ಪಂಡಿತ್ ದೀನದಯಾಳ್ ಉಪಾಧ್ಯಾಯರ ಚಿಂತನೆಯಂತೆ  ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನಾಂದಿ
ಮೈಸೂರು

ಪಂಡಿತ್ ದೀನದಯಾಳ್ ಉಪಾಧ್ಯಾಯರ ಚಿಂತನೆಯಂತೆ ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನಾಂದಿ

September 26, 2021

ಮೈಸೂರು,ಸೆ.25(ಪಿಎಂ)-ಪಂಡಿತ್ ದೀನ ದಯಾಳ್ ಉಪಾಧ್ಯಾಯರು ರಾಷ್ಟ್ರದ ಅಭಿವೃದ್ಧಿ ಮತ್ತು ದೇಶದ ಕಟ್ಟಕಡೆಯ ವ್ಯಕ್ತಿ ಶ್ರೇಯೋಭಿವೃದ್ಧಿ ಬಗ್ಗೆ ಸ್ಪಷ್ಟ ಚಿಂತನೆ ಹೊಂದಿದ್ದರು. ಅವರ ಚಿಂತನೆಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ಸಾಕಾರಗೊಳಿಸುವ ಮೂಲಕ ದೇಶದ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹೇಳಿದರು.

ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮೋರ್ಚಾ ಮೈಸೂರು ನಗರ ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ 105ನೇ ಜನ್ಮದಿನಾಚರಣೆ ಮತ್ತು ಮೇಯರ್ ಸುನಂದಾ ಪಾಲನೇತ್ರ ಅವರಿಗೆ ಏರ್ಪಡಿಸಿದ್ದ ಅಭಿ ನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದೀನದಯಾಳರ 105ನೇ ಜನ್ಮದಿನವಾದ ಇಂದು ಇಡೀ ಬಿಜೆಪಿ ಪಾಲಿಗೆ ಮಹತ್ವದ ದಿನ. ನಮ್ಮ ಪಕ್ಷಕ್ಕೆ ಅವರು ಭದ್ರ ಬುನಾದಿ ಹಾಕಿದವರು. ಅಪ್ರತಿಮ ರಾಷ್ಟ್ರಭಕ್ತರಾಗಿದ್ದ ಅವರು ದೇಶದ ಪ್ರಗತಿಯ ಬಗ್ಗೆ ಸ್ಪಷ್ಟ ಚಿಂತನೆ ಹೊಂದಿದ್ದರು. ಕಟ್ಟಕಡೆಯ ವ್ಯಕ್ತಿಯ ಶ್ರೇಯೋಭಿವೃದ್ಧಿಯಿಂದ ಮಾತ್ರವೇ ದೇಶ ಸದೃಢ ಗೊಳ್ಳಲು ಸಾಧ್ಯ ಎಂಬುದನ್ನು ಬಲವಾಗಿ ನಂಬಿದ್ದರು. ಅವರ ಚಿಂತನೆಯನ್ನು ಅನುಷ್ಠಾನಗೊಳಿಸುವ ಮೂಲಕ ಪ್ರಧಾನಿ ಮೋದಿಯವರು ನಮ್ಮ ರಾಷ್ಟ್ರವನ್ನು ಪ್ರಗತಿ ಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.

