ಮೈಸೂರು,ಜು.12(ಎಸ್‍ಬಿಡಿ)- ಹಿಂದು ಳಿದ ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷ ಣಿಕ ಏಳಿಗೆಗೆ ಜೀವನ ಸವೆಸಿದ ದಿವಂಗತ ಕೆ.ಹೆಚ್.ರಾಮಯ್ಯನವರ ಸಾಧನೆಗಳು ಕಾಲಗರ್ಭದಲ್ಲಿ ಅಡಗಿ ಹೋಗಿವೆ ಎಂದು ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ವಿಷಾದಿಸಿದರು.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಕೆ.ಹೆಚ್.ರಾಮಯ್ಯನವರ ಸಮಾಧಿ ಬಳಿ ಅವರ 142ನೇ ಜಯಂತಿ ಯನ್ನು `ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್’ ವತಿಯಿಂದ ಆಚರಿಸಿದ ಸಂದರ್ಭದಲ್ಲಿ ಹಲವು ಗಣ್ಯರೊಂದಿಗೆ ರಾಮಯ್ಯ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಿಪಿಕೆ, ಅಕ್ಷರ ಬಲ್ಲವರು ತಮಗೆ ಬೇಕಾದವರ ವಿಚಾರ ವನ್ನು ದಾಖಲಿಸುವಾಗ ಹಲವು ಸಾಧಕರು ಅವಜ್ಞೆಗೆ ಗುರಿಯಾಗುತ್ತಾರೆ. ಅವರ ಜೀವನ ಸಾಧನೆ ಕಾಲಗರ್ಭದಲ್ಲಿ ಹುದುಗಿ ಹೋಗುತ್ತದೆ. ಹೀಗೆ ನಿರ್ಲಕ್ಷ್ಯಕ್ಕೆ ಗುರಿಯಾದ ಸಾಧಕರಲ್ಲಿ ಕೆ.ಹೆಚ್.ರಾಮಯ್ಯನವರೂ ಒಬ್ಬರಾಗಿದ್ದಾರೆ ಎಂದರು.
ದೊಡ್ಡಬಳ್ಳಾಪುರ ತಾಲೂಕಿನ ಕಲ್ಲು ದೇವರಹಳ್ಳಿ ಮೂಲದವರಾದ, ಬೆಂಗಳೂ ರಿನ ಬಳೇಪೇಟೆಯಲ್ಲಿರುವ ರಂಗನಾಥ ಸ್ವಾಮಿಗುಡಿ ಬೀದಿಯಲ್ಲಿ ವಾಸವಿದ್ದ ಹನುಮಾ ಮೇಸ್ತ್ರಿ ಹಾಗೂ ನಂಜಮ್ಮ ದಂಪತಿ ಪುತ್ರ ನಾಗಿ 1879ರ ಜುಲೈ 12ರಂದು ಜನಿಸಿದ ಕೆ.ಹೆಚ್.