಕ್ತಿ ದೇವತೆ ಎಂದು ಭಕ್ತರು ನಂಬಿದ್ದಾರೆ. ಜೀರ್ಣೋದ್ಧಾರ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ವರ್ಷದ ಏಪ್ರಿಲ್‍ನಿಂದ ಮೂಲ ವಿಗ್ರಹಕ್ಕೆ ಪೂಜೆ ನಿಲ್ಲಿಸಲಾಗಿದೆ. ಜೀರ್ಣೋ ದ್ಧಾರ ಸಂದರ್ಭದಲ್ಲಿ ಶಾಸ್ತ್ರಬದ್ಧವಾಗಿ ಬೇರೆಡೆ ದೇವಿಯ ಶಕ್ತಿಪೀಠ ಸ್ಥಾಪಿಸಿ ಪೂಜೆ ಸಲ್ಲಿಸುವುದು ತಾತ್ಕಾಲಿಕ ಪರಿಹಾರ. ಆದರೆ, ದೀರ್ಘಾವಧಿ ವರೆಗೆ ಮೂಲ ವಿಗ್ರಹಕ್ಕೆ ಪೂಜೆ ನಿಲ್ಲಿಸುವುದು ತರವಲ್ಲ ಎಂಬುದು ನನ್ನ ಅನಿಸಿಕೆ ಎಂದರು. ಅಲ್ಲದೆ, ದಸರಾ ಸಂದರ್ಭದಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬರುವ ಭಕ್ತರು, ಶ್ರೀ ಚಾಮುಂಡೇಶ್ವರಿ, ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿ(ಉತ್ತನಹಳ್ಳಿ ಮಾರಮ್ಮ) ಹಾಗೂ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವುದು ವಾಡಿಕೆ. ಅದರಲ್ಲೂ ಉತ್ತರ ಭಾರತದ ಭಕ್ತರು ಈ ಸಮಯ(ದಸರಾ ಸಂದರ್ಭದಲ್ಲಿ)ದಲ್ಲಿ ಈ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಇದರ ಜೊತೆಗೆ ಇತರೆ ಪ್ರವಾಸಿ ಸ್ಥಳಗಳಿಗೂ ಕುಟುಂಬ ಸಮೇತ ಭೇಟಿ ನೀಡುತ್ತಾರೆ.ಇದರಿಂದ ಆರ್ಥಿಕವಾಗಿಯೂ ಇಲ್ಲಿಯ ಜನರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

 

Translate »