ಜೂ.8ರಿಂದ ಹೋಟೆಲ್, ದೇವಸ್ಥಾನ ತೆರೆಯಲು ಸಿದ್ಧತೆ
ಮೈಸೂರು

ಜೂ.8ರಿಂದ ಹೋಟೆಲ್, ದೇವಸ್ಥಾನ ತೆರೆಯಲು ಸಿದ್ಧತೆ

June 4, 2020

ಮೈಸೂರು, ಜೂ.3(ಆರ್‍ಕೆ)- ಕೋವಿಡ್-19 ಲಾಕ್ ಡೌನ್‍ನಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ಬಂದ್ ಆಗಿದ್ದ ಮೈಸೂರಿನ ಹೋಟೆಲ್, ರೆಸ್ಟೋರೆಂಟ್, ಲಾಡ್ಜ್‍ಗಳು ಹಾಗೂ ದೇವಸ್ಥಾನಗಳನ್ನು ಜೂನ್ 8ರಿಂದ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರದ ನಿರ್ದೇಶನ ಮತ್ತು ಮಾರ್ಗಸೂಚಿ ಯಂತೆ ರಾಜ್ಯ ಸರ್ಕಾರವು ಜೂ.8ರಿಂದ ದೇವಸ್ಥಾನ ಮತ್ತು ಹೋಟೆಲುಗಳನ್ನು ತೆರೆಯಲು ಅವಕಾಶ ನೀಡ ಲಾಗುವುದು ಎಂದು ಪ್ರಕಟಿಸಿದ್ದರಿಂದ ಹೋಟೆಲ್ ಮಾಲೀಕರು, ಮುಜರಾಯಿ ಇಲಾಖೆ ಅಧಿಕಾರಿಗಳು, ಖಾಸಗಿ ಧಾರ್ಮಿಕ ಟ್ರಸ್ಟ್‍ಗಳು ತಯಾರಿ ಆರಂಭಿಸಿವೆ.

ದೇವಾಲಯಗಳು: ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಅರಮನೆ ಆವರಣದ ಮುಜರಾಯಿ ದೇವಸ್ಥಾನಗಳು, ಉತ್ತನ ಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ, ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನ ಸೇರಿದಂತೆ ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಮುಜರಾಯಿ ದೇವಾಲಯ ಗಳನ್ನು ಜೂನ್ 8ರಿಂದ ತೆರೆಯಲು ಕಳೆದ ಮೂರು ದಿನಗಳಿಂದಲೇ ಸಿದ್ಧತೆ ಆರಂಭಿಸಲಾಗಿದೆ.

ಈಗಾಗಲೇ ಪ್ರಧಾನ ಅರ್ಚಕರು, ನೌಕರರು ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆ ಸಿದ್ದು, ಪೂಜಾ ವಿಧಿ-ವಿಧಾನ, ಭಕ್ತಾದಿಗಳಿಗೆ ದರ್ಶ ನದ ವ್ಯವಸ್ಥೆ, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಸಲಹೆ-ಮಾರ್ಗದರ್ಶನ ನೀಡಲಾಗಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಸ್.ಯತಿರಾಜ್ ಸಂಪತ್‍ಕುಮಾರ್ ಅವರು ತಿಳಿಸಿದ್ದಾರೆ.

ಜೂನ್ 8ರಿಂದ ಚಾಮುಂಡೇಶ್ವರಿ ದೇವಾಲಯ ಕಾರ್ಯಾರಂಭವಾಗುವುದರಿಂದ ಬರುವ ಭಕ್ತಾದಿ ಗಳು ಮಾಸ್ಕ್ ಧರಿಸಬೇಕೆಂಬ ನಿಯಮವನ್ನು ಕಡ್ಡಾಯ ಗೊಳಿಸಲಾಗುವುದು ಎಂದು ತಿಳಿಸಿದರು.

ದರ್ಶನಕ್ಕೆ ಭಕ್ತರು ಸಾಲಾಗಿ ನಿಲ್ಲುವ ವೇಳೆ ಸಾಮಾ ಜಿಕ ಅಂತರ ಕಾಯ್ದುಕೊಳ್ಳುವಂತೆ ಬಾಕ್ಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರವೇಶದ್ವಾರದಲ್ಲಿ ಭಕ್ತರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ದೇಹದ ಉಷ್ಣಾಂಶ ಮಾಪನ ಮಾಡಲಾಗುವುದು ಎಂದು ಯತಿರಾಜ್ ತಿಳಿಸಿದರು.

ದೇವಸ್ಥಾನದ ಪ್ರಾಂಗಣ, ಆವರಣದಲ್ಲಿ ಹೆಚ್ಚು ಜನರು ಗುಂಪಾಗಿ ನಿಲ್ಲದಂತೆ ಭದ್ರತಾ ಸಿಬ್ಬಂದಿ ಎಚ್ಚರ ವಹಿ ಸುವರು. ಪ್ರಸಾದವನ್ನು ದೇವಾಲಯ ಪ್ರಾಂಗಣದ ಒಂದು ಕೌಂಟರ್‍ನಲ್ಲಿ ಮಾತ್ರ ಮಾರಾಟ ಮಾಡಲಾಗುವುದು, ದಾಸೋಹ ಸೇವೆ ಆರಂಭಿಸಲು ಸರ್ಕಾರದ ಮಾರ್ಗ ಸೂಚಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ನುಡಿದರು.