ರಾಮಯ್ಯನವರು, ಒಕ್ಕಲಿಗ ಜನಾಂಗದ ಅಪೂರ್ವ ಪುರುಷ ಸಿಂಹ ನಾಗಿ ಬೆಳೆದರು. ಆದರೆ ಅವರೆಂದೂ ತಮ್ಮ ಸಮುದಾಯದ ಏಳಿಗೆಗೆ ಮಾತ್ರ ದುಡಿ ದವರಲ್ಲ, ಹಿಂದುಳಿದ ಎಲ್ಲಾ ವರ್ಗದ ಶ್ರೇಯಸ್ಸಿಗೆ ಜೀವನ ಸವೆಸಿದವರು. ನ್ಯಾಯಾಂಗ ಪದವೀಧರರಾಗಿ ನಂತರ ಇಂಗ್ಲೆಂಡ್‍ನಲ್ಲಿ ನ್ಯಾಯಶಾಸ್ತ್ರದ ಉನ್ನತ ಪದವಿ ಪಡೆದ ರಾಮಯ್ಯನವರು, ವಿದ್ಯಾರ್ಥಿಯಾಗಿದ್ದಾಗಲೇ ಕರ್ನಾಟಕದ ಹಿಂದುಳಿದ ಜನಾಂಗಗಳ ಬಗ್ಗೆ, ಅವರ ಶಿಕ್ಷಣ, ಏಳಿಗೆ ಬಗ್ಗೆ ಚಿಂತಿಸಿದವರು. ಉನ್ನತ ಶಿಕ್ಷಣಾರ್ಹತೆ ಇದ್ದರೂ ಹಿಂದುಳಿದವರಿಗೆ ಸರ್ಕಾರದ ಉನ್ನತ ಹುದ್ದೆಗಳನ್ನು ನೀಡ ದ್ದರ ವಿರುದ್ಧ ಚಳುವಳಿ ರೂಪಿಸಿ, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಗಮನ ಸೆಳೆದಿದ್ದರು. ಪರಿಣಾಮ ಮಹಾರಾಜರು ಸಮಿತಿಯೊಂದನ್ನು ರಚಿಸಿ, ಆ ಮೂಲಕ ಉನ್ನತ ಹುದ್ದೆಗಳಲ್ಲೂ ಮೀಸ ಲಾತಿ ಪದ್ಧತಿ ಜಾರಿಗೊಳಿಸಿದರು. ಜೊತೆಗೆ ವಿದೇಶದಲ್ಲಿ ಅಧ್ಯಯನ ಮುಗಿಸಿ ಬಂದಿದ್ದ ಕೆ.ಹೆಚ್.ರಾಮಯ್ಯನವರಿಗೂ ಉನ್ನತ ಹುದ್ದೆ ನೀಡಿದರು ಎಂದು ಸಿಪಿಕೆ ಹೇಳಿದರು.
ಪಾಶ್ಚಿಮಾತ್ಯ ದೇಶಗಳು ಕೈಗಾರಿಕಾ ಕ್ರಾಂತಿ ಯೊಂದಿಗೆ ಪರಸ್ಪರ ಸಹಕಾರದಿಂದ ಉನ್ನತಿ ಸಾಧಿಸಲು ಮುಂದಾಗಿದ್ದ ಸಂದರ್ಭ ದಲ್ಲಿ ಮೈಸೂರು ರಾಜ್ಯದ ಅದರಲ್ಲೂ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗಾಗಿ ಇಲಾಖೆಯೊಂದನ್ನು ಸ್ಥಾಪಿಸಿ, ಅದರ ಮುಖ್ಯಸ್ಥರಾಗಿ ಕೆ.ಎಚ್.