ಮಳೆಗಾಲದ ಅಧಿವೇಶನಕ್ಕೆ ಭರದ ಸಿದ್ಧತೆ: ಕೊರೊನಾ ಹಿನ್ನೆಲೆಯಲ್ಲಿ ವಿಶೇಷ ವ್ಯವಸ್ಥೆ
ಮೈಸೂರು

ಮಳೆಗಾಲದ ಅಧಿವೇಶನಕ್ಕೆ ಭರದ ಸಿದ್ಧತೆ: ಕೊರೊನಾ ಹಿನ್ನೆಲೆಯಲ್ಲಿ ವಿಶೇಷ ವ್ಯವಸ್ಥೆ

September 18, 2020

ಬೆಂಗಳೂರು, ಸೆ.17- ವಿಧಾನ ಮಂಡಲದ ಮಳೆಗಾಲದ ಅಧಿವೇಶನ ಸೋಮ ವಾರದಿಂದ ಆರಂಭವಾಗಲಿದ್ದು, ಕಾರ್ಯಾಂಗ ಸಕಲ ಸಿದ್ಧತೆ ಆರಂಭಿಸಿದೆ. ಕೊರೊನಾ ಹಾವಳಿಯಿಂದ ಈ ಅಧಿವೇಶನವನ್ನು ವಿಶೇಷ ಸುರಕ್ಷತಾ ಕ್ರಮಗಳೊಂದಿಗೆ ನಡೆಸಲು ಪೂರ್ವ ಸಿದ್ಧತೆಗಳು ಭರ ದಿಂದ ಸಾಗಿವೆ.

ವಿಧಾನಸೌಧದಲ್ಲೇ ಅಧಿವೇಶನ ನಡೆ ಸಲು ತೀರ್ಮಾನಿ ಸಿದ್ದು, ವಿಧಾನಸಭೆ ಹಾಗೂ ವಿಧಾನ ಪರಿಷತ್ತು ನಡೆಯುವ ಸಭಾಂಗಣಗಳ ಆಸನಗಳಿಗೆ ಗಾಜಿನ ಪರದೆ ಅಳವಡಿಸಿ ಸದಸ್ಯರನ್ನು ಪ್ರತ್ಯೇಕಿಸುವ ವ್ಯವಸ್ಥೆ ಮಾಡ ಲಾಗಿದೆ. ಕಾಲ-ಕಾಲಕ್ಕೆ ಸಭಾಂಗಣಗಳನ್ನು ಸ್ಯಾನಿಟೈಸ್ ಮಾಡಲು ಯೋಜನೆ ರೂಪಿಸಲಾಗಿದೆ. ಶಾಸಕರು, ವಿಧಾನ ಪರಿಷತ್ ಸದಸ್ಯರು, ಉನ್ನತಾಧಿಕಾರಿಗಳು, ಸಚಿವಾಲಯದ ಅಧಿಕಾರಿ/ಸಿಬ್ಬಂದಿ ಹಾಗೂ ಸಚಿವರ ಆಪ್ತ ಸಹಾಯಕರು, ಮಾಧ್ಯಮ ದವರು ಹಾಗೂ ಅಧಿವೇಶನಕ್ಕೆ ಬಳಸಿಕೊಳ್ಳುವ ಸಿಬ್ಬಂದಿಗಳಿಗೆ ಕೊರೊನಾ ಪರೀಕ್ಷೆ ಯನ್ನು ಕಡ್ಡಾಯಗೊಳಿಸಿದ್ದು, ಶುಕ್ರವಾರದಿಂದ ಈ ಪರೀಕ್ಷೆ ನಡೆಸಲಾಗುತ್ತಿದೆ.

ಸ್ಪೀಕರ್ ಸ್ಥಳ ಪರಿಶೀಲನೆ: ಪತ್ರಕರ್ತರಿಗೆ ಎರಡನೇ ಮಹಡಿಯಲ್ಲಿ ಆಸನಗಳನ್ನು ಅಳವಡಿಸಿದ್ದು, ಇಂಟರ್‍ನೆಟ್, ದೂರವಾಣಿ ಮತ್ತಿತರ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮೊದಲ ಮಹಡಿಯಲ್ಲಿ ಹೊರಗಡೆ ಕ್ಯಾಂಟೀನ್ ವ್ಯವಸ್ಥೆ ಮಾಡಲಾಗುತ್ತಿದೆ. ಈ ಎಲ್ಲ ಸಿದ್ಧತೆಗಳನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಪರಿಶೀಲಿಸಲಿದ್ದಾರೆ.

ನಾಲ್ವರು ಸಚಿವರು ಗೈರು: ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಾಲ್ವರು ಸಚಿವರು ಹಾಗೂ ಶಾಸಕರು ಅಧಿವೇಶನದಿಂದ ದೂರ ಉಳಿಯುವ ಸಾಧ್ಯತೆಗಳಿವೆ. ಸಚಿವರಾದ ಬಸವರಾಜ ಬೊಮ್ಮಾಯಿ, ಕೆ.ಗೋಪಾಲಯ್ಯ, ಬೈರತಿ ಬಸವರಾಜ, ಶಶಿಕಲಾ ಜೊಲ್ಲೆ ಅವರಿಗೆ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಕಾಲ ಅಧಿವೇಶನದಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ.

ಚೇತರಿಸಿಕೊಂಡವರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರಾದ ಶ್ರೀರಾಮುಲು, ಡಾ.ಸುಧಾಕರ್, ಸಿ.ಟಿ.ರವಿ, ಆನಂದ್ ಸಿಂಗ್, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ, ಕೆ.ಎಸ್.ಈಶ್ವರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಶಾಸಕರು ಈಗಾಗಲೇ ಚೇತರಿಸಿಕೊಂಡಿದ್ದಾರೆ.

Translate »