ಒಟ್ಟಿನಲ್ಲಿ ಕೊರೊನಾ ವೈರಸ್ ಸೋಂಕು ಹರಡ ದಂತೆ ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಾವು ದೇವಸ್ಥಾನದಲ್ಲಿ ಸಿದ್ಧತೆ ಮಾಡಿ ಕೊಂಡಿರುವುದಾಗಿ ಅವರು ತಿಳಿಸಿದರು.

ಹೋಟೆಲ್‍ಗಳು: ಜೂನ್ 8ರಂದು ಹೋಟೆಲ್, ರೆಸ್ಟೋರೆಂಟ್, ಲಾಡ್ಜ್‍ಗಳನ್ನು ತೆರೆಯಬಹುದೆಂದು ಸರ್ಕಾರ ಹೇಳಿರುವ ಕಾರಣ, ಮೈಸೂರಿನಲ್ಲಿ ಹೋಟೆಲ್ ಉದ್ಯಮ ಪುನಾರಂಭಿಸಲು ಮಾಲೀಕರು ಉತ್ಸುಕತೆಯಿಂದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಮೈಸೂರಿನ ಎಲ್ಲಾ ಐಷಾರಾಮಿ ಹೋಟೆಲ್‍ಗಳಲ್ಲಿ ಕೊಠಡಿ, ಲಾಂಜ್, ರಿಸೆಪ್ಷನ್ ಕೌಂಟರ್, ರೆಸ್ಟೋರೆಂಟ್ ಗಳನ್ನು ಸ್ವಚ್ಛಗೊಳಿಸಿ, ಫ್ಯೂಮಿಗೇಷನ್ ಮತ್ತು ಸ್ಯಾನಿ ಟೇಷನ್ ಮಾಡಲಾಗುತ್ತಿದೆ. ಬರುವ ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವುದು, ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಹೋಟೆಲ್ ಮಾಲೀಕರು ಸಿದ್ಧತೆ ಮಾಡಿಕೊಳ್ಳುತ್ತಿ ದ್ದಾರೆ. ಆದರೆ ಇನ್ನಷ್ಟೇ ರಾಜ್ಯ ಸರ್ಕಾರದ ಮಾರ್ಗ ಸೂಚಿ ಹೊರ ಬೀಳಬೇಕಿದೆ.

ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿ ರುವುದರಿಂದ ಗ್ರಾಹಕರು ಬರುತ್ತಾರೋ ಇಲ್ಲವೋ ಅಥವಾ ಸರ್ಕಾರ ಅನುಮತಿ ನೀಡುತ್ತದೆಯೋ ಇಲ್ಲವೋ, ಕೊಟ್ಟರೆ ನಾನಾ ಷರತ್ತುಗಳನ್ನು ವಿಧಿಸಿದರೆ ಹೋಟೆಲ್ ಗಳನ್ನು ನಡೆಸಲು ಸಾಧ್ಯವಾಗದಿರಬಹುದು ಎಂದೆಲ್ಲಾ ಗೊಂದಲ ಇರುವುದರಿಂದ ಕೆಲ ಹೋಟೆಲ್ ಮಾಲೀ ಕರು ಕಾದು ನೋಡಲು ನಿರ್ಧರಿಸಿದ್ದಾರೆ.

ಅಂತಾರಾಷ್ಟ್ರೀಯ ಮತ್ತು ಹೊರ ರಾಜ್ಯದ ಪ್ರವಾಸಿ ಗರು ಭೇಟಿ ನೀಡುತ್ತಿಲ್ಲವಾದ್ದರಿಂದ ಹೋಟೆಲ್‍ಗಳನ್ನು ತೆರೆದರೂ ಗ್ರಾಹಕರೇ ಬಾರದಿದ್ದರೆ ಮತ್ತೆ ನಷ್ಟಕ್ಕೊಳ ಗಾಗಬೇಕಾಗುತ್ತದೆ ಎಂಬ ಆತಂಕದಲ್ಲಿರುವ ಕೆಲ ಐಷಾರಾಮಿ ಹೋಟೆಲ್ ಮಾಲೀಕರು, ಜೂನ್ 8ರಂದು ತೆರೆಯಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಸೆಮಿ ನಾರ್ ಹಾಲ್, ವೆಡ್ಡಿಂಗ್‍ಹಾಲ್‍ಗಳನ್ನು ಹೊಂದಿರುವ ಕೆಲ ಹೋಟೆಲುಗಳಲ್ಲಿ ಕಾರ್ಯಕ್ರಮ ಮಾಡಲು ಕೇವಲ 50 ಮಂದಿ ಆಹ್ವಾನಿತರು ಮಾತ್ರ ಪಾಲ್ಗೊಳ್ಳಬೇಕೆಂಬ ನಿಯಮವಿರುವುದರಿಂದ ಊಟ-ತಿಂಡಿ ವ್ಯವಸ್ಥೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ವಾಗಿರುವುದು ತಲೆನೋವು ತಂದೊಡ್ಡಿದೆ.

Translate »