ಇ-ಸೇವೆಗೆ ಮೈಸೂರು ವಿವಿ, ಮುಕ್ತ ವಿವಿಗಳಲ್ಲಿ ಸಿದ್ಧತೆ
ಮೈಸೂರು

ಇ-ಸೇವೆಗೆ ಮೈಸೂರು ವಿವಿ, ಮುಕ್ತ ವಿವಿಗಳಲ್ಲಿ ಸಿದ್ಧತೆ

July 2, 2020

ಮೈಸೂರು, ಜು. 1(ಆರ್‍ಕೆ)- ಸರ್ಕಾರದ ತೀರ್ಮಾನದಂತೆ ಜುಲೈ 15ರಿಂದ ಆನ್‍ಲೈನ್ ಮೂಲಕವೇ ವ್ಯವಹರಿಸಲು ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯಗಳಲ್ಲಿ ಇ-ಸೇವೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಈಗಾಗಲೇ ಈ ಎರಡೂ ವಿವಿಗಳಲ್ಲಿ ಸಾಫ್ಟ್‍ವೇರ್ ಮೂಲಕ ಪೇಪರ್ ರಹಿತ ಆಡಳಿತಕ್ಕೆ ತಯಾರಿ ನಡೆಸಲಾಗಿತ್ತು. ಇದೀಗ ಸರ್ಕಾರದೊಂದಿಗಿನ ಎಲ್ಲಾ ವ್ಯವಹಾರವನ್ನೂ ಆನ್‍ಲೈನ್ ನಲ್ಲೇ ನಡೆಸಿ ಕುಲಪತಿ, ರಿಜಿಸ್ಟ್ರಾರ್ ಆಗಲೀ ಬೆಂಗಳೂರಿಗೆ ಹೋಗದೇ ವಿಶ್ವವಿದ್ಯಾನಿಲಯದ ಕಚೇರಿಯಿಂದಲೇ ಪತ್ರ ವ್ಯವಹಾರ ನಡೆಸಲು ತಯಾರಿ ನಡೆಸುತ್ತಿವೆ.

ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್‍ಕುಮಾರ್, ನಾವು ಈಗಾಗಲೇ ಶೇ.25ರಷ್ಟು ಆನ್‍ಲೈನ್ ಪದ್ಧತಿಯನ್ನು ಅನುಷ್ಠಾನಗೊಳಿಸಿದ್ದೆವು. ಇದೀಗ ಉನ್ನತ ಶಿಕ್ಷಣ ಸಚಿವರು ನಿರ್ದೇಶನ ನೀಡಿರು ವುದರಿಂದ ಎಲ್ಲಾ ಆಡಳಿತಾತ್ಮಕ ಪತ್ರ ವ್ಯವಹಾರವನ್ನು ಸಂಪೂರ್ಣ ವಾಗಿ ಆನ್‍ಲೈನ್ ಮೂಲಕ ನಡೆಸಲು ಇ-ಸೇವಾ ಸಿಸ್ಟಂ ಅನ್ನು ಅಳವಡಿಸುತ್ತಿದ್ದೇವೆ ಎಂದರು.

ಅದಕ್ಕಾಗಿ ಬೋಧಕೇತರ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ತರಬೇತಿ ನೀಡಿ ಸಜ್ಜುಗೊಳಿಸುತ್ತಿದ್ದೇವೆ. ಜುಲೈ 15ರಿಂದ ಇಲಾಖೆಗೆ ಸಂಬಂಧಪಟ್ಟ ವ್ಯವಹಾರವನ್ನು ಕಚೇರಿಯಿಂದಲೇ ಇ-ಸೇವಾ ಮೂಲಕ ನಡೆಸುತ್ತೇವೆ ಎಂದು ಕುಲಪತಿಗಳು ತಿಳಿಸಿದರು.

ಅದೇ ರೀತಿ ಮಾನಸಗಂಗೋತ್ರಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆಡಳಿತ ಕಚೇರಿಯಲ್ಲಿ ಆನ್‍ಲೈನ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಕಂಪ್ಯೂಟರ್ ಜ್ಞಾನವಿರುವ ಸಿಬ್ಬಂದಿಯನ್ನು ಕಚೇರಿಗೆ ನಿಯೋಜಿಸಿ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸುವ ಸಂಬಂಧ ತರಬೇತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Translate »