ಪ್ರೀ ವೆಡ್ಡಿಂಗ್ ಫೋಟೋಶೂಟ್ ವೇಳೆ ತೆಪ್ಪ ಮುಳುಗಿ ಮಸಣ ಸೇರಿದ ಜೋಡಿ!
ಮೈಸೂರು

ಪ್ರೀ ವೆಡ್ಡಿಂಗ್ ಫೋಟೋಶೂಟ್ ವೇಳೆ ತೆಪ್ಪ ಮುಳುಗಿ ಮಸಣ ಸೇರಿದ ಜೋಡಿ!

November 10, 2020

ತಿ.ನರಸೀಪುರ, ನ.9(ಎಸ್‍ಕೆ/ಎಂಕೆ)- ಸದ್ಯದಲ್ಲೇ ಹಸೆಮಣೆ ಏರ ಲಿದ್ದ ಭಾವಿ ವಧು-ವರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವೇಳೆ ತೆಪ್ಪ ಮಗುಚಿ ಕಾವೇರಿ ಪಾಲಾದ ದುರಂತ ತಿ.ನರಸೀಪುರ ತಾಲೂ ಕಿನ ಮುಡುಕುತೊರೆಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಸಂಬಂಧಿಕರೇ ಆದ ಮೈಸೂ ರಿನ ಕ್ಯಾತಮಾರನಹಳ್ಳಿ ನಿವಾಸಿ ಗಳಾದ ಚಂದ್ರು (28) ಮತ್ತು ಶಶಿಕಲಾ (20) ನದಿಯಲ್ಲಿ ದುರಂತ ರೀತಿ ಸಾವನ್ನಪ್ಪಿ ದವರಾಗಿದ್ದು, ಕಳೆದ ವರ್ಷ ನವಂಬರ್ 22ರಂದು ನಿಶ್ಚಿ ತಾರ್ಥವಾಗಿದ್ದು, ಇದೇ 22 ರಂದು ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್‍ಗೆ ತೀರ್ಮಾನಿಸಿದ್ದ ಇವರು, ಕ್ಯಾಮರಾಮನ್ ಕೀರ್ತಿ ಎಂಬಾತನೊಂದಿಗೆ ಮುಡುಕು ತೊರೆಗೆ ಇಂದು ಮುಂಜಾನೆ ತೆರಳಿದ್ದಾರೆ. ಮುಡುಕುತೊರೆಯ ಜಲಧಾಮ ರೆಸಾರ್ಟ್ ಬಳಿ ನದಿಯಲ್ಲಿ ಚಿತ್ರೀಕರಣ ನಡೆಸಲು ನಿರ್ಧ ರಿಸಿದ್ದರು. ಇಂಗ್ಲೀಷ್‍ನ ‘ಟೈಟಾನಿಕ್’ ಚಿತ್ರದಲ್ಲಿ ಪ್ರೇಮಿಗಳು ಹಡಗಿನಲ್ಲಿ ವಿಹರಿಸುವಂತೆ ಇವರು ಬೋಟ್‍ನಲ್ಲಿ

