ಮೈಸೂರು, ಜು.14- ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನವು ನಗರದ 6 ಕೇಂದ್ರಗಳಲ್ಲಿ ಜು.13ರಿಂದ ಪ್ರಾರಂಭವಾಗಿದ್ದು, ಮೌಲ್ಯಮಾಪನ ಕೇಂದ್ರಗಳ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ಮೌಲ್ಯಮಾಪನ ಕಾರ್ಯ ಮುಗಿಯುವವರೆಗೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಗರ ಪೊಲೀಸ್ ಆಯುಕ್ತರು ನಿಷೇಧಾಜ್ಞೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಮೌಲ್ಯಮಾಪನ ಕೇಂದ್ರಗಳಾದ ಕುವೆಂಪುನಗರದಲ್ಲಿರುವ ಜ್ಞಾನಗಂಗಾ ಪ್ರೌಢಶಾಲೆ, ಜಯಲಕ್ಷೀಪುರಂನಲ್ಲಿರುವ ಚಿನ್ಮಯ ಪ್ರೌಢಶಾಲೆ, ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸದ್ವಿದ್ಯಾ ಪ್ರೌಢಶಾಲೆ, ಸರಸ್ವತಿಪುರಂನಲ್ಲಿರುವ ವಿಜಯ ವಿಠ್ಠಲ ಪ್ರೌಢಶಾಲೆ, ವಿ.ವಿ.ಮೊಹಲ್ಲಾ ದಲ್ಲಿರುವ ನಿರ್ಮಲ ಪ್ರೌಢಶಾಲೆ ಹಾಗೂ ಎನ್.ಆರ್.ಮೊಹಲ್ಲಾದಲ್ಲಿರುವ ಸೆಂಟ್ ಫಿಲೋಮಿನಾ ಪ್ರೌಢಶಾಲೆಯ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಪರೀಕ್ಷಾ ಮೌಲ್ಯಮಾಪನ ಸಿಬ್ಬಂದಿಗಳನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಸಂಚರಿಸಬಾರದು ಮತ್ತು ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯ ಬಾರದು ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶಿಸಿದ್ದಾರೆ.