ರಾಮಯ್ಯನವರನ್ನು ನಿಯೋಜಿಸಲಾಯಿತು. ಗ್ರಾಮೀಣರ ಏಳಿ ಗೆಗೆ ಸದಾ ಚಿಂತಿಸುತ್ತಿದ್ದ ಅವರಿಗೆ ಆ ಹುದ್ದೆ ಮತ್ತಷ್ಟು ಶಕ್ತಿ ತುಂಬಿತ್ತು. ಎಲ್ಲಾ ಗ್ರಾಮ ಗಳಿಗೆ ಭೇಟಿ ನೀಡಿ, ಅಲ್ಲಿದ್ದ ಜನಾಂಗಗಳ ಬಗ್ಗೆ ಅಧ್ಯಯನ ನಡೆಸಿದರು. ಎಲ್ಲಾ ಜನಾಂಗ ದವರೂ ತಮ್ಮ ಏಳಿಗೆಗಾಗಿ ರಚಿಸಿಕೊಂಡ ಸಂಘ ಸಂಸ್ಥೆಗಳಿಗೆ ರಾಮಯ್ಯ ಅವರನ್ನೇ ಮಾರ್ಗದರ್ಶಕರನ್ನಾಗಿ ಮಾಡಿಕೊಂಡರು. ರಾಜ್ಯದಲ್ಲಿ ಸಹಕಾರಿ ಚಳವಳಿಯೇ ಸೃಷ್ಟಿ ಯಾಯಿತು. ಸಹಕಾರ ಇಲಾಖೆಯ ಮುಖ್ಯಾ ಧಿಕಾರದ ಜೊತೆಗೆ ಜನಾಂಗ ಅಭಿವೃದ್ಧಿಯ ಹೊಣೆಯನ್ನು ಕೆ.ಹೆಚ್.ರಾಮಯ್ಯ ಅವರಿಗೆ ವಹಿಸಲಾಯಿತು. ಇಂಗ್ಲೆಂಡ್ ಕೈಗಾರಿಕಾ ಕ್ರಾಂತಿ ಹಾಗೂ ಸಾಮಾಜಿಕ ಅಭಿವೃದ್ಧಿ ಬಗ್ಗೆ ಆಕರ್ಷಿತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅವರ ಸಹೋದರ ಕಂಠೀರವ ನರಸಿಂಹರಾಜ ಒಡೆಯರ್, ಮೈಸೂರಿನಲ್ಲೂ ಆ ರೀತಿಯ ಅಭಿವೃದ್ಧಿ ಬಯಸಿದರು. ಈ ನಿಟ್ಟಿನಲ್ಲಿ ಯೂರೋಪ್ ದೇಶಗಳಿಗೆ ಅಧ್ಯಯನ ಪ್ರವಾಸಕ್ಕಾಗಿ ತೆರ ಳಿದ್ದ ಯುವರಾಜ ಕಂಠೀರವ ನರಸಿಂಹ ರಾಜ ಒಡೆಯರ್ ಅವರ ಆಪ್ತ ಕಾರ್ಯ ದರ್ಶಿಯಾಗಿ ಕೆ.ಎಚ್.ರಾಮಯ್ಯ ಹೋಗಿ ದ್ದರು. ಪ್ರವಾಸ ಮುಗಿಸಿ ವಾಪಸ್ಸಾಗುವಷ್ಟ ರಲ್ಲಿ ಅವರಿಬ್ಬರೂ ಆತ್ಮೀಯ ಸ್ನೇಹಿತರಾಗಿ ದ್ದರು. ರಾಮಯ್ಯನವರು ಅಕಾಲಿಕವಾಗಿ ನಿಧನರಾದಾಗ ಕಂಠೀರವ ನರಸಿಂಹರಾಜ ಒಡೆಯರ್ ಅವರೇ ತಮ್ಮ ನಡುವಿನ ಬಾಂಧವ್ಯವನ್ನು ಸ್ಮರಿಸಿಕೊಂಡು, ಮಿತ್ರನ ಅಂತ್ಯಸಂಸ್ಕಾರ ನೆರವೇರಿಸಿ ಕೊಟ್ಟರು ಎಂದು ತಿಳಿಸಿದರು.