ವಿಹರಿಸುವ ರೀತಿ ಚಿತ್ರೀಕರಣ ನಡೆಸಬೇಕೆಂದು ಕ್ಯಾಮರಾಮನ್‍ಗೆ ತಿಳಿಸಿದ್ದರಂತೆ. ಜಲಧಾಮದ ಮೋಟಾರ್ ಬೋಟ್ ಇವರಿಗೆ ಲಭ್ಯವಾಗದ ಹಿನ್ನೆಲೆಯಲ್ಲಿ ತೆಪ್ಪ ಬಳಸಿ ಮೀನು ಹಿಡಿಯುವ ಮೂಗಪ್ಪ ಎಂಬಾತನನ್ನು ಮನೆಯಿಂದ ಕರೆತಂದು ಆತನ ತೆಪ್ಪದಲ್ಲೇ ಟೈಟಾನಿಕ್ ಮಾದರಿ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ. ನದಿಯ ದಡದಿಂದ ಸುಮಾರು 20 ಮೀಟರ್ ಅಂತರದಲ್ಲಿ ತೆಪ್ಪವನ್ನು ಮೂಗಪ್ಪ ಚಾಲನೆ ಮಾಡುತ್ತಿದ್ದರೆ, ಚಂದ್ರು ಮತ್ತು ಶಶಿಕಲಾ ಕ್ಯಾಮರಾಗೆ ಪೋಸ್ ಕೊಡಲು ತೆಪ್ಪದಲ್ಲಿ ನಿಂತಿದ್ದಾರೆ. ದಡದಲ್ಲಿದ್ದ ಕ್ಯಾಮರಾಮನ್ ಕೀರ್ತಿ ಚಿತ್ರೀಕರಣದಲ್ಲಿ ನಿರತನಾಗಿದ್ದರೆ, ಆತನ ಬಳಿಯೇ ಶಶಿಕಲಾ ಸಹೋದರ ಅಭಿ ನಿಂತು ಚಂದ್ರು ಮತ್ತು ಶಶಿಕಲಾ ಅವರನ್ನು ಹುರಿದುಂಬಿ ಸುತ್ತಿದ್ದ ಎನ್ನಲಾಗಿದೆ. ಟೈಟಾನಿಕ್ ಚಿತ್ರದ ಪ್ರೇಮಿಗಳ ರೀತಿ ಪೋಸ್ ನೀಡಲು ಶಶಿಕಲಾ ತೆಪ್ಪದ ಅಂಚಿನಲ್ಲಿ ತನ್ನ ಹೈಹೀಲ್ಡ್ ಚಪ್ಪಲಿ ಧರಿಸಿದ್ದ ಕಾಲನ್ನು ಇಟ್ಟಾಗ ತೆಪ್ಪ ಒಂದು ಕಡೆ ವಾಲಿ ಮುಳುಗಿದೆ. ಮೂಗಪ್ಪ ಈಜಿ ದಡ ಸೇರಿದ ನಂತರ ಪರಾರಿಯಾಗಿ ದ್ದಾನೆ. ಈಜು ಬಾರದ ಚಂದ್ರು ಮತ್ತು ಶಶಿಕಲಾ ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಲ್ಪಸ್ವಲ್ಪ ಈಜು ಬರುತ್ತಿದ್ದ ಕ್ಯಾಮರಾಮನ್ ಕೀರ್ತಿ ಇವರಿಬ್ಬರನ್ನು ರಕ್ಷಿಸಲು ಯತ್ನಿಸಿದನಾ ದರೂ ಅದು ಸಾಧ್ಯವಾಗಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ತಲಕಾಡು ಪೊಲೀಸ್ ಠಾಣೆಗೆ ತೆರಳಿದ ಕೀರ್ತಿ, ದುರಂತದ ಬಗ್ಗೆ ತಿಳಿಸಿದ ತಕ್ಷಣ ತಮ್ಮ ಸಿಬ್ಬಂದಿ ಹಾಗೂ ಈಜುಗಾರರ ಜೊತೆ ಮುಡುಕುತೊರೆಗೆ ತೆರಳಿದ ಸಬ್‍ಇನ್ಸ್‍ಪೆಕ್ಟರ್ ಸಿದ್ದಯ್ಯ ಮೃತದೇಹಗಳನ್ನು ನದಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಮೆಡಿಕಲ್ ಕಾಲೇಜು ಶವಾಗಾರಕ್ಕೆ ರವಾನಿಸಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ತೆಪ್ಪ ಚಾಲನೆ ಮಾಡುತ್ತಿದ್ದ ಮೂಗಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. ನಂಜನಗೂಡು ಡಿವೈಎಸ್ಪಿ ಪ್ರಭಾಕರರಾವ್ ಶಿಂಧೆ, ಸರ್ಕಲ್ ಇನ್ಸ್‍ಪೆಕ್ಟರ್ ಲಕ್ಷ್ಮೀಕಾಂತ ತಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಇಷ್ಟರಲ್ಲೇ ಮದುವೆಯಾಗಬೇಕಿದ್ದವರು ದುರಂತದಲ್ಲಿ ಸಾವಿಗೀಡಾಗಿದ್ದು, ಇವರಿಬ್ಬರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಕ್ಯಾತಮಾರನಹಳ್ಳಿಯ ಶಿವಣ್ಣ ಮತ್ತು ರತ್ನ ದಂಪತಿಯ ಪುತ್ರ ಚಂದ್ರು ಕಾಂಕ್ರೀಟ್ ಮಿಕ್ಸಿಂಗ್ ಯಂತ್ರಗಳನ್ನಿಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು. ಕುಟುಂಬಕ್ಕೆ ಈತನೇ ಆಧಾರಸ್ತಂಭವಾಗಿದ್ದು, ಈತನ ಸಾವಿನಿಂದಾಗಿ ಕುಟುಂಬಸ್ಥರು ದಿಕ್ಕು ತೋಚದಂತಾಗಿದ್ದಾರೆ.

 

 

Translate »