ಮಡಿಕೇರಿ,ಮಾ.6-ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್‍ನ ಶಂಕಿತ ಪ್ರಕರಣ ಇಂದಿನವರೆಗೂ ಕಂಡು ಬಂದಿಲ್ಲ ವಾದರೂ, ರಾಜ್ಯ ಆರೋಗ್ಯ ಇಲಾಖೆಯ ಸೂಚನೆಯಂತೆ ಮುಂಜಾಗೃತಾ ಕ್ರಮವಾಗಿ ಜಿಲ್ಲಾ ಆರೋಗ್ಯ ಇಲಾಖೆ ಜಿಲ್ಲಾಸ್ಪತ್ರೆಯಲ್ಲಿ 5 ಹಾಸಿಗೆಗಳ ವಾರ್ಡ್ ಒಂದನ್ನು ಶಂಕಿತ ಪ್ರಕರಣದ ಚಿಕಿತ್ಸೆಗಾಗಿ ಮೀಸಲಿಟ್ಟಿದೆ.
ಭಿತ್ತಿ ಪತ್ರಗಳು, ಕರ ಪತ್ರಗಳನ್ನು ಜನ ಸಂದಣಿ ಇರುವ ಪ್ರದೇಶಗಳಲ್ಲಿ ಹಂಚಲಾ ಗುತ್ತಿದೆ. ಕೊಡಗು ಜಿಲ್ಲೆಯ ನೆರೆಯ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಹಿನ್ನಲೆಯಲ್ಲಿ ಗಡಿ ಗ್ರಾಮಗಳಲ್ಲಿ, ಚೆಕ್ ಪೋಸ್ಟ್‍ಗಳಲ್ಲಿ ಆರೋಗ್ಯ ಇಲಾಖೆ ವಿಶೇಷ ನಿಗಾ ವ್ಯವಸ್ಥೆ ಮಾಡಿದ್ದು, ಸೋಂಕು ಹರಡದಂತೆ ತಡೆಯುವ ಮಾಹಿತಿಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುತ್ತಿದೆ.
ಈ ನಡುವೆ ಕೊಡಗು ಜಿಲ್ಲೆಯಲ್ಲಿ ವೈರಸ್ ತಡೆಯುವ ಮಾಸ್ಕ್‍ಗೆ ಭಾರೀ ಬೇಡಿಕೆ ಕಂಡು ಬಂದಿದ್ದು, ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಗೆ ಮುಂದಾಗುತ್ತಿ ರುವುದು ಕಂಡು ಬರುತ್ತಿದೆ. ಇದರಿಂದಾಗಿ ಮೆಡಿಕಲ್ ಸ್ಟೋರ್‍ಗಳಲ್ಲಿ ಮಾಸ್ಕ್‍ಗಳ ಬೆಲೆಯೂ ದುಪ್ಪಟ್ಟಾಗಿದೆ. ಮೆಡಿಕಲ್ ಸ್ಟೋರ್ ಗಳು ಮಾಸ್ಕ್‍ಗಳಿಗೆ ಬೇಡಿಕೆ ಮುಂದಿಟ್ಟ ಪ್ರಮಾಣದಷ್ಟು ಪೂರೈಕೆಯಾಗುತ್ತಿಲ್ಲ ಎಂದು ಔಷಧಿ ಮಳಿಗೆಗಳ ವರ್ತಕರು ಹೇಳಿದ್ದಾರೆ.
ಐಎಸ್‍ಐ ಗುಣಮಟ್ಟ ಹೊಂದಿರುವ “ಎನ್.95” ಮಾಸ್ಕ್‍ನ ಸಾಮಾನ್ಯ ದರ 25 ರೂ.ಗಳಿದ್ದು, ಇದರ ಬೆಲೆ ಇದೀಗ ಮಡಿಕೇರಿಯಲ್ಲಿ 200 ರೂ.ಗೆ ಏರಿಕೆ ಯಾಗಿದೆ. ಸಾಮಾನ್ಯ ಮಾಸ್ಕ್‍ನ ಬೆಲೆ 3 ರೂ.ಗಳಾಗಿದ್ದು, ಇದರ ಬೆಲೆ ಇದೀಗ 15 ರೂ.ಗಳಿಗೆ ಏರಿಕೆಯಾಗಿದೆ. ಇದು ಮಾಸ್ಕ್‍ಗಳನ್ನು ಪೂರೈಕೆ ಮಾಡುವ ಸಂಸ್ಥೆಗಳು ಏರಿಕೆ ಮಾಡಿದ ದರವಾಗಿದೆ. ಅದರೊಂದಿಗೆ “ಸ್ಯಾನಿಟರಿ” ವಸ್ತುಗಳ ಬೆಲೆ ಏರಿಕೆಯೊಂದಿಗೆ ಪೂರೈಕೆಯಲ್ಲಿ ಕೊರತೆಯೂ ಕಂಡು ಬಂದಿದೆ. ಜಿಲ್ಲೆಯಲ್ಲಿ ಕೊರೊನಾ ವೈರಸ್‍ನ ಶಂಕಿತ ಪ್ರಕರಣ ಕಂಡು ಬರದಿದ್ದರೂ ಮಾಸ್ಕ್‍ಗಳಿಗೆ ಭಾರಿ ಬೇಡಿಕೆ ಮತ್ತು ದರವೂ ಏರಿಕೆಯಾಗಿ ರುವುದು ಅಚ್ಚರಿ ಮೂಡಿಸುತ್ತಿದೆ.
ಇಷ್ಟು ದುಪ್ಪಟ್ಟು ಹಣಕ್ಕೆ ಮಾಸ್ಕ್‍ಗಳನ್ನು ಮಾರುವುದಾದರೂ ಹೇಗೆ ಎಂದು ಔಷಧಿ ಮಳಿಗೆಗಳ ವರ್ತಕರು ಅಳಲು ತೋಡಿ ಕೊಳ್ಳುತ್ತಿದಾರೆ. ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ವೈರಸ್ ಬಗ್ಗೆ ತೀವ್ರ ನಿಗಾ ವಹಿಸಿದ್ದು, ಎಲ್ಲೆಡೆ ಜಾಗೃತಿ ಮೂಡಿಸು ತ್ತಿದ್ದಾರೆ. ಆದರೆ ಜನರು ಏಕೆ ಕೊರೊನಾ ಸೋಂಕಿನ ಬಗ್ಗೆ ಇಷ್ಟೊಂದು ಭಯ ಭೀತಿಗೆ ಒಳಗಾಗುತ್ತಿದ್ದಾರೋ ತಿಳಿಯ ದಾಗಿದೆ ಎಂದು ಮೆಡಿಕಲ್ ಸ್ಟೋರ್‍ಗಳ ವರ್ತಕರು ಪ್ರಶ್ನಿಸುತ್ತಿದ್ದಾರೆ.