ಕನ್ನಡ, ಸಾಹಿತ್ಯ ಚಟುವಟಿಕೆಗೆ ಉತ್ತೇಜನೆ: ಪಾರದರ್ಶಕ ಪರಿಷತ್ತು ಕನಸು
ಮೈಸೂರು

ಕನ್ನಡ, ಸಾಹಿತ್ಯ ಚಟುವಟಿಕೆಗೆ ಉತ್ತೇಜನೆ: ಪಾರದರ್ಶಕ ಪರಿಷತ್ತು ಕನಸು

November 21, 2021

ಮೈಸೂರು, ನ.20 (ಪಿಎಂ)- ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗುಂಪುಗಾರಿಕೆಯಿಂದ ಮೌಲ್ಯ ಕಳೆದುಕೊಂಡಿದ್ದು, ಗುಂಪುಗಾರಿಕೆ ಒಡೆದು ಹಾಕಿ, ಪರಿಷತ್ ಅನ್ನು ಪಾರದರ್ಶಕವಾಗಿ ಕಟ್ಟುವ ಉದ್ದೇಶದಿಂದ ಕಸಾಪ ಜಿಲ್ಲಾ ಸ್ಥಾನಕ್ಕೆ ಸ್ಪರ್ಧಿಸಿದ್ದು, ಮತದಾರ ಬಂಧುಗಳು ತಮ್ಮನ್ನು ಬೆಂಬಲಿಸಬೇಕೆಂದು ಹಿರಿಯ ಸಾಹಿತಿ ಬನ್ನೂರು ಕೆ.ರಾಜು ಕೋರಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪರಿಷತ್ ಆಗಿ ಉಳಿದಿಲ್ಲ. ಅದೊಂದು ಅಂಗಡಿಯಾಗಿದೆ. ಒಂದು ಅವಧಿ ಯಲ್ಲಿ ನೀನು ವ್ಯಾಪಾರ ಮಾಡು, ಮುಂದಿನ ಅವಧಿಯಲ್ಲಿ ನಾ ಮಾಡಿಕೊಳ್ಳುತ್ತೇನೆ ಎಂಬಂತಾಗಿದೆ ಎಂದು ದೂರಿದರು. ಗುಂಪುಗಾರಿಕೆಯಿಂದ ಕಸಾಪ ಮೌಲ್ಯ ಕುಸಿದಿದೆ. ಯಾವ ರಾಜಕೀಯ ಚುನಾವಣೆಗೂ ಕಡಿಮೆ ಇಲ್ಲ ಎಂಬಂತೆ ಪರಿಷತ್ ಚುನಾವಣೆ ಯಲ್ಲಿ ಮತದಾರರಿಗೆ ಹಣ ಹಾಗೂ ಉಡುಗೊರೆ ಹಂಚಲಾಗುತ್ತಿದೆ. ಪರಿಷತ್ ಅನ್ನು ಪರಿಷತ್ ಆಗಿಯೇ ಉಳಿಸಿ ಕನ್ನಡ ಭಾಷೆ ಮತ್ತು ಸಾಹಿತ್ಯ ಚಟುವಟಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಟಿಬದ್ಧನಾಗಿ ದುಡಿಯುತ್ತೇನೆ. ಪರಿಷತ್ ಸದಸ್ಯರು ಇಂತಹ ಸಮಯದಲ್ಲಿ ಜಾಗೃತರಾಗಬೇಕು. ಸರಿಯಾದ ಅಭ್ಯರ್ಥಿಗೆ ಮತ ನೀಡಬೇಕು. ಮೈಸೂರಿ ನಲ್ಲಿ ನಡೆದ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದ ಲೆಕ್ಕವನ್ನು ಇನ್ನೂ ಕೊಡದೇ ಇರುವುದು ಕಸಾಪ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ ಎಂದು ಆಪಾದಿಸಿದರು.

ಸಾಹಿತಿ ಡಿ.ಎನ್.ಕೃಷ್ಣಮೂರ್ತಿ ಮಾತನಾಡಿ, ಒಬ್ಬ ಸಾಹಿತಿ ಕಸಾಪ ಅಧ್ಯಕ್ಷರಾದರೆ, ಪರಿಷತ್ ಅನ್ನು ಉತ್ತಮವಾಗಿ ಕಟ್ಟಬಹುದು. ಹೀಗಾಗಿ ಪೂರ್ಣ ಪ್ರಮಾಣದ ಸಾಹಿತಿ, ಅಂಕಣಕಾರ ಹಾಗೂ ಉತ್ತಮ ಸಂಘಟನಕಾರರೂ ಆದ ಬನ್ನೂರು ಕೆ.ರಾಜು ಅವರನ್ನು ಬೆಂಬಲಿಸಬೇಕೆಂದು ಮತದಾರರಲ್ಲಿ ಕೋರಿದರು. ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸಿರುವವರ ಪೈಕಿ ಬನ್ನೂರು ರಾಜು ಒಬ್ಬರೇ ಏಕೈಕ ಸಾಹಿತಿ. ಪರಿಪೂರ್ಣವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವ ಬನ್ನೂರು ಕೆ.ರಾಜು ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು. ಹೋರಾಟಗಾರ ನಾಲಾಬೀದಿ ರವಿ, ಸರ್ಕಾರಿ ಶಿಕ್ಷಕರ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗೇಶ್, ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ಕೆ.ಮಹೇಶ್, ಪತ್ರಕರ್ತ ಹೊಮ್ಮ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

Translate »