ರಾಮಯ್ಯನವರಿಗೆ ಸರ್ಕಾರಿ ಅಧಿಕಾರಿ ಎಂಬ ಯಾವುದೇ ನಿರ್ಬಂಧ ಇರಲಿಲ್ಲ. ಎಲ್ಲಾ ಗ್ರಾಮಗಳಿಗೆ ತೆರಳಿ ಹಿಂದುಳಿದ ಜನಾಂಗ ಹೇಗೆ ಅಭಿವೃದ್ಧಿ ಪಥದಲ್ಲಿ ಮುನ್ನಡೆ ಯಬೇಕೆಂಬ ಮಾರ್ಗದರ್ಶನ ನೀಡಿದರು. ಅತ್ಯಂತ ಕೆಳಸ್ತರದಲ್ಲಿದ್ದ ಜನರಿಗೆ ಶಿಕ್ಷಣ ಕೊಡಬೇಕೆಂಬ ಯೋಜನೆಯನ್ನು ಮಹಾ ರಾಜರ ಗಮನಕ್ಕೆ ತಂದು ಅವರಿಗಾಗಿ ಪ್ರತ್ಯೇಕ ಶಾಲೆಗೆ ಮನವಿ ಮಾಡಿದ್ದರು. ಪ್ರತಿಫಲವಾಗಿ ಮಳವಳ್ಳಿಯಲ್ಲಿ ನಿರ್ಮಾಣ ವಾದ ಶಾಲೆಯನ್ನು ಸ್ವತಃ ನಾಲ್ವಡಿ ಕೃಷ್ಣ ರಾಜ ಒಡೆಯರ್ ಉದ್ಘಾಟಿಸಿದರು. ರಾಮಯ್ಯನವರು ಆದಿ ದ್ರಾವಿಡ ಸಂಘ ಸ್ಥಾಪಿಸಿ, ದಲಿತರ ಸಾಮಾಜಿಕ, ಶೈಕ್ಷಣಿಕ ಏಳಿಗೆಗೆ ಪ್ರೋತ್ಸಾಹಿಸಿದರು. ಒಳ ಪಂಗಡ ಗಳ ಕಿತ್ತಾಟವನ್ನು ಶಮನಗೊಳಿಸಿ ಒಗ್ಗ ಟ್ಟಿನ ಮಹತ್ವ ತಿಳಿಸಿಕೊಟ್ಟರು. ಎಲ್ಲಾ ಮಕ್ಕ ಳಿಗೆ ಶಿಕ್ಷಣ, ಉಚಿತ ವಿದ್ಯಾರ್ಥಿ ನಿಲಯ ಗಳನ್ನು ಸ್ಥಾಪನೆಗೆ ಪ್ರೇರೇಪಿಸುತ್ತಿದ್ದರು. ಹೀಗೆ ಹಿಂದುಳಿದ ಜನಾಂಗಗಳ ಸಾಮಾ ಜಿಕ ಮತ್ತು ಶೈಕ್ಷಣಿಕ ಏಳಿಗೆಗೆ ಕೆ.ಹೆಚ್. ರಾಮಯ್ಯನವರ ಸೇವೆ ಸ್ಮರಣೀಯ. ಇವರ ಜೀವನ ಸಾಧನೆಗಳನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕೆಂದು ಸಿಪಿಕೆ ಆಶಯ ವ್ಯಕ್ತಪಡಿಸಿದರು.
ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸತೀಶ್ ಗೌಡ ಹಾಗೂ ಬಳಗದವರು ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇ ಗೌಡ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡ, ನಗರಪಾಲಿಕೆ ಆಡಳಿತ ಪಕ್ಷ(ಜೆಡಿಎಸ್)ದ ನಾಯಕಿ ಪ್ರೇಮ ಶಂಕರೇಗೌಡ, ಸೆನೆಟ್ ಸದಸ್ಯ ನಿಂಗ ರಾಜಗೌಡ, ಉದ್ಯಮಿ ಯಶಸ್ವಿನಿ ಸೋಮ ಶೇಖರ್, ಜಿಲ್ಲಾ ನೌಕರರು ಸಂಘದ ಅಧ್ಯಕ್ಷ ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷ ರಾಮು, ಟ್ರಸ್ಟಿನ ಉಪಾಧ್ಯಕ್ಷ ಕುಮಾರ್‍ಗೌಡ, ಒಕ್ಕಲಿಗರ ಸಂಘದ ನಿರ್ದೇಶಕರಾದ ರವಿ ರಾಜಕೀಯ, ಗಿರೀಶ್, ಚೇತನ್, ಬೆಟ್ಟೆಗೌಡ, ರಾಕೇಶ್, ಪತ್ರಕರ್ತ ಪ್ರಕಾಶ್‍ಬಾಬು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.