ಗಿರಿಜನ ಆಶ್ರಮ ಶಾಲೆಯ ಶಿಕ್ಷಕರಿಗೆ ಪುನರ್ಮನನ ಕಾರ್ಯಾಗಾರ ಸಂವಹನದ ಮೂಲಕ ಗಿರಿಜನ ಮಕ್ಕಳಿಗೆ ಪಾಠ ಕಲಿಸಲು ಪ್ರೊ.ಗಂಗಾಧರ್ ಸಲಹೆ
ಮೈಸೂರು

ಗಿರಿಜನ ಆಶ್ರಮ ಶಾಲೆಯ ಶಿಕ್ಷಕರಿಗೆ ಪುನರ್ಮನನ ಕಾರ್ಯಾಗಾರ ಸಂವಹನದ ಮೂಲಕ ಗಿರಿಜನ ಮಕ್ಕಳಿಗೆ ಪಾಠ ಕಲಿಸಲು ಪ್ರೊ.ಗಂಗಾಧರ್ ಸಲಹೆ

March 16, 2021

ಮೈಸೂರು, ಮಾ.15(ಆರ್‍ಕೆಬಿ)- ವಸತಿ ಶಾಲೆಗಳ ಶಿಕ್ಷಕರು ಗಿರಿಜನರ ಮಕ್ಕಳಿಗೆ ಸಂವಹನದ ಮೂಲಕ ಪಾಠ ಮಾಡಿದರೆ ಅದು ಮಕ್ಕಳು ಗ್ರಹಿಸಲು ಸುಲಭವಾಗುತ್ತದೆ ಎಂದು ಮೈಸೂರು ವಿವಿ ಮಾನವಶಾಸ್ತ್ರ ಅಧ್ಯಯನ ವಿಭಾಗದ ಪ್ರೊ.ಎಂ.ಆರ್.ಗಂಗಾಧರ್ ಅಭಿಪ್ರಾಯಪಟ್ಟರು.

ಮೈಸೂರಿನ ಜ್ಞಾನಗಂಗಾ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಜಂಟಿಯಾಗಿ ಪರಿಶಿಷ್ಟ ಪಂಗಡ ಗಿರಿಜನ ಆಶ್ರಮ ಶಾಲೆಯಲ್ಲಿ ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಬೋಧಿಸುವ ಶಿಕ್ಷಕರಿಗೆ ಆಯೋಜಿಸಿದ್ದ ಆರು ದಿನಗಳ ಪುನರ್ಮನನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಗಿರಿಜನರ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡಿದ್ದರೂ ಗಿರಿಜನರ ಮಕ್ಕಳು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದಾರೆ. ಮಕ್ಕಳಿಗೆ ಅನುಕೂಲಕರವಾದ ಭಾಷೆ ಮತ್ತು ಶೈಲಿಯಲ್ಲಿ ಪಾಠ ಮಾಡಿದರೆ ಮಾತ್ರ ಅರ್ಥವಾಗುತ್ತದೆ. ಹಾಗಾಗಿ ಮಕ್ಕಳೊಂದಿಗೆ ಸಂವಹನ, ಸಂವಾದ ನಡೆಸುತ್ತಾ ಪಾಠ ಕಲಿಸಿದರೆ ಅವರು ಕಲಿಯಲು ಸುಲಭವಾಗಲಿದೆ ಎಂದರು.

ಅನೇಕ ಸವಾಲುಗಳ ನಡುವೆಯೂ ತಂತ್ರಜ್ಞಾನ ಕ್ಷೇತ್ರ ಬೆಳವಣಿಗೆ ಕಂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾಥಮಿಕ ಶಿಕ್ಷಣದ ಹಂತದಿಂದಲೂ ಜಾರಿಗೆ ಬರಲಿರುವ ಕಾರಣ ಅದಕ್ಕನುಗುಣವಾಗಿ ಶಿಕ್ಷಕರನ್ನು ತಯಾರು ಮಾಡಬೇಕಾಗಿದೆ. ಅದಕ್ಕಾಗಿ ಶಿಕ್ಷಕರ ಬೋಧನಾ ಶೈಲಿ ಬದಲಾಗಬೇಕು ಎಂದು ಹೇಳಿದರು.

ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಟಿ.ಟಿ.ಬಸವನಗೌಡ ಮಾತ ನಾಡಿ, ಗಿರಿಜನರ ಮಕ್ಕಳು ಶಾಲೆಯಿಂದ ಹೊರಗುಳಿಯಲು ಭಾಷೆಯ ಸಮಸ್ಯೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ತರಬೇತಿ ನೀಡಿ, ಮಕ್ಕಳಿಗೆ ಕಲಿಕೆಯ ಪ್ರಮಾಣ ಹೆಚ್ಚಿಸಬೇಕಾಗಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಗಿರಿಜನ ಆಶ್ರಮ ಶಾಲೆಯ ಶಿಕ್ಷಕರಿಗೆ ಪುನರ್‍ಮನನ ತರಬೇತಿ ನಡೆಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರು ವಿವಿ ಮಾನವಶಾಸ್ತ್ರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಚ್.ಕೆ.ಭಟ್, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಜಂಟಿ ನಿರ್ದೇಶಕ ರಾಜೇಶ್ ಜಿ.ಗೌಡ ಉಪಸ್ಥಿತರಿದ್ದರು.

Translate »