ಸ್ವಚ್ಛನಗರಿಗೆ ಶ್ರಮಿಸುವ ಪೌರಕಾರ್ಮಿಕರ ಬಡಾವಣೆಯಲ್ಲಿ ಸಮಸ್ಯೆಗಳ ಸರಮಾಲೆ!
ಮೈಸೂರು

ಸ್ವಚ್ಛನಗರಿಗೆ ಶ್ರಮಿಸುವ ಪೌರಕಾರ್ಮಿಕರ ಬಡಾವಣೆಯಲ್ಲಿ ಸಮಸ್ಯೆಗಳ ಸರಮಾಲೆ!

July 23, 2020

ಮೈಸೂರು, ಜು.22(ವೈಡಿಎಸ್)-`ಮೈಸೂರು ಸ್ವಚ್ಛ ನಗರಿ’ ಎಂಬ ಬಿರುದಿಗೆ ಪೌರಕಾರ್ಮಿಕರ ಶ್ರಮವೇ ಮುಖ್ಯ ಕಾರಣ ಎಂದು ಹೊಗಳುವ ಪಾಲಿಕೆ, ಅವರಿಗೇ ಮೂಲಸೌಕರ್ಯಗಳನ್ನು ಕಲ್ಪಿಸದೇ ನಿರ್ಲಕ್ಷಿಸಿದೆ.

ವಾರ್ಡ್ ನಂ.21ರ ವ್ಯಾಪ್ತಿಗೆ ಬರುವ ಕುದುರೆಮಾಳ (ಮಾನಸನಗರ)ದಲ್ಲಿ 350ಕ್ಕೂ ಹೆಚ್ಚು ಪೌರಕಾರ್ಮಿಕ ಕುಟುಂಬಗಳು ವಾಸವಿವೆ. 200ಕ್ಕೂ ಹೆಚ್ಚು ಪೌರ ಕಾರ್ಮಿಕರು ಮುಂಜಾನೆ 5 ಗಂಟೆಗೆ ಎದ್ದು ವಿವಿಧ ಬಡಾವಣೆಗಳಿಗೆ ತೆರಳಿ ನಗರದ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇವೆ. ನಮ್ಮ ಮೈಸೂರು ನಗರ ಸ್ವಚ್ಛವಾಗಿ ರಬೇಕೆಂದು ದುರ್ವಾಸನೆ ಬೀರುತ್ತಿದ್ದರೂ ಲೆಕ್ಕಿಸದೆ ಕಸವನ್ನು ಎತ್ತುತ್ತೇವೆ. ಆದರೆ, ಪಾಲಿಕೆ ನಮ್ಮ ಸಮಸ್ಯೆ ಗಳನ್ನು ಬಗೆಹರಿಸದೇ ನಿರ್ಲಕ್ಷಿಸಿದೆ. ಚರಂಡಿ, ಬೀದಿ ದೀಪ, ರಸ್ತೆ ಮತ್ತಿತರ ಮೂಲ ಸೌಕರ್ಯಗಳಿಲ್ಲದೆ ವಂಚಿತವಾಗಿದ್ದೇವೆ. ಜೋರು ಮಳೆ ಬಂದರೆ ಸಾಕು, `ಎಲ್ಲಿ ಮನೆಯೊಳಗೆ ನೀರು ನುಗ್ಗುತ್ತದೆಯೋ?’ ಎಂದು ಭಯಪಡುವಂತಾಗಿದೆ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡರು.

ಉಪಯೋಗಕ್ಕೆ ಬಾರದು: ಇಲ್ಲಿನ ಮಾರಮ್ಮ ದೇವಸ್ಥಾನದ ಬಳಿ ಸಮುದಾಯ ಭವನವಿದ್ದು, ಕಾಂಪೌಂಡ್ ಕುಸಿದು ಬಿದ್ದಿದೆ. ಮುಖ್ಯದ್ವಾರದಲ್ಲಿ ಅಳವಡಿಸಿದ್ದ ಕಬ್ಬಿಣದ ಗೇಟ್‍ಗಳು ತುಂಡಾಗಿಬಿದ್ದಿವೆ. ಒಂದು ಕಡೆಯ ಗೇಟನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಭವನದ ಸುತ್ತಲೂ ಗಿಡ-ಗಂಟಿ ಬೆಳೆದು ವಿಷಜಂತುಗಳ ಆವಾಸ ಸ್ಥಾನವಾ ಗಿದೆ. ಮುಂಭಾಗ ಬೋರ್‍ವೆಲ್ ಇದ್ದು, ದುರ್ವಾಸನೆ ಯಿಂದ ಕೂಡಿದ ಕೊಳಕು ನೀರು ಬರುತ್ತದೆ.

