ಮೈಸೂರು, ಆ.12- `ಧರ್ಮಬೋಧನೆ ಮೂಲಕ ಸುಸಂಸ್ಕøತ ಸಮಾಜದ ನಿರ್ಮಾಣಕ್ಕೆ ಸದಾಕಾಲ ತಮ್ಮನ್ನೇ ತಾವು ಅರ್ಪಿಸಿ ಕೊಳ್ಳುವ ಮಹಾನುಭಾವರೇ ಗುರುಗಳು’ ಎಂದು ಸಂಸ್ಕøತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು.
ರಾಘವೇಂದ್ರಸ್ವಾಮಿಗಳ 349ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ವತಿಯಿಂದ ಪ್ರಕಟಿಸಿರುವ ಸಂಸ್ಕøತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅವರ `ವಂದೇ ಗುರುಪರಂಪರಾಮ್’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಜನಸಮುದಾಯ ಹಾಗೂ ಶಿಷ್ಯರ ಒಳಿತಿಗಾಗಿ, ತಮ್ಮ ಧ್ಯಾನ ತಪಸ್ಸನ್ನು ಧಾರೆಯೆರೆಯುವವರೇ ಗುರುಗಳು. ವಿದ್ಯೆ, ವಿನಯ, ವಿವೇಕದ ವಿಶಿಷ್ಟ ಪಲ್ಲವದ ಮೂಲಕ ಶಿಷ್ಯ ಕೋಟಿಯ ಜ್ಞಾನದೀವಿಗೆಯನ್ನು ಬೆಳಗಿಸುವ ಶಕ್ತಿಯೇ ಗುರುಗಳು. `ಏಳಿ, ಎದ್ದೇಳೀ, ಗುರಿ ಮುಟ್ಟುವವರೆಗೂ ನಿಲ್ಲದಿರಿ’ ಎಂಬ ಜಾಗೃತಿ ಕಹಳೆಯನ್ನು ಮೊಳಗಿಸುವ ದೇವ ದುಂದುಭಿಯೇ ಗುರುಗಳು. ಧರ್ಮಬೋಧನೆಯ ಮೂಲಕ ಸುಸಂಸ್ಕøತ ಸಮಾಜದ ನಿರ್ಮಾಣಕ್ಕೆ ಶ್ರಮಿಸುವ ಮಹಾನುಭಾವರೇ ಗುರುಗಳೆಂದು ಸ್ಮರಿಸಿಕೊಂಡರು.
ಡಾ.ಗುರುರಾಜ ಪೋಶೆಟ್ಟಿಹಳ್ಳಿ ಅವರ ಅಮಿತವಾದ ಜೀವನೋ ತ್ಸಾಹ ಬೆರಗುಗೊಳಿಸುವಂತದ್ದು. ಸಾರ್ಥಕ ಕಾರ್ಯಗಳಲ್ಲಿ ಸದಾ ತೊಡ ಗಿಸಿಕೊಂಡು ಎಲ್ಲವನ್ನೂ ಅಚ್ಚುಕಟ್ಟಾಗಿ ಸಂಪನ್ನಗೊಳಿಸುವ ಕಲೆ ಅವರಿಗೆ ಸಿದ್ಧಿಸಿದೆ. `ವಂದೇ ಗುರುಪರಂಪರಾಮ್’ ಕೃತಿ ಸಹೃದಯರ ವಿಶೇಷ ಮನ್ನಣೆಗೆ ಪಾತ್ರವಾಗಲಿ. ಇಂತಹ ಮತ್ತಷ್ಟು ಕೃತಿಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲೆಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಲೇಖಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಇನ್ನಿತರರಿದ್ದರು.