ಮೈಸೂರು, ಅ. 12-ಮೈಸೂರು ಯೋಗ ಅಸೋಸಿಯೇಷನ್ ಹಾಗೂ ಹಿಮಾಲಯ ಫೌಂಡೇಷನ್ ವತಿಯಿಂದ ಮೈಸೂರು ಯೋಗ ಅಸೋಸಿಯೇಷನ್ ಕೇಂದ್ರ ಕಚೇರಿ ಸಭಾಂಗಣದಲ್ಲಿ ಮಲ್ಲಾಡಿಹಳ್ಳಿ ಮಹಾಯೋಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಸಂಸ್ಮರಣೋ ತ್ಸವ ಅಂಗವಾಗಿ ಆಯುರ್ವೇದ ತಜ್ಞರು ಹಾಗೂ ಸಮರ ಕಲೆ ನಿಪುಣರಾದ ಮನು ಬಿ.ಮೆನನ್ ಅವರಿಗೆ ಮಲ್ಲಾಡಿಹಳ್ಳಿ ಮಹಾಯೋಗಿ ಶ್ರೀ ರಾಘವೇಂದ್ರ ಸ್ವಾಮೀಜಿ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಸಮಾಜ ಸೇವಕ ಡಾ. ಕೆ.ರಘುರಾಂ ವಾಜಪೇಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬರಡು ಭೂಮಿಯಾಗಿದ್ದ ಮಲ್ಲಾಡಿಹಳ್ಳಿಯನ್ನು ಯೋಗದ ಕಾಶಿಯನ್ನಾಗಿಸಿದವರು ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ. ಭಿಕ್ಷಾಟನೆಯಿಂದಲೇ ಮಲ್ಲಾಡಿಹಳ್ಳಿಯನ್ನು ಸುಗ್ರಾಮವಾಗಿಸಿ, ನೂರು ಆರು ವರ್ಷ ಬಾಳಿ ಬದುಕಿದವರು ಎಂದು ವರ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಸೇವೆ ಯನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡವರು ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ, ಯೋಗ ಶಿಕ್ಷಣ ಕ್ಷೇತ್ರಗಳಲ್ಲಿ ಅವರು ಸಾಧಿಸಿದ ಸಾಧನೆ ಅದ್ವಿತೀಯ ಎಂದು ಹೇಳಿದರು. ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಮೈಸೂರು ಯೋಗ ಅಸೋಸಿ ಯೇಷನ್ ಉಪಾಧ್ಯಕ್ಷ ಯೋಗ ಪ್ರಕಾಶ್, ಉದ್ಯಮಿ ಎಂ.ಎನ್.ದೊರೆಸ್ವಾಮಿ, ಹಿಮಾಲಯ ಫೌಂಡೇಷನ್ ಅಧ್ಯಕ್ಷ ಎನ್.ಅನಂತು, ಸಂಚಾಲಕ ಎಂ.ವಿ.ನಾಗೇಂದ್ರಬಾಬು, ಯುವ ಮುಖಂಡ ವಿಕ್ರಂ ಅಯ್ಯಂಗಾರ್ ಹಾಗೂ ಇನ್ನಿತರರು ಹಾಜರಿದ್ದರು.