ಚರಂಡಿಯೇ ಇಲ್ಲ: ಇಲ್ಲಿನ ಯಾವ ಬೀದಿಯಲ್ಲೂ ಚರಂಡಿಗಳಿಲ್ಲ. ಮಳೆಯ ನೀರು ರಸ್ತೆ ಮೇಲೆಯೇ ಹರಿಯುವುದರಿಂದ ರಸ್ತೆಯೆಲ್ಲಾ ಕೆಸರು ಗದ್ದೆಯಂತಾ ಗುತ್ತದೆ. ಗೌತಮ್ ಹಾಸ್ಟೆಲ್, ಅಂಬೇಡ್ಕರ್ ಹಾಸ್ಟೆಲ್‍ನ ಯುಜಿಡಿ ಲೈನ್ ನಮ್ಮ ಬಡಾವಣೆ ಯುಜಿಡಿ ಲೈನ್‍ಗೇ ಜೋಡಿಸಿರುವುದರಿಂದ ಮಳೆಗಾಲದಲ್ಲಿ ಉಕ್ಕಿ ಹರಿ ಯುತ್ತದೆ. ಇದರಿಂದ ತುಂಬಾ ತೊಂದರೆಯಾಗುತ್ತಿದೆ.

ಗುಂಡಿಬಿದ್ದ ರಸ್ತೆಗಳು: ಈ ಬಡಾವಣೆಯಲ್ಲಿನ ಟ್ರಾನ್ಸ್ ಫಾರ್ಮರ್ ಬಳಿ ರಸ್ತೆ ಗುಂಡಿ ಬಿದ್ದಿದೆ. ಮಳೆಗಾಲದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಟ್ರಾನ್ಸ್‍ಫಾರ್ಮರ್ ಸುತ್ತ ಕಬ್ಬಿಣದ ಗ್ರಿಲ್‍ಗಳನ್ನು ಅಳವಡಿಸಿಲ್ಲ. ಮಕ್ಕಳು ಬಳಿ ಹೋದರೆ ಅವಘಡ ಸಂಭ ವಿಸುವ ಸಾಧ್ಯತೆ ಇದೆ. ಕೂಡಲೇ ಟ್ರಾನ್ಸ್‍ಫಾರ್ಮರ್ ಸುತ್ತ ಗ್ರಿಲ್ ಅಳವಡಿಸುವಂತೆ ಕ್ರಮ ಕೈಗೊಳ್ಳಿ ಎಂದು ನಿವಾಸಿಗಳು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಕುಸಿದ ಮನೆ: ಕಳೆದ ತಿಂಗಳು ಸುರಿದ ಮಳೆಗೆ ಮಾರಾ ಸ್ವಾಮಿ ಮತ್ತು ಗಣೇಶ್ ಎಂಬವರ ಮನೆಯ ಗೋಡೆ ಕುಸಿದು ಬಿದ್ದಿವೆ. ಸ್ಲಂಬೋರ್ಡ್ ಅಧಿಕಾರಿಗಳಿಗೆ ತಿಳಿಸಿ ದರೂ ಪ್ರಯೋಜನವಾಗಿಲ್ಲ. ಎರಡೂ ಕುಟುಂಬಗಳು ಸಮುದಾಯ ಭವನದಲ್ಲಿ ವಾಸಿಸುವಂತಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಇತ್ತ ಗಮನಹರಿಸಿ ಸಮಸ್ಯೆ ಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಕುರಿತು ಪಾಲಿಕೆ ಸದಸ್ಯ ವೇದಾವತಿ ಮಾತನಾಡಿ, ಮಾನಸನಗರದಲ್ಲಿ 350ಕ್ಕೂ ಹೆಚ್ಚು ಮನೆಗಳಿದ್ದು, 1200ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ರಸ್ತೆ, ಚರಂಡಿ, ಕುಡಿಯುವ ನೀರು ಮತ್ತಿತರೆ ಮೂಲ ಸೌಕರ್ಯಗಳಿ ಲ್ಲದೆ ವಂಚಿತರಾಗಿದ್ದಾರೆ. ಕೆಲ ತಿಂಗಳ ಹಿಂದೆ ಆಯುಕ್ತರು ಮತ್ತು ಇಂಜಿನಿಯರ್ ಅವರನ್ನು ಬಡಾವಣೆಗೆ ಕರೆದು ಕೊಂಡು ಹೋಗಿ ಅಲ್ಲಿನ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ಯೋಜನಾ ವರದಿಯನ್ನೂ ಸಿದ್ಧಪಡಿಸ ಲಾಗಿದೆ. ಈ ಸಮಸ್ಯೆ ಪರಿಹರಿಸಲು ಪೌರಕಾರ್ಮಿಕ ರಿಗೆ ಮೀಸಲಿಟ್ಟಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಆಯುಕ್ತರನ್ನು ಕೇಳಿದರೆ `ಹಣ ಇಲ್ಲ’ ಎಂದು ಉತ್ತರಿಸಿದರು. ಹಾಗಾದರೆ ಬಡಾವಣೆ ಸಮಸ್ಯೆ ಗಳಿಗೆ ಪರಿಹಾರವೇ ಇಲ್ಲವೇ? ಕೂಡಲೇ ಅನುದಾನ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ.

Translate »