ಮೈಸೂರಲ್ಲಿ ಕೋಳಿಮಾಂಸ ಮಾರಾಟ ಆರಂಭ
ಮೈಸೂರು

ಮೈಸೂರಲ್ಲಿ ಕೋಳಿಮಾಂಸ ಮಾರಾಟ ಆರಂಭ

April 4, 2020

ಮೈಸೂರು, ಏ.3 (ಆರ್‍ಕೆ)- ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಕೋಳಿಮಾಂಸ ಮಾರಾಟ ಮೈಸೂರಿನಲ್ಲಿ ಇಂದಿನಿಂದ ಪುನರಾರಂಭವಾಯಿತು.

ಮೈಸೂರು ಮಹಾನಗರಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ ವಾರದಲ್ಲಿ 3 ದಿನ ಕೋಳಿಮಾಂಸದ ಅಂಗಡಿ ಗಳನ್ನು ತೆರೆದು ಮಾರಾಟ ಮಾಡಲು ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಬಹುತೇಕ ಕೋಳಿ ಅಂಗಡಿಗಳನ್ನು ತೆರೆಯಲಾಗಿದೆ. ಮಂಗಳವಾರ, ಶುಕ್ರವಾರ ಮತ್ತು ಭಾನು ವಾರ ಗಳಂದು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಕೋಳಿ ಮಾಂಸ ವನ್ನು ಮಾರಾಟ ಮಾಡಬಹುದು ಎಂದು ಹೇಳಿರುವು ದರಿಂದ ಮೈಸೂರಿನ ಹೆಬ್ಬಾಳು, ವಿಜಯನಗರ, ದೇವರಾಜ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಎನ್.ಆರ್.ಮೊಹಲ್ಲಾ ಸೇರಿದಂತೆ ಬಹು ತೇಕ ಕಡೆಗಳಲ್ಲಿ ಕೋಳಿ ಅಂಗಡಿಗಳಲ್ಲಿ ಕೆ.ಜಿ.ಗೆ 110ರಿಂದ 120 ಹಾಗೂ ಸ್ಕಿನ್‍ಲೆಸ್ ಮಾಂಸ ಕೆ.ಜಿ.ಗೆ 140 ರಿಂದ 160 ರೂ.ಗಳಿಗೆ ಮಾರಾಟ ಮಾಡುತ್ತಿದ್ದುದು ಇಂದು ಕಂಡು ಬಂದಿತು.

ವಾಹನ, ಕೆಲಸಗಾರರು ಸಿಗದ ಕಾರಣ ಶೇ.20ರಷ್ಟು ಸಣ್ಣಪುಟ್ಟ ಅಂಗಡಿ ಮಾಲೀಕರು ಇಂದು ಕೋಳಿ ಮಾಂಸ ಮಾರಾಟ ಸಾಧ್ಯವಾಗಲಿಲ್ಲ. ಕೋಳಿ ಮಾಂಸ ಮಾರಾಟ ಪುನರಾರಂಭವಾಗಿ ರುವುದರಿಂದ ಕುರಿ, ಮೇಕೆ ಮಾಂಸಕ್ಕೆ ಬೇಡಿಕೆ ಸಾಧಾರಣ ಮಟ್ಟಕ್ಕೆ ತಗ್ಗಿದೆ. ಸದಾ ಮಟನ್ ಅಂಗಡಿಗಳಲ್ಲಿ ಕಾಣುತ್ತಿದ್ದ ನೂಕು- ನುಗ್ಗಲು ಇಂದು ಕಡಿಮೆಯಾಗಿತ್ತು. 700 ರೂ. ಕೊಟ್ಟು ಮಟನ್ ಖರೀದಿಸುತ್ತಿದ್ದ ನಾನ್‍ವೆಜ್ ಪ್ರಿಯರು 110ರಿಂದ 120 ರೂ. ಕೊಟ್ಟು ಕೋಳಿ ಮಾಂಸ ಕೊಳ್ಳುತ್ತಿದ್ದಾರೆ ಎಂದು ಕೋಳಿ ಅಂಗಡಿ ಮಾಲೀಕ ವಿ.ರವಿ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »