ಬಿಪಿಎಲ್, ಎಪಿಎಲ್ ಪಡಿತರ ಚೀಟಿಯ ಗರ್ಭಿಣಿ-ಬಾಣಂತಿಯರು ಮಾತೃವಂದನಾ ಸೌಲಭ್ಯಕ್ಕೆ ಅರ್ಹರು
ಮೈಸೂರು

ಬಿಪಿಎಲ್, ಎಪಿಎಲ್ ಪಡಿತರ ಚೀಟಿಯ ಗರ್ಭಿಣಿ-ಬಾಣಂತಿಯರು ಮಾತೃವಂದನಾ ಸೌಲಭ್ಯಕ್ಕೆ ಅರ್ಹರು

December 5, 2019

ಮೈಸೂರು: ಸರ್ಕಾರಿ ಹಾಗೂ ಅರೆ ಸರ್ಕಾರಿ ಹುದ್ದೆಯಲ್ಲಿರುವ ಮಹಿಳೆಯರ ಹೊರತಾಗಿ ಎಲ್ಲಾ ವರ್ಗದ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರೂ `ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ’ಯ ಸೌಲಭ್ಯ ಪಡೆಯಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮ ತಿಳಿಸಿದರು.

ಮೈಸೂರಿನ ಕುವೆಂಪುನಗರದ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಜಿಲ್ಲಾ ಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾ ಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಕುರಿತ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗರ್ಭಿಣಿ ಮತ್ತು ಬಾಣಂತಿಯರ ಅಪೌಷ್ಟಿ ಕತೆ, ರಕ್ತಹೀನತೆ ಹಾಗೂ ತಾಯಿ ಮತ್ತು ಮಗುವಿನ ಮರಣ ತಪ್ಪಿಸುವ ಸದುದ್ದೇಶ ದಿಂದ ಕೇಂದ್ರ ಸರ್ಕಾರ 2017ರಿಂದ ಈ ಯೋಜನೆ ಜಾರಿಗೊಳಿಸಿದೆ. ಇದರಡಿಯಲ್ಲಿ ಮೂರು ಕಂತುಗಳಲ್ಲಿ ಒಟ್ಟು 5 ಸಾವಿರ ರೂ.ಗಳ ಸಹಾಯಧನವನ್ನು ಸರ್ಕಾರ ನೀಡಲಿದ್ದು, ಇದರಿಂದ ಗರ್ಭಿಣಿ ಮತ್ತು ಬಾಣಂತಿಯರ ಆರೈಕೆಗೆ ಆರ್ಥಿಕ ಸಮಸ್ಯೆ ನಿವಾರಣೆ ಆಗಲಿದೆ.

ಸಮೀಪದ ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಂಡು ಸೌಲಭ್ಯ ಪಡೆದುಕೊಳ್ಳಬಹುದು. ಇಲ್ಲಿ ಉಚಿತವಾಗಿ ನೀಡುವ ಅರ್ಜಿಯನ್ನು ಭರ್ತಿ ಮಾಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿ ದರೆ ಸಾಕು. ತಾಯಿ ಕಾರ್ಡ್, ದಂಪತಿಯ ಆಧಾರ್ ಕಾರ್ಡ್ ಹಾಗೂ ಫಲಾನುಭವಿಯ ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸಿ ಸವಲತ್ತು ಪಡೆಯಬಹುದು ಎಂದರು.

ಗ್ರಾಮಾಂತರ ಪ್ರದೇಶದಲ್ಲಿ ಸದರಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ನಗರ ಪ್ರದೇಶದಲ್ಲಿ ಯೋಜನೆಯ ಸವಲತ್ತು ಪಡೆ ಯುವವರು ವಿರಳವಾಗಿದ್ದಾರೆ. ಈ ಹಿನ್ನೆಲೆ ಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಯೋಜನೆ ಕುರಿತು ಅರಿವು ಮೂಡಿಸಲು ಈ ಕಾರ್ಯಕ್ರಮ ಇಂದು ಆಯೋಜಿಸಿದ್ದು, 7 ದಿನಗಳು ವಿವಿಧ ರೀತಿಯಲ್ಲಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್.ವೆಂಕಟೇಶ್ ಮಾತ ನಾಡಿ, ಎಲ್ಲಾ ಗರ್ಭಿಣಿಯರು ತಪ್ಪದೇ ತಾಯಿ ಕಾರ್ಡ್ ಮಾಡಿಸಿಕೊಳ್ಳಬೇಕು. ಪ್ರತಿ ತಿಂಗಳು ಅಗತ್ಯ ಪರೀಕ್ಷೆಗಳನ್ನು ಮಾಡಿಸಿ ಕೊಂಡು ಮುಂದೆ ಯಾವುದೇ ಸಮಸ್ಯೆಗಳು ಎದು ರಾಗದಂತೆ ಎಚ್ಚರ ವಹಿಸಬೇಕು. ರಕ್ತಹೀ ನತೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಶೀಘ್ರದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿ ದರೆ ಯಾವುದೇ ಆತಂಕ ಇರುವುದಿಲ್ಲ ಎಂದು ಹೇಳಿದರು.

ಅಪೋಲೊ ಆಸ್ಪತ್ರೆ ಪ್ರಸೂತಿ ತಜ್ಞ ವೈದ್ಯೆ ಡಾ.ಎಲ್.ವಿ.ವನಿತಾ ಮಾತನಾಡಿ, ಗರ್ಭಿಣಿ ಹಾಗೂ ಬಾಣಂತಿಯರು ಅಪೌಷ್ಟಿ ಕತೆಯಿಂದ ಮುಕ್ತರಾಗಲು ಮಾಂಸ ಹಾಗೂ ಬಾದಾಮಿಯನ್ನೇ ಸೇವಿಸಬೇಕೆಂದಿಲ್ಲ. ಸೊಪ್ಪು ಹಾಗೂ ತರಕಾರಿ ಸೇವಿಸಿದರೆ ಸಾಕು. ಸೋಂಕು, ರಕ್ತಹೀನತೆ, ರಕ್ತಸ್ರಾವ ಹಾಗೂ ರಕ್ತದೊತ್ತಡ (ಬಿಪಿ) ಗರ್ಭಿಣಿ ಮತ್ತು ಬಾಣಂತಿಯರನ್ನು ಕಾಡುವ ಸಮಸ್ಯೆಗಳಾಗಿವೆ. ಇಂತಹ ಅನಾ ರೋಗ್ಯದಿಂದ ಮುಕ್ತರಾಗಲು ಎಚ್ಚರ ವಹಿ ಸುವುದು ಅತ್ಯಗತ್ಯ ಎಂದು ತಿಳಿಸಿದರು.

ಇದಕ್ಕೂ ಮುನ್ನ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮೊಹಮ್ಮದ್ ಶಿರಾಜ್ ಅಹಮ್ಮದ್, ಮೈಸೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ವಿ.ಪಾಟೀಲ್, ಅಪೋಲೊ ಆಸ್ಪತ್ರೆಯ ಪ್ರಸೂತಿ ತಜ್ಞ ವೈದ್ಯೆ ಡಾ.ಎಂ.ಡಿ.ರಶ್ಮಿ ಇತರರಿದ್ದರು.

Translate »