ಮೈಸೂರು, ಆ.12(ಆರ್‍ಕೆಬಿ)- ಅಕ್ಷರ ದಾಸೋಹ ಬಿಸಿಯೂಟ ತಯಾರಕರಿಗೆ ಕಳೆದ ಏಪ್ರಿಲ್‍ನಿಂದ ಜುಲೈವರೆಗಿನ (4 ತಿಂಗಳ) ವೇತನ ಇನ್ನೂ ಪಾವತಿಯಾಗಿಲ್ಲ. ಸರ್ಕಾರ ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಜಿಲ್ಲಾ ಸಮಿತಿ ಆಶ್ರಯದಲ್ಲಿ ಬುಧವಾರ ಮೈಸೂರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ತಯಾರಕರು 17 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿ ದ್ದಾರೆ. ರಾಜ್ಯದ 1.18 ಲಕ್ಷ ಬಿಸಿಯೂಟ ತಯಾರಕರು ಕನಿಷ್ಠ ವೇತನದ ಕಾಯ್ದೆಗೆ ಒಳಪಡದೆ ಗೌರವ ಸಂಭಾವನೆಯಾಗಿ ಮುಖ್ಯ ಅಡುಗೆಯವರು 2700 ರೂ., ಸಹಾ ಯಕರು 2600 ರೂ. ಪಡೆಯುತ್ತಿದ್ದಾರೆ. ಈ ಸಂಭಾವನೆಯಲ್ಲಿ ಬಿಸಿಯೂಟ ತಯಾ ರಕರು ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂದರ್ಭ ಜೀವನ ನಿರ್ವಹಿಸುವುದು ಕಷ್ಟವಾಗಿದೆ. ಹೀಗಾಗಿ ಕನಿಷ್ಠ ವೇತನ ಕೊಡಬೇಕು ಎಂದು ಆಗ್ರಹಿಸಿದರು.
ಕಳೆದ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಕೋವಿಡ್-19 ಪರಿಣಾಮ ಬಿಸಿಯೂಟ ತಯಾರಕರು ತೀವ್ರ ಸಂಕಷ್ಟ ಅನುಭವಿಸಿ ದ್ದಾರೆ. ಇತ್ತ ಶಾಲೆಗಳೂ ಇಲ್ಲ, ಅತ್ತ ಬೇರೆ ಕೆಲಸಗಳೂ ಸಿಗದೇ ಪರಿತಪಿಸುತ್ತಿದ್ದಾರೆ. ಲಾಕ್‍ಡೌನ್ ಸಂದರ್ಭ ಇತರೆ ಅಸಂಘ ಟಿತ ಕಾರ್ಮಿಕರಿಗೆ ಸರ್ಕಾರ 5000 ರೂ. ಪರಿಹಾರ ನೀಡಿದಂತೆ ಬಿಸಿಯೂಟ ತಯಾರಕರಿಗೂ ನೀಡಬೇಕಿತ್ತು. ಆದರೆ ಸರ್ಕಾರ ನಮ್ಮನ್ನು ಪೂರ್ಣ ನಿರ್ಲಕ್ಷಿಸಿತು ಎಂದು ಪ್ರತಿಭಟನಾಕಾರರು ದೂರಿದರು.
ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಕೆ.ಜೆ. ಸೋಮರಾಜೇ ಅರಸ್, ಸಂಚಾಲಕಿ ವೈ. ಮಹದೇವಮ್ಮ ಇನ್ನಿತರರು ಉಪಸ್ಥಿತರಿದ್ದರು.