ಆ.23ರಿಂದ ಶಾಲೆಗಳ ಆರಂಭಕ್ಕೆ ಸಿದ್ಧತೆ
ಮಂಡ್ಯ

ಆ.23ರಿಂದ ಶಾಲೆಗಳ ಆರಂಭಕ್ಕೆ ಸಿದ್ಧತೆ

August 21, 2021

ಮಂಡ್ಯ, ಆ.20(ಮೋಹನ್‍ರಾಜ್)- 8ರಿಂದ ಪ್ರಥಮ ಪಿಯುಸಿ ವರೆಗೆ ಎಲ್ಲಾ ತರಗತಿಗಳು ಆ.23ರಿಂದ ಆರಂಭವಾಗಲಿದ್ದು, ಶಾಲೆ ಆರಂಭಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿ ಗಳ ಹಿತದೃಷ್ಟಿಯಿಂದ ಇಡೀ ಶಿಕ್ಷಣ ಇಲಾಖೆ ಶಕ್ತಿ ಮೀರಿ ಪ್ರಾಮಾಣಿಕವಾಗಿ ದುಡಿಯ ಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಮೈಸೂರಿಗೆ ತೆರಳುವ ಮಾರ್ಗಮಧ್ಯೆ ನಗರದ ಪ್ರವಾಸಿ ಮಂದಿ ರದ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಜೊತೆಯಲ್ಲಿ ಬಾಳಬೇಕಾದ ಅನಿವಾರ್ಯತೆ ನಮಗೆ ಒದಗಿ ಬಂದಿದೆ. ಆದರೆ ಕೋವಿಡ್ ಜೊತೆ ಎಲ್ಲಾ ಚಟುವಟಿಕೆ ಗಳು ಪ್ರಾರಂಭವಾಗಿದೆ. ಆದರೆ ಶೈಕ್ಷಣಿಕ ಚಟುವಟಿಕೆ ಮಾತ್ರ ಸ್ಥಗಿತ ಗೊಂಡಿದೆ. ಅದನ್ನು 23ರಿಂದ ಆರಂಭ ಮಾಡುತ್ತೇವೆ ಎಂದರು.

ಎಸ್‍ಓಪಿಎ ಅನ್ನು ಆರಂಭ ಮಾಡಲಿದ್ದು, ಅದರ ಅನುಸಾರ ವಾಗಿ ಶಾಲೆಗಳನ್ನು ಆರಂಭ ಮಾಡಬೇಕೆಂಬುದು ನಮ್ಮ ಉದ್ದೇಶವಾಗಿದೆ. ಈಗಾಗಲೇ ಪಿಯುಸಿ ಡಿಡಿಪಿಐ ಜೊತೆಗೆ ಮಾತನಾಡಿದ್ದು, ಶಾಲಾ ಆರಂಭಕ್ಕೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಕ್ಕಳು ಸಹ ಶಾಲೆಗೆ ಬರಲು ಉತ್ಸುಕರಾಗಿದ್ದು, ಸರ್ಕಾರ ಸಹ ಶಾಲೆಗಳ ಆರಂಭಕ್ಕೆ ಸಿದ್ಧತೆ ಕೈಗೊಂಡಿದೆ. ಒಂದೇ ಬಾರಿಗೆ ಎಲ್ಲಾ ತರಗತಿಗಳನ್ನು ಆರಂಭ ಮಾಡದೇ ಹಂತ ಹಂತವಾಗಿ ಆರಂಭಿಸಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.

ಪಠ್ಯ ಪುಸ್ತಕಗಳನ್ನು ಶೇ.50ರಷ್ಟು ರಾಜ್ಯಾದ್ಯಂತ ಕಳುಹಿಸಿದ್ದೇವೆ. ಕೋವಿಡ್ ಕಾರಣದಿಂದ ಮುದ್ರಣ ಶಾಖೆಗಳು ಆರಂಭವಾಗದೇ ಪುಸ್ತಕ ಮುದ್ರಣ ತಡವಾಗಿದೆ. ಈಗಾಗಲೇ ಶೇ.50ರಷ್ಟು ಪುಸ್ತಕಗಳ ಮುದ್ರಣವಾಗಿದೆ. ಮುಂದಿನ ಸೆಪ್ಟೆಂಬರ್ 15ರೊಳಗೆ ಪೂರ್ಣ ಪ್ರಮಾಣದಲ್ಲಿ ಪುಸ್ತಕಗಳನ್ನು ಮುದ್ರಣಗೊಳಿಸುತ್ತೇವೆ ಎಂದರು.

ನಮ್ಮ ಮೊದಲ ಆದ್ಯತೆ ಶಾಲೆ ಆರಂಭಿಸುವುದು. ದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶಾದ್ಯಂತ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುತ್ತೇವೆ ಎಂದು ತಿಳಿಸಿದರು.

Translate »