ಅತ್ಯಂತ ಮೇಧಾವಿಯಾಗಿದ್ದ ದೀನದಯಾಳರು ಅದ್ಭುತ ವಾಗ್ಮಿಯೂ ಆಗಿದ್ದರು. ಯಾವುದೇ ಕೆಲಸ ಮಾಡಿದರೂ ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದರು. ಅವರು ತಮ್ಮ `ರಾಷ್ಟ್ರಧರ್ಮ’ ಪತ್ರಿಕೆಯ ಬಹುತೇಕ ಎಲ್ಲಾ ಜವಾಬ್ದಾರಿಯನ್ನು ಒಬ್ಬರೇ ನಿರ್ವಹಿಸು ತ್ತಿದ್ದರು. ದೀನದಯಾಳರು ಭವಿಷ್ಯದಲ್ಲಿ ರಾಷ್ಟ್ರದ ಅದ್ವಿತೀಯ ನಾಯಕರಾಗುತ್ತಾರೆ ಎಂದು ಅವರ ತಂದೆ ಜಾತಕ ಬರೆದಿಟ್ಟಿದ್ದರಂತೆ. ಅದರಂತೆಯೇ ಅವರು ರಾಷ್ಟ್ರ ನಾಯಕರಾದರು. ದೀನದಯಾಳ ಅವರು ಬಾಲಕನಾಗಿದ್ದಾಗಲೇ ತಮ್ಮ ಮನೆಗೆ ಕಳ್ಳತನಕ್ಕೆ ಬಂದಿದ್ದ ಕಳ್ಳರ ಮನ ಪರಿವರ್ತನೆ ಮಾಡಿದ್ದರು. ಅಂತಹ ಶಕ್ತಿ ಅವರಲ್ಲಿತ್ತು ಎಂದು ಸ್ಮರಿಸಿದರು.

ಜನ ಮೆಚ್ಚುವ ಕೆಲಸ ಮಾಡಿ: ಇದೇ ವೇಳೆ ಸನ್ಮಾನ ಸ್ವೀಕರಿಸಿದ ಮೇಯರ್ ಸುನಂದಾ ಪಾಲನೇತ್ರ ಅವ ರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಜು, ನಿಮ್ಮ ಹೆಸರನ್ನು ನೀವು ಮಾಡಿದ ಕೆಲಸಗಳು ಹೇಳಬೇಕು. ಆ ರೀತಿಯಲ್ಲಿ ತಮ್ಮ ಮೇಯರ್ ಅವಧಿಯಲ್ಲಿ ಮೈಸೂರು ಜನತೆ ಮೆಚ್ಚುವಂತಹ ಕೆಲಸಗಳನ್ನು ಮಾಡಿ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಜನ ಮೆಚ್ಚುವ ಕನಿಷ್ಠ 10 ಕೆಲಸಗಳನ್ನು ನಿಮ್ಮ ಅವಧಿಯಲ್ಲಿ ಮಾಡಬೇಕೆಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಎಲ್. ನಾಗೇಂದ್ರ, ದೀನದಯಾಳ್ ಉಪಾಧ್ಯಾಯರು ಬಿಜೆಪಿ ಕಟ್ಟಿ ಬೆಳೆಸಿದ್ದರಿಂದ ಇಂದು ಅಟಲ್ ಬಿಹಾರಿ ವಾಜ ಪೇಯಿ, ಮೋದಿಯವರು ಪ್ರಧಾನಿಗಳಾಗಿ ದೇಶದ ಪ್ರಗತಿಗೆ ಕೆಲಸ ಮಾಡುವಂತಾಯಿತು. ದೀನದಯಾ ಳರ ವಿಚಾರಧಾರೆಗಳನ್ನು ನಾವು ತಿಳಿದುಕೊಂಡು ಅವರ ಚಿಂತನೆ ಅಳವಡಿಸಿಕೊಳ್ಳಬೇಕು ಎಂದರು.

ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮ ನಂದೀಶ್, ಪಾಲಿಕೆ ಸದಸ್ಯರಾದ ಸಿ.ವೇದಾವತಿ, ಎಂ.ಲಕ್ಷ್ಮೀ, ಅರಗು ಮತ್ತು ಬಣ್ಣ ಕಾರ್ಖಾನೆ ಅಧ್ಯಕ್ಷ ಫಣೀಶ್, ಪಕ್ಷದ ಮುಖಂಡರಾದ ಗೋಪಾಲ್‍ರಾಜ್‍ಅರಸ್, ಅನಿಲ್‍ಥಾಮಸ್ ಮತ್ತಿತರರು ಹಾಜರಿದ್ದರು.

Translate »